
ಮದ್ದೂರು: ‘ದೇವಸ್ಥಾನಗಳು ಭಕ್ತಿ ಭಾವ, ಸಂಸ್ಕೃತಿಗಳ ನೆಲೆಯಾಗಿದ್ದು, ದೇವರ ಆರಾಧನೆಯಿಂದ ನಮಗೆ ಒಳಿತಾಗುವುದರ ಜೊತೆಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ’ ಎಂದು ಶಾಸಕ ಕೆ.ಎಂ. ಉದಯ್ ತಿಳಿಸಿದರು.
ತಾಲ್ಲೂಕಿನ ದೊಡ್ಡ ಅಂಕನಹಳ್ಳಿಯಲ್ಲಿ ಸೋಮವಾರ ಹುಚ್ಚಮ್ಮ ದೇವಿ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
‘ನಾಗರಿಕತೆಯ ಭರಾಟೆಯಲ್ಲಿ ನಮ್ಮ ಧಾರ್ಮಿಕ ನಂಬಿಕೆಗಳು, ಸಂಸ್ಕಾರ, ಸಂಸ್ಕೃತಿ ನಶಿಸಿಹೋಗುತ್ತಿದ್ದು, ದೇವಾಲಯಗಳನ್ನು ವ್ಯವಸ್ಥಿತ ರೀತಿಯಲ್ಲಿ ನೋಡಿಕೊಳ್ಳಬೇಕು’ ಎಂದರು.
‘ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಗ್ರಾಮಗಳು ಅಭಿವೃದ್ಧಿ ಹೊಂದುತ್ತವೆ. ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ಪ್ರತಿಯೊಬ್ಬರು ಮನಗಾಣಬೇಕು’ ಎಂದರು.
ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ‘ದೇಹ ಅಶುದ್ಧವಾದರೆ ಸ್ನಾನ ಮಾಡಿ ಸ್ವಚ್ಛಗೊಳ್ಳುವಂತೆ ಮನಸ್ಸಿನ ಮಾಲಿನ್ಯವನ್ನು ತೊಡೆಯುವಲ್ಲಿ ದೇವಾಲಯಗಳ ಪಾತ್ರ ಮಹತ್ವದ್ದಾಗಿದೆ’ ಎಂದರು.
‘ಬದುಕಿನ ಜಂಜಾಟದಲ್ಲಿ ಮಲಿನಗೊಂಡ ಮನಸ್ಸನ್ನು ಶುದ್ಧಗೊಳಿಸಿ ಶಾಂತಿ, ನೆಮ್ಮದಿ ನೀಡಿ ಸಂತೈಸುವ ತಾಣ ದೇವಾಲಯಗಳಾಗಿವೆ, ದೇವಾಲಯಗಳು ನಮ್ಮ ಧಾರ್ಮಿಕ ಆಚರಣೆಯ ಕೇಂದ್ರಗಳಾಗಿವೆ’ ಎಂದರು.
‘ಮನುಷ್ಯನ ತನ್ನ ಜೀವಿತಾವಧಿಯಲ್ಲಿ ಗಳಿಸುವ ಮತ್ತು ಕಳೆದುಕೊಳ್ಳುವ ಯಾವುದೇ ಆಸ್ತಿ, ಹಣ ಅವನ ಬದುಕನ್ನು ಸಮಾಜಕ್ಕೆ ತೋರಿಸುವ ಕೆಲಸ ಮಾಡದು. ಬದಲಾಗಿ ಸಮಾಜಮುಖಿ ಚಿಂತನೆ, ಸ್ವಯಂಪ್ರೇರಿತವಾಗಿ ತೊಡಗುವ ಮಹಾನ್ ಕಾರ್ಯಗಳಲ್ಲಿ ನೆರವಾದವರಿಗೆ ದೇವರು ಹೆಚ್ಚಿನ ಶಕ್ತಿ ನೀಡುತ್ತಾನೆ’ ಎಂದರು.
ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮಿ ಮಾತನಾಡಿದರು. ಭಕ್ತರಿಗೆ ಅನ್ನಸಂರ್ಪಣೆ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆ ಸೇರಿದಂತೆ ವಿವಿಧ ಭಾಗಗಳ ಭಕ್ತರು ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಾಜಿ ಸಚಿವ ಗೋಪಾಲಯ್ಯ, ಕದಂಬ ಜಂಗದ ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಬೋರಯ್ಯ, ಪ್ರಸನ್ನ, ರವಿ, ಶೇಖರ್, ನವೀನ್, ಧರ್ಮವೀರ್, ಗ್ರಾಮ ಪಂಚಾಯಿತಿ ಸದಸ್ಯ ತಮ್ಮಯ್ಯ, ಶಿವು, ಆನಂದ್, ಶರತ್, ಚಿಕ್ಕಮೊಗ ಸೇರಿದಂತೆ ಗ್ರಾಮದ ಮುಖಂಡರು, ದೇವಸ್ಥಾನದ ಪದಾಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.