ADVERTISEMENT

ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಬೇಲಿಯೇ ನಾಪತ್ತೆ!

ಕಬ್ಬಿಣದ ಪರಿಕರ, ಕೆಳಸೇತುವೆ ಬಲ್ಬ್‌ ಕಳ್ಳತನ, ಪ್ರಾಣಕ್ಕೆ ಸಂಚಾಕಾರ, ದೂರು ದಾಖಲು

ಎಂ.ಎನ್.ಯೋಗೇಶ್‌
Published 2 ಜೂನ್ 2023, 1:00 IST
Last Updated 2 ಜೂನ್ 2023, 1:00 IST
ಮಂಡ್ಯ ತಾಲ್ಲೂಕಿನ ಉಮ್ಮಡಹಳ್ಳಿ ಬಳಿ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯ ತಂತಿ ಬೇಲಿ ಕತ್ತರಿಸಿರುವುದು
ಮಂಡ್ಯ ತಾಲ್ಲೂಕಿನ ಉಮ್ಮಡಹಳ್ಳಿ ಬಳಿ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯ ತಂತಿ ಬೇಲಿ ಕತ್ತರಿಸಿರುವುದು   

ಮಂಡ್ಯ: ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಕಂಗೆಡಿಸಿವೆ. ಹೆದ್ದಾರಿಯ ಎರಡೂ ಬದಿಯಲ್ಲಿ ಅಳವಡಿಸಿರುವ ಕಬ್ಬಿಣದ ಬೇಲಿ ಸೇರಿದಂತೆ ಬೆಲೆ ಬಾಳುವ ಪರಿಕರ ಕದ್ದೊಯ್ದ ಪ್ರಕರಣಗಳು ವರದಿಯಾಗಿವೆ.

ಹೆದ್ದಾರಿ ಕಾಮಗಾರಿ ಆರಂಭವಾದ ಕಾಲದಿಂದಲೂ ವಸ್ತುಗಳ ಕಳ್ಳತನ ಪ್ರಕರಣಗಳು ವರದಿಯಾಗುತ್ತಲೇ ಇದ್ದು ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಪೊಲೀಸ್‌ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಇಲ್ಲಿಯವರೆಗೂ ಪೈಪ್‌, ಸರಳು, ಕಬ್ಬಿಣದ ಕಂಬ ಸೇರಿ ಇತರ ಪರಿಕರಗಳ ಕಳ್ಳತನ ಪ್ರಕರಣಗಳು ವರದಿಯಾಗಿದ್ದವು. ಈಗ  ರಸ್ತೆ ಬದಿಯ ಬೇಲಿಯನ್ನೇ ಕದ್ದೊಯ್ಯುತ್ತಿರುವುದು ಪ್ರಾಧಿಕಾರದ ಅಧಿಕಾರದ ಅಧಿಕಾರಿಗಳಿಗೆ ತಲೇನೋವು ತರಿಸಿದೆ.

ರಸ್ತೆಯ ವಿವಿಧೆಡೆ ಕಟ್ಟರ್‌ ಯಂತ್ರ ಬಳಸಿ ಬೇಲಿ ಕತ್ತರಿಸಿ ಹಾಕಲಾಗಿದೆ, ಆರಂಭದಲ್ಲಿ ರಸ್ತೆ ದಾಟುವ ಉದ್ದೇಶದಿಂದ ಸ್ಥಳೀಯರೇ ಈ ರೀತಿ ಮಾಡಿರಬಹುದು ಎಂದು ಎಣಿಸಲಾಗಿತ್ತು. ಆದರೆ ಇದು ಕಳ್ಳರ ಕರಾಮತ್ತು ಎಂಬುದು ಇತ್ತೀಚೆಗೆ ಖಾತ್ರಿಯಾಗಿದೆ. ರಸ್ತೆಯ ಅಲ್ಲಲ್ಲಿ ಐದಾರು ಅಡಿಗಳವರೆಗೆ ಬೇಲಿ ಕತ್ತರಿಸಿ ಹಾಕಲಾಗಿದೆ, ಕಳ್ಳರು ಕಬ್ಬಿಣ ಕದ್ದೊಯ್ದು ಗುಜರಿಗಳಿಗೆ ಮಾರಾಟ ಮಾಡುತ್ತಿರುವ ವಿಷಯ ಬೆಳಕಿಗೆ ಬಂದಿದ್ದು ಅಧಿಕಾರಿಗಳು ಈ ಬಗ್ಗೆ ದೂರು ದಾಖಲಿಸಿದ್ದಾರೆ.

ADVERTISEMENT

‘ಕಳ್ಳರ ಕೆಲಸದಿಂದಾಗಿ ಸ್ಥಳೀಯ ಜನರು ರಸ್ತೆ ದಾಟಲು ರಹದಾರಿ ಮಾಡಿಕೊಟ್ಟಂತಾಗಿದೆ. ಕತ್ತರಿಸಿದ ಜಾಗದಲ್ಲಿ ಜನರು ರಸ್ತೆ ದಾಟುತ್ತಿದ್ದು ಅವರ ಪ್ರಾಣಕ್ಕೆ ಸಂಚಾಕಾರ ಬಂದಿದೆ. ಹಗಲು ವೇಳೆಯೇ ಕಳ್ಳತನ ಮಾಡುತ್ತಿದ್ದರೂ ಗೊತ್ತಾಗುತ್ತಿಲ್ಲ, ಕಳ್ಳರು ಯಾರು, ಹೆದ್ದಾರಿ ಕೆಲಸಗಾರರು ಯಾರು ಎಂಬುದು ತಿಳಿಯುವುದಿಲ್ಲ. ಹೆದ್ದಾರಿ ಪ್ರಾಧಿಕಾರ ಏನಾದರೂ ಮಾಡಿ ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಕಾಳೇನಹಳ್ಳಿ ಗ್ರಾಮದ ದೇವರಾಜು ಹೇಳಿದರು.

ಬಲ್ಬ್‌ಗಳ ಕಳ್ಳತನ: ಹೆದ್ದಾರಿ ಕೆಳಸೇತುವೆಯಲ್ಲಿ ಅಳವಡಿಸಲಾಗಿರುವ ಎಲ್‌ಇಡಿ ಬಲ್ಬ್‌ಗಳನ್ನೂ ಕಳ್ಳತನ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಕೆಳಸೇತುವೆಯಲ್ಲಿ ಬೆಳಕಿಲ್ಲ ಎಂಬ ದೂರು ಬಂದ ಕಾರಣ ಬಲ್ಬ್‌ ಅಳವಡಿಸಲಾಗಿತ್ತು. ಆದರೆ ಅವುಗಳನ್ನೇ ಕಳ್ಳತನ ಮಾಡುತ್ತಿರುವುದು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ.

ಕಾಮಗಾರಿ ಬಹುತೇಕ ಪೂರ್ಣಗೊಂಡಿರುವ ರಾಮನಗರ ಜಿಲ್ಲಾ ವ್ಯಾಪ್ತಿಯ ಕೆಳಸೇತುವೆಗಳಲ್ಲಿ ಹೆಚ್ಚು ಎಲ್‌ಇಡಿ ಬಲ್ಬ್‌ ಕಳ್ಳತನ ಮಾಡಲಾಗಿದೆ. ಈ ಕುರಿತು ಸಂಬಂಧಿಸಿದ ತಾಲ್ಲೂಕು ವ್ಯಾಪ್ತಿಯ ಪೊಲೀಸ್‌ ಠಾಣೆಗಳಲ್ಲಿ ದಿಲೀಪ್‌ ಬಿಲ್ಡ್‌ಕಾನ್‌ ಗುತ್ತಿಗೆದಾರರು ದೂರು ದಾಖಲಿಸಿದ್ದಾರೆ.

ತುಂಡು ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಕೂಡ ವೈಯಕ್ತಿಕವಾಗಿ ಸ್ಥಳೀಯ ಠಾಣೆಗಳಲ್ಲಿ ದೂರು ನೀಡಿದ್ದಾರೆ. ಅವರ ಪರಿಕರಗಳು ಕಳ್ಳತನವಾಗಿದ್ದು ಅಪಾರ ನಷ್ಟ ಉಂಟಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ರಸ್ತೆಯುದ್ದಕ್ಕೂ ಸಿಸಿಟಿವಿ ಕ್ಯಾಮೆರಾ ಅಳವಡಿಸದ ಕಾರಣ ಕಳ್ಳರು ಬೇಲಿ ಸೇರಿದಂತೆ ಬೆಲೆಬಾಳುವ ವಸ್ತುಗಳ ಕಳ್ಳತನ ಮಾಡುತ್ತಿದ್ದಾರೆ. ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದರೂ ಕೆಲವೆಡೆ ಮಾತ್ರ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ರಸ್ತೆಯುದ್ದಕ್ಕೂ ಕ್ಯಾಮೆರಾ ಅಳವಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

‘ಬೇಲಿ ಕಳ್ಳತನ ಮಾಡುತ್ತಿರುವ ಪ್ರಕರಣಗಳನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗಿದೆ. ಜನರ ಪ್ರಾಣ ರಕ್ಷಣೆ ಮಾಡುವ ದೃಷ್ಟಿಯಿಂದ ಮತ್ತೆ ಮತ್ತೆ ಬೇಲಿ ಅಳವಡಿಸುತ್ತಿದ್ದೇವೆ. ಹೆದ್ದಾರಿ ನಿರ್ವಹಣೆ ಮಾಡುತ್ತಿರುವ ದಿಲೀಪ್‌ ಬಿಲ್ಡ್‌ಕಾನ್‌ ಕಂಪನಿ ಅಧಿಕಾರಿಗಳು ವಿವಿಧ ಠಾಣೆಗಳಲ್ಲಿ 10ಕ್ಕೂ ಹೆಚ್ಚು ದೂರು ನೀಡಿದ್ದಾರೆ’ ಎಂದು ಹೆಸರು ಪ್ರಕಟಗೊಳಸಿದ ಷರತ್ತಿನೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ವೊಬ್ಬರು ತಿಳಿಸಿದರು.

ಬೇಲಿ ಕಬ್ಬಿಣ ಕದ್ದು ಗುಜರಿಯಲ್ಲಿ ಮಾರಾಟ ಮತ್ತೆ ಮತ್ತೆ ತೇಪೆ ಹಾಕುತ್ತಿರುವ ಪ್ರಾಧಿಕಾರ ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲು
ಪಿಡಿ ವರ್ಗಾವಣೆ ಕಚೇರಿ ಸ್ಥಳಾಂತರ
ಬೆಂಗಳೂರು– ಮೈಸೂರು ದಶಪಥ ನಿರ್ಮಾಣ ಕಾಮಗಾರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್‌ ವರ್ಗಾವಣೆಗೊಂಡಿದ್ದಾರೆ. ಅವರ ಜಾಗಕ್ಕೆ ಉತ್ತರ ಭಾರತ ಮೂಲದ ರಾಹುಲ್‌ ಎಂಬುವವರು ನೇಮಕಗೊಂಡಿದ್ದಾರೆ ನೂತನ ಯೋಜನಾಧಿಕಾರಿ ಇನ್ನೂ ಅಧಿಕಾರ ವಹಿಸಿಕೊಂಡಿಲ್ಲ ಈ ನಡುವೆ ರಾಮನಗರದಲ್ಲಿ ಇದ್ದ ಹೆದ್ದಾರಿ ಪ್ರಾಧಿಕಾರದ ಕಚೇರಿ ಮೈಸೂರಿಗೆ ಸ್ಥಳಾಂತರಗೊಳಿಸುವ ನಿರ್ಧಾರ ಹೊರಬಿದ್ದಿದೆ. ಕೆಂಗೇರಿಯಲ್ಲಿ ಶಾಖಾ ಕಚೇರಿ ಇರಲಿದ್ದು ಮುಖ್ಯ ಕಚೇರಿ ಮೈಸೂರು ನಗರಕ್ಕೆ ಸ್ಥಾಳಾಂತರಗೊಳ್ಳಲಿದೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಕ್ಯಾಂಟೀನ್‌ ಬಳಿಯೇ ಬೇಲಿ ಕನ್ನ
ಬೇಲಿ ಕಬ್ಬಿಣ ಕಳ್ಳತನ ಒಂದೆಡೆಯಾದರೆ ಕ್ಯಾಂಟೀನ್‌ ಸಣ್ಣಪುಟ್ಟ ಹೋಟೆಗಳು ಇರುವೆಡೆ ಬೇಲಿಗೆ ಕನ್ನ ಹಾಕಿರುವ ಪ್ರಕರಣಗಳೂ ಇನ್ನೊಂದೆಡೆ ಬೆಳಕಿಗೆ ಬಂದಿವೆ. ಅಂಗಡಿ ಮಾಲೀಕರು ತಮ್ಮ ವ್ಯಾಪಾರ ವೃದ್ಧಿಸಿಕೊಳ್ಳಲು ಜನರು ಬರುವಂತೆ ಮಾಡಲು ಬೇಲಿಗಳಿಗೆ ಕನ್ನ ಹಾಕಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಗುತ್ತಿಗೆದಾರರು ನೀಡಿರುವ ದೂರಿನಲ್ಲಿ ಈ ಅಂಶವನ್ನೂ ಪ್ರಸ್ತಾಪ ಮಾಡಲಾಗಿದ್ದು ಅಂತಹ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.