ADVERTISEMENT

ಕೆಆರ್‌ಎಸ್‌ನಲ್ಲಿ ಭಯ ಹುಟ್ಟಿಸಿದ ಪ್ರಳಯ ರೂಪಿ ಭೀಕರ ಬಿರುಗಾಳಿ!

​ಪ್ರಜಾವಾಣಿ ವಾರ್ತೆ
Published 29 ಮೇ 2023, 16:30 IST
Last Updated 29 ಮೇ 2023, 16:30 IST
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಸುತ್ತಮುತ್ತ ಸೋಮವಾರ ಸಂಜೆ ಬೀಸಿದ ಭೀಕರ ಬಿರುಗಾಳಿಗೆ ಕೆಆರ್‌ಎಸ್‌ ಗ್ರಾಮದ ಬಜಾರ್‌ ಲೈನ್‌ನ ಸರಸ್ವತಿ ಎಂಬವರ ಮನೆ ಛಾವಣಿ ಹಾರಿ ಹೋಗಿದೆ
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಸುತ್ತಮುತ್ತ ಸೋಮವಾರ ಸಂಜೆ ಬೀಸಿದ ಭೀಕರ ಬಿರುಗಾಳಿಗೆ ಕೆಆರ್‌ಎಸ್‌ ಗ್ರಾಮದ ಬಜಾರ್‌ ಲೈನ್‌ನ ಸರಸ್ವತಿ ಎಂಬವರ ಮನೆ ಛಾವಣಿ ಹಾರಿ ಹೋಗಿದೆ   

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್‌ ಆಸುಪಾಸಿನಲ್ಲಿ ಸೋಮವಾರ ಸಂಜೆ ಬೀಸಿದ ಭೀಕರ ಬಿರುಗಾಳಿ ಸಹಿತ ಮಳೆಗೆ ಜನರು ಭಯ ಭೀತರಾದರು.

ಸುಮಾರು 15 ನಿಮಿಷಗಳ ಕಾಲ ಭರ್‌....ಎಂಬ ಸದ್ದಿನೊಡನೆ, ನೂರಾರು ಕಿ.ಮೀ. ವೇಗದಲ್ಲಿ ಬೀಸಿದ ಬಿರುಗಾಳಿ ಜನರನ್ನು ತಲ್ಲಣಗೊಳಿಸಿತು. ಬಿರುಗಾಳಿ ಬೀಸಲು ಆರಂಭಿಸುತ್ತಿದ್ದಂತೆಯೇ ರಸ್ತೆಯಲ್ಲಿದ್ದ ಜನರು ಮನೆ, ಅಂಗಡಿಗಳತ್ತ ದೌಡಾಯಿಸಿದರು. ಜನರ ಕಣ್ಣೆದುರೇ ಮರಗಳು ಮತ್ತು ಮರದ ರೆಂಬೆಗಳು ಲಟ ಲಟನೆ ಮುರಿದು ಬಿದ್ದವು. ವಿದ್ಯುತ್‌ ಕಂಬಗಳ ಧರೆಗುರುಳಿದವು. ಕೆಲವು ವಿದ್ಯುತ್‌ ಕಂಬಗಳು ಮರಗಳ ಮೇಲೆ ಬಿದ್ದವು. ವಿದ್ಯುತ್‌ ತಂತಿಗಳು ರಸ್ತೆಗಳ ಮೇಲೆ ಬಿದ್ದುದರಿಂದ ಜನರು ಮತ್ತಷ್ಟು ಭೀತರಾದರು. ಜೀವ ಕೈಯಲ್ಲಿಡಿದು ಕುಳಿತರು. ಕೆಲವೆಡೆ ಮನೆಗಳ ಮಾಡುಗಳು ಹಾರಿ ಹೋದವು. ಮನೆಯ ಒಳಗಿದ್ದ ಮಕ್ಕಳು, ಮಹಿಳೆಯರು ಚೀರಾಡಿದರು.

ಸಂತೆ ಮೈದಾನದ ಹತ್ತಿರುವ ಅಂಗಡಿಗಳ ಮಾಡುಗಳು ಕೂಡ ಹಾರಿ ಹೋದವು. ಆಟೋ ಮೇಲೆ ಅಂಗಡಿಯ ಚಾವಣಿ ಬಿದ್ದು ಚಾಲಕ ಕಲೂದಲೆಳೆ ಅಂತರದಲ್ಲಿ ಪಾರಾದರು. ಕೆಆರ್‌ಎಸ್‌ ಅಣೆಕಟ್ಟೆಯ ದಕ್ಷಿಣ ದ್ವಾರದ ಬಳಿ, ಕಾವೇರಿ ನೀರಾವರಿ ನಿಗಮದ ಕಚೇರಿಗೆ ಕೂಗಳತೆ ದೂರದಲ್ಲಿ ಮರಗಳ ರೆಂಬೆಗಳು ಮುರಿದು ಬಿದ್ದವು. ವಿದ್ಯುತ್‌ ತಂತಿಗಳು ತುಂಡಾದವು. ಕೆಆರ್‌ಎಸ್‌ ಗ್ರಾಮ ಮತ್ತು ಬೃಂದಾವನದಲ್ಲಿ ವಿದ್ಯುತ್‌ ಸಂಪರ್ಕ ಸಂಪೂರ್ಣ ಕಡಿತಗೊಂಡಿತು. ಸಂಜೆ ಕಳೆಯುತ್ತಿದ್ದಂತೆಯೇ ಎಲ್ಲಡೆ ಕತ್ತಲು ಆವರಿಸಿತು.

ADVERTISEMENT

‘ಕೆಆರ್‌ಎಸ್‌ ಸುತ್ತಮುತ್ತ ಹಿಂದೆಂದೂ ಕಂಡಿಯರಿಯದ ರೀತಿ ಭೀಕರ ಬಿರುಗಾಳಿ ಬೀಸಿತು. ಗಾಳಿಯ ಸದ್ದೇ ಭಯ ಹುಟ್ಟಿಸುವಂತಿತ್ತು. ಪ್ರಳಯ ರೂಪಿ ಬಿರುಗಾಳಿಗೆ ಜನರು ಹೌಹಾರಿದರು. ಬೀದಿಯಲ್ಲಿದ್ದವರು ದಿಕ್ಕಾಪಾಲಾಗಿ ಓಡಿದರು. ಎಂತಹ ಗಟ್ಟಿ ಗುಂಡಿಗೆಯವರೂ ಹೆದರಿದರು. ಇಂತಹ ಬಿರುಗಾಳಿಯನ್ನು ನಾನೆಂದೂ ನೋಡಿಲ್ಲ’ ಎಂದು ಭೀಕರ ಬಿರುಗಾಳಿಯನ್ನು ಪ್ರತ್ಯಕ್ಷ ಕಂಡ ಕೆಆರ್‌ಎಸ್‌ ಬಳಿಯ ಮಜ್ಜಿಗೆಪುರದ ಶ್ರೀನಿವಾಸ್‌ ಹೇಳಿದರು.

‘ಬಿರುಗಾಳಿಯ ರೌದ್ರಾವತಾರಕ್ಕೆ ನಾನು ಮತ್ತು ನಮ್ಮ ಗೆಳೆಯರು ಹೆದರಿ ಹೋದೆವು. ಕೆಲವೇ ನಿಮಿಷಗಳಲ್ಲಿ ಅಲ್ಲೋಲಕಲ್ಲೋಲ ಪರಿಸ್ಥಿತಿ ಉಂಟಾಯಿತು. ಭೂಮಿಯೇ ಮಗುಚಿದಂತಹ ಭಯಾನಕ ಅನುಭವವಾಯಿತು‘ ಎಂದು ಸಂಜಯ್‌ ಪರಿಸ್ಥಿತಿಯ ಭೀಕರತೆಯನ್ನು ವರ್ಣಿಸಿದರು.

ಕೆಆರ್‌ಎಸ್‌ ಸಂತೆ ಮೈದಾನದಲ್ಲಿ ಅಂಗಡಿಯ ಛಾವಣಿ ಆಟೋ ಮೇಲೆ ಬಿದ್ದಿದೆ
ಕೆಆರ್‌ಎಸ್‌ನಲ್ಲಿ ಬಿರುಗಾಳಿಗೆ ಮರಗಳು ತೂರಾಡಿದವು
ಕೆಆರ್‌ಎಸ್‌ನಲ್ಲಿರುವ ಕಾವೇರಿ ನೀರಾವರಿ ನಿಗಮದ ಕಚೇರಿ ಬಳಿ ವಿದ್ಯುತ್‌ ತಂತಿಗಳು ತುಂಡಾಗಿ ಮರದ ಮೇಲೆ ಬಿದ್ದಿದ್ದವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.