ಮಳವಳ್ಳಿ: ರಾಜ್ಯ ಹೆದ್ದಾರಿ-33ರಲ್ಲಿ ಹಾಕಲಾಗಿರುವ ಗ್ರಾಮಗಳ ಹೆಸರಿನ ನಾಮಫಲಕಗಳು ಕನ್ನಡ ಭಾಷೆಯನ್ನು ಅಣಕಿಸುವಂತಾಗಿರುವುದರ ಜೊತೆಗೆ ಪ್ರಯಾಣಿಕರ ದಾರಿಯನ್ನು ದಿಕ್ಕು ತಪ್ಪಿಸುವಂತಿವೆ.
ಮೂರು ದಶಕಗಳ ನಂತರ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ರಾಜ್ಯ ಹೆದ್ದಾರಿ-33ರಲ್ಲಿ ಹಾಕಲಾಗಿರುವ ಗ್ರಾಮಗಳ ನಾಮಫಲಕಗಳು ಸಾಕಷ್ಟು ಟೀಕೆಗೆ ಗುರಿಯಾಗಿವೆ.
ಮಳವಳ್ಳಿ ಪಟ್ಟಣದಿಂದ ಮದ್ದೂರಿಗೆ ತೆರಳುವ ರಸ್ತೆ ಬದಿಯಲ್ಲಿ ಕೆಲ ದಿನಗಳ ಹಿಂದೆ ನಾಮಫಲಕಗಳನ್ನು ಅಳವಡಿಸಿದ್ದು, ಅವುಗಳಲ್ಲಿ ‘ಕೋರೆಗಾಲ ಗ್ರಾಮದ ಹೆಸರನ್ನು ಕೊರಗಲ್ಲ’ ಎಂದು ಬರೆದು ಎಡ ಮತ್ತು ಬಲ ದಿಕ್ಕಿಗೆ ದಾರಿ ತೋರಿಸಲಾಗಿದೆ. ಆದರೆ ವಾಸ್ತವವಾಗಿ ಕೋರೆಗಾಲ ಗ್ರಾಮವು ಮಳವಳ್ಳಿ ಕಡೆಯಿಂದ ಬಂದರೆ ಎಡಕ್ಕೆ ಬರುತ್ತದೆ.
ತಳಗವಾದಿ ಎನ್ನುವುದು ಥಲ್ಲೋರಿ, ಕಾಳಕೆಂಪನದೊಡ್ಡಿ ಎನ್ನುವುದು ಕಾಲ್ಲೋಡಿ ಹೀಗೆ ರಸ್ತೆ ಉದ್ದಕ್ಕೂ ಬರುವ ಗ್ರಾಮಗಳ ಹೆಸರನ್ನು ತಪ್ಪಾಗಿ ಬರೆಯುವುದರ ಜೊತೆಗೆ ಗ್ರಾಮಕ್ಕೆ ಹೋಗುವ ದಾರಿ ಸೂಚನೆಯನ್ನು ಕೂಡ ವಿರುದ್ಧ ದಿಕ್ಕಿನಲ್ಲಿ ಹಾಕಲಾಗಿದೆ. ಕೆಶಿಪ್ ಅಧಿಕಾರಿಗಳ ಎಡವಟ್ಟಿನಿಂದ ಕನ್ನಡ ಭಾಷೆಯನ್ನೇ ಅಣಕಿಸುವ ರೀತಿಯಲ್ಲಿ ಗ್ರಾಮಗಳ ಹೆಸರನ್ನು ಹಾಕುವುದರ ಜೊತೆಗೆ ಪ್ರಯಾಣಿಕರ ದಾರಿಯನ್ನೇ ದಿಕ್ಕು ತಪ್ಪಿಸುವ ಸೂಚನಫಲಕಗಳ ಬಗ್ಗೆ ಜನರು ಕಿಡಿ ಕಾರುತ್ತಿದ್ದಾರೆ.
ರಾಜ್ಯದಲ್ಲಿ ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಎಂದರೆ ಅದು ಮಂಡ್ಯ, ಆದರೆ ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗ್ರಾಮಗಳ ಹೆಸರನ್ನು ತಪ್ಪಾಗಿ ಬರೆದು ಸುಂದರ ಕನ್ನಡಕ್ಕೆ ಅಪಮಾನ ಮಾಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಪ್ರತಿಯೊಂದು ಹಳ್ಳಿಗಳಲ್ಲಿ ಕನ್ನಡ ರಥದ ಮೂಲಕ ಭಾಷೆಯ ಹಿರಿಮೆಯನ್ನು ತಿಳಿಸುವುದರ ಜೊತೆಗೆ ಸಮ್ಮೇಳನಕ್ಕೆ ಭಾಗವಹಿಸಬೇಕು ಎಂದು ಪ್ರಚಾರ ನಡೆಯುತ್ತಿದೆ. ಇಲ್ಲಿ ಪ್ರತಿನಿತ್ಯ ಸಾವಿರಾರು ಮಂದಿ ಸಂಚರಿಸುವ ರಾಜ್ಯ ಹೆದ್ದಾರಿಯಲ್ಲಿ ಕನ್ನಡ ಭಾಷೆಯನ್ನು ತಪ್ಪಾಗಿ ಅಳವಡಿಸಿರುವ ಕೆಶಿಪ್ ಅಧಿಕಾರಿಗಳ ನಡೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಅಭಿಮಾನಿಗಳು ಖಂಡಿಸಿದ್ದಾರೆ.
ರಾಜ್ಯ ಹೆದ್ದಾರಿಯ ನಾಮಫಲಕಗಳಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿ ಕೂಡಲೇ ಹೊಸ ನಾಮಫಲಕಗಳ ಅಳವಡಿಕೆಗೆ ಮುಂದಾಗುತ್ತೇವೆಅವಿನಾಶ್ ಕೆಶಿಪ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.