ADVERTISEMENT

ಶಾಸಕರಿಗೆ ರೋಲ್‌ಕಾಲ್‌ ಚೆನ್ನಾಗಿ ಗೊತ್ತಿದೆ: ಟಿ.ಎಲ್‌.ಕೃಷ್ಣೇಗೌಡ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 13:22 IST
Last Updated 18 ಜೂನ್ 2025, 13:22 IST
ಟಿ.ಎಲ್.ಕೃಷ್ಣೇಗೌಡ
ಟಿ.ಎಲ್.ಕೃಷ್ಣೇಗೌಡ   

ಭಾರತೀನಗರ: ‘ಚಳವಳಿಗಾರರನ್ನು ರೋಲ್‌ಕಾಲ್‌, ಎಂಜಲು ಕಾಸಿನ ಗಿರಾಕಿಗಳು ಎಂದು ಹೇಳಿಕೆ ನೀಡಿರುವ ಶಾಸಕ ಕೆ.ಎಂ.ಉದಯ್‌ ಅವರೇ ರೋಲ್‌ಕಾಲ್‌ ಗಿರಾಕಿಯಾಗಿದ್ದು, ರೋಲ್‌ಕಾಲ್‌ ಮಾಡುವುದು ಆತನಿಗೆ ಚೆನ್ನಾಗಿ ಗೊತ್ತಿದೆ’ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್‌.ಕೃಷ್ಣೇಗೌಡ ಟೀಕಿಸಿದ್ದಾರೆ.

‘ಕಾವೇರಿ ಆರತಿ, ಅಮ್ಯೂಸ್‌ಮೆಂಟ್‌ ಪಾರ್ಕ್‌ ನಿರ್ಮಾಣ ಸಂಬಂಧ ರೈತ ಹೋರಾಟಗಾರರು ಮತ್ತು ಚಳವಳಿಕಾರರನ್ನು ಟೀಕಿಸಿರುವ ಅವರಿಗೆ ಎಂಜಲು ಕಾಸಿಗೆ ನಾಲಿಗೆ ಚಾಚಿ ನಿಂತ ಅಭ್ಯಾಸವೂ ಇರಬಹುದು. ರೈತ ಚಳವಳಿಗಾರರಿಗೆ, ಕಮ್ಯುನಿಸ್ಟ್ ಪಕ್ಷಕ್ಕೆ ಆ ರೀತಿಯ ಎಂಜಲು ಕಾಸಿನ ರಾಜಕಾರಣ ಮಾಡಿ ಅಭ್ಯಾಸವಿಲ್ಲ ಎಂಬುದನ್ನು ಗಟ್ಟಿಯಾಗಿ ಹೇಳಲು ಬಯಸುತ್ತೇನೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಶಾಸಕರು ಅವರ ಪೂರ್ವಾಶ್ರಮಗಳನ್ನು ನೆನಪಿಸಿಕೊಂನಡರೆ ಒಳಿತು. 12 ವರ್ಷಗಳ ಹಿಂದೆ ಎಲ್ಲಿದ್ದರು, ಈಗ ಎಲ್ಲಿದ್ದಾರೆ, ಅವರು ಸಂಪಾದನೆ ಮಾಡಿರುವುದು ಯಾವ ರೀತಿ, ಯಾರು ಸಂಪಾದನೆ ಮಾಡಿದ ಹಣ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.

ADVERTISEMENT

‘ತಾಲ್ಲೂಕು ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಔಷಧಿಯಿಲ್ಲ, ಜ್ವರ ಬಂದವರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಮದ್ದೂರು ಪಟ್ಟಣದಲ್ಲಿ ಏನೆಲ್ಲ ನಾಗರಿಕ ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸಲಿ. ವಿದ್ಯಾರ್ಥಿಗಳ, ರೈತರ ಸಮಸ್ಯೆ ಸಾಕಷ್ಟಿವೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಚಳವಳಿಕಾರರನ್ನು ಟೀಕಿಸುವ ಕೆಳಮಟ್ಟಕ್ಕೆ ಇಳಿದಿದ್ದಾರೆ’ ಎಂದು ಕಿಡಿಕಾರಿದರು.

‘ಮದ್ದೂರು ಪಟ್ಟಣವನ್ನು ನಗರಸಭೆ ಮಾಡಲು ನಿರಾಕರಿಸಿರುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಜೂ 26ರಂದು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಸಿಪಿಐಎಂ ಬೃಹತ್‌ ಪ್ರತಿಭಟನೆ ಆಯೋಜಿಸಿದೆ. ಎಲ್ಲಾ ಚಳವಳಿಕಾರರು, ಹೋರಾಟಗಾರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

ಪಕ್ಷದ ಮುಖಂಡರಾದ ಬಿ.ಹನುಮೇಶ್‌, ಲತಾ, ಶೋಭಾ, ಮಂಚೇಗೌಡ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.