
ಕಿಕ್ಕೇರಿ: ‘ಹೋಬಳಿಯ ಸಾಸಲು ಕ್ಷೇತ್ರದ ದೇಗುಲದಿಂದ ವಾರ್ಷಿಕವಾಗಿ ಲಕ್ಷಾಂತರ ರೂಪಾಯಿ ಮುಜರಾಯಿ ಇಲಾಖೆಗೆ ಸೇರುತ್ತದೆ. ಕನಿಷ್ಠ ಸೌಲಭ್ಯವನ್ನು ಇಲಾಖೆಯಿಂದ ನೀಡದೆ ಆದಾಯದ ಹಣದಲ್ಲಿ ನಕಲಿ ಬಿಲ್ ತಯಾರಿಸಿಕೊಂಡು ಭ್ರಷ್ಟಾಚಾರ ಎಸಗುತ್ತಿದ್ದಾರೆ’ ಎಂದು ಗ್ರಾಮಸ್ಥರು ದೂರಿದರು.
ಶಾಸಕ ಎಚ್.ಟಿ. ಮಂಜು ಅಧ್ಯಕ್ಷತೆಯಲ್ಲಿ ಮಂಗಳವಾರ ದೇಗುಲ ಅಭಿವೃದ್ಧಿ, ಸಮಸ್ಯೆ ಕುರಿತು ಜರುಗಿದ ಸಭೆಯಲ್ಲಿ ಗ್ರಾಮಸ್ಥರು ಹತ್ತು ಹಲವು ಸಮಸ್ಯೆ ತೋಡಿಕೊಂಡರು.
‘ಮೂರ್‍ನಾಲ್ಕು ವರ್ಷದಿಂದ ಜೋಡಿ ರಥ ಹಾಳಾಗಿದೆ ಎಂದು ಜಾತ್ರೆ ನಡೆದಿಲ್ಲ. ಹೊಸದಾಗಿ ನಿರ್ಮಿಸುತ್ತಿರುವ ರಥಗಳಿಗೆ ಬಳಸಿರುವ ಮರ ಕಳಪೆಯಾಗಿದೆ. ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲ ನವೀಕರಣಕ್ಕಾಗಿ ನಿರ್ಮಿಸಿರುವ 2 ಬಾಲಾಲಯ ಗುಡಿಯನ್ನು ಗ್ರಾಮಸ್ಥರ ಹಣದಿಂದ ನಿರ್ಮಿಸಲಾಗಿದೆ. ಆದರೆ ಇದು ಮುಜರಾಯಿ ಇಲಾಖೆಯಿಂದ ನಿರ್ಮಿಸಿದೆ ಎಂದು ಲಕ್ಷಾಂತರ ರೂಪಾಯಿ ದುರ್ಬಳಕೆಯಾಗಿದೆ. ದೇಗುಲದ ಹುಂಡಿಯ ಗೋಲಕದಲ್ಲಿ ಸರಾಗವಾಗಿ ಹಣ ತೆಗೆಯಬಹುದಾಗಿದೆ. ಸುರಕ್ಷತೆ, ಭದ್ರತೆ ಇಲ್ಲವಾಗಿದೆ. ಭಕ್ತರಿಗೆ ತಂಗುದಾಣ, ಬಟ್ಟೆ ಬದಲಿಸಿಕೊಳ್ಳಲು ಸೂಕ್ತ ಕೊಠಡಿ ಇಲ್ಲ’ ಎಂದು ಆರೋಪಿಸಿದರು.
ಎಲ್ಲವನ್ನು ಆಲಿಸಿದ ಶಾಸಕ ಎಚ್.ಟಿ. ಮಂಜು, ‘ದೇಗುಲದ ಹಣದಲ್ಲಿ ಲೋಪವಾಗಿದ್ದರೆ ತನಿಖೆ ಮಾಡಿಸಲಾಗುವುದು. ದೇಗುಲದ ಅಭಿವೃದ್ಧಿಗಾಗಿ ಒಂದು ಸಮಿತಿ ರಚಿಸಲಾಗುವುದು’ಎಂದರು.
ರಥ ನಿರ್ಮಾಣದಲ್ಲಿ ಗುಣಮಟ್ಟ, ದೇಗುಲ ನಿರ್ಮಾಣ, ಯಾತ್ರಿನಿವಾಸ ವಿಳಂಬವಾಗುತ್ತಿರುವುದಕ್ಕೆ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಕಾರಣ ಕೇಳಿದರು. ತ್ವರಿತವಾಗಿ ಸರಿಪಡಿಸಿ ದೇಗುಲ ಅಭಿವೃದ್ಧಿಗೆ ಶ್ರಮಿಸಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮುಜರಾಯಿ ಅಧಿಕಾರಿ ಅಶೋಕ್, ಉಪತಹಶೀಲ್ದಾರ್ ವೀಣಾ, ರಾಜಸ್ವ ನಿರೀಕ್ಷಕ ಡಿ.ಆರ್. ನರೇಂದ್ರ, ಗ್ರಾಮ ಆಡಳಿತಾಧಿಕಾರಿ ತಿಪ್ಪೇಶ್, ಐಕನಹಳ್ಳಿ ಗ್ರಾಪಂ ಪಿಡಿಒ ವಿಜಯ್, ಗ್ರಾಮ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.