ADVERTISEMENT

ಭೂತಬಂಗಲೆಯಾದ ಶಿವಪುರ ಧ್ವಜ ಸತ್ಯಾಗ್ರಹ ಸೌಧ

ಸ್ವಾತಂತ್ರ ಹೋರಾಟಗಾರರ ಭಾವಚಿತ್ರಗಳೇ ಮಾಯ, ಚಪ್ಪಡಿ ಕಲ್ಲುಗಳ ಕಳ್ಳತನ

ಎಂ.ಎನ್.ಯೋಗೇಶ್‌
Published 14 ಆಗಸ್ಟ್ 2020, 9:46 IST
Last Updated 14 ಆಗಸ್ಟ್ 2020, 9:46 IST
1938, ಏಪ್ರಿಲ್‌ 10ರಂದು ಶಿವಪುರದಲ್ಲಿ ನಡೆದ ಧ್ವಜ ಸತ್ಯಾಗ್ರಹದ ಚಿತ್ರ
1938, ಏಪ್ರಿಲ್‌ 10ರಂದು ಶಿವಪುರದಲ್ಲಿ ನಡೆದ ಧ್ವಜ ಸತ್ಯಾಗ್ರಹದ ಚಿತ್ರ   
""

ಮಂಡ್ಯ: ಸಾತಂತ್ರ್ಯ ಚಳವಳಿಗೆ ಸ್ಫೂರ್ತಿ, ಚೈತನ್ಯ ತುಂಬಿದ ಶಿವಪುರ ಧ್ವಜ ಸತ್ಯಾಗ್ರಹ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿದೆ. ಆದರೆ ಚಳವಳಿಯ ನೆನಪಿನಲ್ಲಿ ನಿರ್ಮಾಣಗೊಂಡಿದ್ದ ಸ್ಮಾರಕ ಸೌಧ ಇಂದು ಅನಾಥವಾಗಿದೆ!

ಶಿಂಷಾ ನದಿಯ ದಂಡೆಯಲ್ಲಿರುವ ಶಿವಪುರದಲ್ಲಿ 1938, ಏಪ್ರಿಲ್‌ 10ರಂದು ಮೈಸೂರು ಕಾಂಗ್ರೆಸ್ ಮೊದಲನೇ ಸಮಾವೇಶ ನಡೆಸಲು ಸ್ವಾತಂತ್ರ್ಯ ಹೋರಾಟಗಾರರು ನಿರ್ಧರಿಸಿದ್ದರು. ಕಾರ್ಯಕ್ರಮಕ್ಕೂ ಮೊದಲು ಧ್ವಜರೋಹಣ ಕಾರ್ಯಕ್ರಮವಿತ್ತು. ಆದರೆ ಕಾಂಗ್ರೆಸ್ ಧ್ವಜ ಹಾರಿಸುವುದರಿಂದ ಮೈಸೂರು ಮಹಾರಾಜರ ಪ್ರಭುತ್ವಕ್ಕೆ ಕುಂದು ಬರುವುದೆಂದು ಭಾವಿಸಿ ಮೈಸೂರು ಜಿಲ್ಲಾ ದಂಡಾಧಿಕಾರಿ ಧ್ವಜಾರೋಹಣ ನಿಷೇಧಿಸಿದ್ದರು.

ಕೆ.ಟಿ.ಚಂದು

ಆದರೆ, ನಿಷೇಧ ಉಲ್ಲಂಘಿಸಿ ಧ್ವಜಾರೋಹಣ ನೆರವೇರಿಸಲಾಯಿತು. ಆ ಮೂಲಕ ಸ್ವಾತಂತ್ರ್ಯ ಚಳವಳಿಯ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಲಾಯಿತು. ಸಿದ್ದಲಿಂಗಯ್ಯ, ಎಚ್.ಕೆ.ವೀರಣ್ಣಗೌಡ, ಸಾಹುಕಾರ್ ಚೆನ್ನಯ್ಯ, ಗೋಪಾಲಶೆಟ್ರು, ಎಂ.ಜಿ.ಬಂಡಿಗೌಡರು, ಎಚ್.ಸಿ.ದಾಸಪ್ಪ, ಎಸ್.ರಂಗಯ್ಯ, ಕೊಪ್ಪದ ಜೋಗಿಗೌಡ ಮುಂತಾದವರು ಹೋರಾಟದ ರೂವಾರಿಗಳಾಗಿದ್ದರು.

ADVERTISEMENT

ಸತ್ಯಾಗ್ರಹ ನಡೆದು 36 ವರ್ಷಗಳ ನಂತರ, ಆಗ ಮುಖ್ಯಮಂತ್ರಿಯಾಗಿದ್ದ ಕೆಂಗಲ್‌ ಹನುಮಂತಯ್ಯ ಅವರು ಶಿವಪುರ ಸತ್ಯಾಗ್ರಹ ಸ್ಮಾರಕ ಸೌಧ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು. 1979ರ ಸೆಪ್ಟೆಂಬರ್‌ 29 ರಂದು ಸತ್ಯಾಗ್ರಹಸೌಧ ಉದ್ಘಾಟನೆಯಾಯಿತು. ಸುಂದರ ಕಮಾನು ಆಕೃತಿಯಲ್ಲಿ ಕಟ್ಟಡಕ್ಕೆ ರೂಪ ನೀಡಲಾಯಿತು. ಎಂ.ಎಸ್.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಈ ಸೌಧದ ಪುನರುಜ್ಜೀವನಗೊಂಡಿತು. ಸೌಧದ ಎಡ ಬದಿಯಲ್ಲಿ ಅನೆಕ್ಸ್ ಸಭಾಂಗಣ ನಿರ್ಮಾಣಗೊಂಡಿತು.

ಇಂದು ಅನಾಥ: ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಇರುವ ಈ ಸ್ಮಾರಕ ಸೌಧ ಇಂದು ಭೂತಬಂಗಲೆಯಂತಾಗಿದೆ. ನಿರ್ವಹಣೆ ಕೊರತೆಯಿಂದಾಗಿ ಮುಖ್ಯ ಭವನ, ಅನೆಕ್ಸ್‌ ಕಟ್ಟಡ ಪಾಳು ಬಿದ್ದಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿವೆ. ಬೀದಿನಾಯಿಗಳ ವಾಸಸ್ಥಾನವಾಗಿವೆ. ಸೌಧದ ಆವರಣದಲ್ಲಿದ್ದ ಸುಂದರ ಕಾರಂಜಿ ಸ್ಥಗಿತಗೊಂಡಿದೆ. ಸುಂದರ ಕೈತೋಟ, ಅಲಂಕಾರಿಕ ಗಿಡಗಳು ನಾಶಗೊಂಡಿವೆ.

ಸೌಧದ ದುರಸ್ತಿ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ತೆರವುಗೊಳಿಸಲಾಯಿತು. ಆದರೆ ಮತ್ತೆ ಭಾವಚಿತ್ರಗಳನ್ನು ಅಳವಡಿಸಿಲ್ಲ. ಅವುಗಳು ಏನಾದವು ಎಂಬುದೇ ಯಕ್ಷ ಪ್ರಶ್ನೆ. ಚತುಷ್ಪಥ ನಿರ್ಮಾಣ ಸಂದರ್ಭದಲ್ಲಿ ಸೌಧದ ಮುಂದಿನ ಕಾಂಪೌಂಡ್‌ ಒಡೆಯಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸಂದರ್ಭದಲ್ಲಿ ದೊಡ್ಡಬಳ್ಳಾಪುರದಿಂದ ತರಿಸಲಾಗಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಲ್ಲು ಚಪ್ಪಡಿಗಳು ಕಳ್ಳತನವಾಗಿವೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಶಿವಪುರ ಸೌಧ ಸಾತಂತ್ರ್ಯ ಹೋರಾಟದ ನೆನೆಪಿನ ಚಿತ್ರವಾಗಬೇಕಾಗಿತ್ತು, ಅಧ್ಯಯನದ ತಾಣವಾಗಬೇಕಾಗಿತ್ತು. ಆದರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಳೆದ 10 ವರ್ಷಗಳಿಂದ ಕಟ್ಟಡ ಪಾಳು ಕಟ್ಟಡವಾಗಿದೆ ಎಂದುಸ್ವಾತಂತ್ರ್ಯ ಹೋರಾಟಗಾರಕೆ.ಟಿ.ಚಂದು ಬೇಸರ ವ್ಯಕ್ತಪಡಿಸಿದರು.

ಶಿವಪುರಸತ್ಯಾಗ್ರಹಸೌಧದ ಇಂದಿನ ನೋಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.