ADVERTISEMENT

ಮಳವಳ್ಳಿ: ಪುಣ್ಯಕ್ಷೇತ್ರದಲ್ಲಿ ಪ್ರಾಧಿಕಾರ ರಚನೆಗೆ ವಿರೋಧ

ಮಳವಳ್ಳಿಯ ಬಿ.ಜಿ.ಪುರ ಮಂಟೇಸ್ವಾಮಿ ಮಠದಿಂದ ‘ಅಂಚೆ ಪತ್ರ ಚಳವಳಿ’ ಆರಂಭ

ಟಿ.ಕೆ.ಲಿಂಗರಾಜು
Published 9 ಸೆಪ್ಟೆಂಬರ್ 2025, 4:45 IST
Last Updated 9 ಸೆಪ್ಟೆಂಬರ್ 2025, 4:45 IST
ಮಳವಳ್ಳಿ ತಾಲ್ಲೂಕಿನ ಬಿ.ಜಿ.ಪುರದ ಮಂಟೇಸ್ವಾಮಿ ಮಠದಲ್ಲಿ ಬಿ.ಪಿ. ಭರತ್ ರಾಜೇ ಅರಸು ನೇತೃತ್ವದಲ್ಲಿ ಪ್ರಾಧಿಕಾರ ರಚನೆ ವಿರೋಧಿಸಿ ನೀಲಗಾರರು ಹಾಗೂ ಭಕ್ತರು ಅಂಚೆ ಪತ್ರ ಚಳವಳಿ ನಡೆಸಿದರು
ಮಳವಳ್ಳಿ ತಾಲ್ಲೂಕಿನ ಬಿ.ಜಿ.ಪುರದ ಮಂಟೇಸ್ವಾಮಿ ಮಠದಲ್ಲಿ ಬಿ.ಪಿ. ಭರತ್ ರಾಜೇ ಅರಸು ನೇತೃತ್ವದಲ್ಲಿ ಪ್ರಾಧಿಕಾರ ರಚನೆ ವಿರೋಧಿಸಿ ನೀಲಗಾರರು ಹಾಗೂ ಭಕ್ತರು ಅಂಚೆ ಪತ್ರ ಚಳವಳಿ ನಡೆಸಿದರು   

ಮಳವಳ್ಳಿ: ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಸೇರಿದಂತೆ ಐದು ಪುಣ್ಯ ಕ್ಷೇತ್ರಗಳಿಗೆ ರಾಜ್ಯ ಸರ್ಕಾರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮುಂದಾಗಿದ್ದು, ಮತ್ತೊಂದೆಡೆ ಪ್ರಾಧಿಕಾರ ರಚನೆಯ ವಿರುದ್ಧ ಮಂಟೇಸ್ವಾಮಿ ಭಕ್ತ ಸಮೂಹ ‘ಅಂಚೆ ಪತ್ರ ಚಳವಳಿ’ ಮೂಲಕ ಹೋರಾಟ ಆರಂಭಿಸಿದ್ದಾರೆ.

ಚಿಕ್ಕಲ್ಲೂರು, ಕಪ್ಪಡಿ, ಬಿ.ಜಿ.ಪುರ, ಕುರುಬನಕಟ್ಟೆ ಹಾಗೂ ಆದಿಹೊನ್ನಾಯಕನಹಳ್ಳಿ ಕ್ಷೇತ್ರಗಳಿಗೆ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರಬೆಟ್ಟದಲ್ಲಿ ಏ.24ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರವು ನಿರ್ಧರಿಸಿತ್ತು.

ಅದರಂತೆ ಪ್ರಾಧಿಕಾರ ರಚಿಸಲು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಮಾಲಾ ತಾತ್ವಿಕ ಅನುಮೋದನೆ ನೀಡಿ ಆದೇಶಿಸಿದ್ದರು. ಸರ್ಕಾರ ಈ ನಿರ್ಧಾರದ ವಿರುದ್ಧ ಮೈಸೂರಿನ ಸಂಸದ ಯದುವೀರ್ ಚಾಮರಾಜ ಕೃಷ್ಣದತ್ತ ಒಡೆಯರ್ ಅವರು ಹಾಗೂ ಐದು ಪುಣ್ಯ ಕ್ಷೇತ್ರಗಳ ಮುಖ್ಯಸ್ಥರು ಸೇರಿದಂತೆ ನೀಲಗಾರರು ಮತ್ತು ಭಕ್ತರು ವಿರೋಧ ವ್ಯಕ್ತಪಡಿಸಿದ್ದರು.

ADVERTISEMENT

ಈ ಪುಣ್ಯಕ್ಷೇತ್ರಗಳ ಆಚರಣೆ, ಸಂಪ್ರದಾಯ, ಸಂಸ್ಕೃತಿ, ಆಚಾರ, ವಿಚಾರಗಳು ಹಾಗೂ ಇತಿಹಾಸ ಲಕ್ಷಾಂತರ ಭಕ್ತರ ನಂಬಿಕೆಗಳಾಗಿ ಉಳಿದಿವೆ. ನೀಲಗಾರರು ತಮ್ಮ ನಂಬಿಕೆಗಳ ಮೇಲೆ ತಲತಲಾಂತರಗಳಿಂದ ಈ ಕ್ಷೇತ್ರಗಳ ಪಾವಿತ್ರ್ಯತೆ ಕಾಪಾಡಿಕೊಂಡು ಬಂದಿದ್ದಾರೆ. ಅಲ್ಲದೇ ಪುಣ್ಯ ಕ್ಷೇತ್ರಗಳನ್ನು ಎರಡು ಅನುವಂಶಿಕ ಕುಟುಂಬಗಳು ಅತೀವ ಶ್ರದ್ಧೆ, ಭಕ್ತಿ, ನಂಬಿಕೆಗಳಿಂದ ರಕ್ಷಿಸುತ್ತಾ, ಪೋಷಿಸಿಕೊಂಡು ಬರುತ್ತಿವೆ.

ಮಠದ ಮಠಾಧಿಪತಿಗಳನ್ನಾಗಲೀ, ಪಾಲಕರನ್ನಾಗಲೀ ಯಾರನ್ನೂ ಗಣನೆಗೆ ತೆಗೆದುಕೊಳ್ಳದೇ ಸರ್ಕಾರ ಏಕಾಏಕಿ ಪ್ರಾಧಿಕಾರ ರಚನೆಗೆ ಮುಂದಾಗಿರುವುದನ್ನು ಭಕ್ತರು ಹಾಗೂ ಮಠದ ಮುಖ್ಯಸ್ಥರು ವಿರೋಧಿಸಿ ಹೋರಾಟ ಆರಂಭಿಸಿದ್ದಾರೆ.

ಹೋರಾಟದ ಭಾಗವಾಗಿ ಮಳವಳ್ಳಿ ತಾಲ್ಲೂಕಿನ ಬೊಪ್ಪೇಗೌಡನಪುರದ ಮಂಟೇಸ್ವಾಮಿ ಮಠದಲ್ಲಿ ಈಚೆಗೆ ಸಭೆ ನಡೆಸಿದ ನೀಲಗಾರರು ಹಾಗೂ ಭಕ್ತರು ಮಠದ ಬಿ.ಪಿ. ಭರತ್ ರಾಜೇ ಅರಸು ಅವರ ನೇತೃತ್ವದಲ್ಲಿ ಸರ್ಕಾರಕ್ಕೆ ಪತ್ರ ಬರೆದು ಅಂಚೆ ಪತ್ರ ಚಳವಳಿ ಆರಂಭಿಸಿದ್ದಾರೆ.

ಮುಂದಿನ ದಿನಗಳಲ್ಲಿ ಮಠದ ಪೀಠಾಧಿಪತಿ ಜ್ಞಾನನಂದ ಚನ್ನರಾಜೇ ಅರಸು, ಮಳವಳ್ಳಿಯ ಮಠದ ಎಂ.ಎಸ್.ವರ್ಚಸ್ವೀ ಶ್ರೀಕಂಠ ಸಿದ್ಧಲಿಂಗರಾಜೇ ಅರಸು ಮತ್ತು ಬಿ.ಪಿ.ಭರತ್ ರಾಜೇ ಅರಸು ಅವರ ನೇತೃತ್ವದಲ್ಲಿ ಮೈಸೂರಿನ ಸಂಸದ ಯದುವೀರ್ ಚಾಮರಾಜ ಕೃಷ್ಣದತ್ತ ಒಡೆಯರ್ ಅವರನ್ನು ಭೇಟಿ ಮಾಡಿ ಹೋರಾಟದ ರೂಪುರೇಷೆಗೆ ನಿರ್ಧರಿಸಲಾಗಿದೆ.

‘ಅಭಿವೃದ್ಧಿಗೆ ಸಹಕಾರ ನೀಡಲಿ’

ಈ ಐದು ಪುಣ್ಯಕ್ಷೇತ್ರಗಳು ಹಿಂದಿನಿಂದಲೂ ರಾಜಕೀಯದಿಂದ ದೂರವಿದ್ದು ಭಕ್ತರ ನಂಬಿಕೆ ಪ್ರಾಚೀನ ಧಾರ್ಮಿಕ ಮತಗಳು ಸಂಸ್ಥೆಗಳ ಸ್ವಾಯತ್ತತೆಯನ್ನು ಗೌರವಿಸಿಕೊಂಡು ಬಂದಿವೆ. ಈಗಾಗಲೇ ಕ್ಷೇತ್ರವಾರು ಭಕ್ತರು ಹಾಗೂ ನೀಲಗಾರರು ಹೋರಾಟ ಹಾದಿ ಹಿಡಿಯಲು ಮುಂದಾಗಿದ್ದಾರೆ. ಅಭಿವೃದ್ಧಿಗೆ ಸ್ಥಳೀಯ ಸಂಸ್ಥೆಗಳು ಸಹಕಾರ ನೀಡಲಿ. ಪ್ರಾಧಿಕಾರ ರಚನೆಯ ನಿರ್ಧಾರವನ್ನು ಕೈಬಿಡಬೇಕು ಎಂದು ಮಳವಳ್ಳಿ ಆದಿಹೊನ್ನಾಯಕನಹಳ್ಳಿ ಹಾಗೂ ಕಪ್ಪಡಿ ಕ್ಷೇತ್ರಗಳ ಮಠಾಧಿಪತಿ ಎಂ.ಎಲ್. ವರ್ಚಸ್ವೀ ಶ್ರೀಕಂಠ ಸಿದ್ದಲಿಂಗರಾಜೇ ಅರಸ್ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.