ನರಹಳ್ಳಿ ಬಾಲಸುಬ್ರಹ್ಮಣ್ಯ
– ಪ್ರಜಾವಾಣಿ ಚಿತ್ರ
ಮಂಡ್ಯ: ‘ಮರಾಠಿ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಸಾಹಿತಿಗಳು ಮಾತ್ರ ಇರುತ್ತಾರೆ. ಅಲ್ಲಿಯ ಮುಖ್ಯಮಂತ್ರಿ ಕೂಡ ಸಭಿಕರ ಮುಂದಿನ ಸಾಲಿನಲ್ಲಿ ಕುಳಿತಿರುತ್ತಾರೆ. ನಮ್ಮ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗಳಲ್ಲಿ ಸಾಹಿತಿಗಳಿಗಿಂತ ರಾಜಕಾರಣಿಗಳೇ ವಿಜೃಂಭಿಸುತ್ತಾರೆ. ಸಾಹಿತ್ಯದ ಹೆಸರಿನಲ್ಲಿ ಏಕೆ ‘ಅತ್ಯಾಚಾರ’ ಮಾಡುತ್ತಿದ್ದೀರಿ? ಸಾಹಿತ್ಯಕ್ಕೆ ಒಂದು ಪಾವಿತ್ರ್ಯ ಇದೆ. ಅದನ್ನು ಕಾಪಾಡಿ’ ಎಂದು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ತೀಕ್ಷ್ಣವಾಗಿ ನುಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ‘ವಾರದ ಅತಿಥಿಯೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಸಾಹಿತ್ಯ ಸಮ್ಮೇಳನಕ್ಕೆ ನಾಡಿನ ಹೆಸರಾಂತ 100 ಲೇಖಕರನ್ನು ‘ವಿಶೇಷ ಅತಿಥಿ’ಗಳಾಗಿ ಆಹ್ವಾನಿಸಿ, ಅವರನ್ನು ಗೌರವದಿಂದ ಕಾಣಬೇಕು. ಲೇಖಕರೇ ಪಾಲ್ಗೊಳ್ಳುವುದಿಲ್ಲ ಅಂದರೆ ಸಮ್ಮೇಳನದ ಔಚಿತ್ಯವೇನು? ಹೀಗಾಗಿ ಸಾಹಿತ್ಯ ಸಮ್ಮೇಳನದ ಸ್ವರೂಪ ಬದಲಾಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
‘ಸಮ್ಮೇಳನಕ್ಕೆ ವಿದೇಶದಲ್ಲಿರುವ 500 ಅನಿವಾಸಿ ಭಾರತೀಯರನ್ನು ಆಹ್ವಾನಿಸುತ್ತೇವೆ’ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಹೇಳಿದ್ದಾರೆ. ಆದರೆ, ನಮ್ಮಲ್ಲಿರುವ ಪ್ರಮುಖ ಸಾಹಿತಿಗಳಿಗೇ ಆಹ್ವಾನವಿರುವುದಿಲ್ಲ. ದೇವನೂರು ಮಹಾದೇವ, ಎಸ್.ಎಲ್.ಭೈರಪ್ಪ, ಹಂ.ಪ. ನಾಗರಾಜಯ್ಯ, ಚಂದ್ರಶೇಖರ ಕಂಬಾರ ಮುಂತಾದವರ ಸಲಹೆ ಪಡೆದು ಸಮ್ಮೇಳನದ ಸ್ವರೂಪ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳಲಿ. ‘ಪ್ರಾಥಮಿಕ ಹಂತದಲ್ಲಿ ಕನ್ನಡ ಭಾಷಾ ಮಾಧ್ಯಮ ಕಡ್ಡಾಯವಾಗಿ ಅನುಷ್ಠಾನಗೊಳ್ಳುವವರೆಗೆ ಸಮ್ಮೇಳನಾಧ್ಯಕ್ಷ ಸ್ಥಾನ ವಹಿಸಿಕೊಳ್ಳುವುದಿಲ್ಲ’ ಎಂಬ ದೇವನೂರು ಅವರ ನಿಲುವನ್ನು ನಾವು ಗೌರವಿಸಬೇಕಲ್ಲವೇ? ಅದನ್ನು ಅನುಷ್ಠಾನಕ್ಕೆ ತರಬೇಕಲ್ಲವೇ? ಎಂದರು.
ರಾಜಕೀಯ ಮತ್ತು ಧರ್ಮ ಈ ಎರಡೂ ಎಲ್ಲದರ ಮೇಲೂ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುತ್ತವೆ. ಅದಕ್ಕೆ ಸಾಹಿತ್ಯ ಸಮ್ಮೇಳನ ಬಲಿಯಾಗಬಾರದು. ಧ್ವನಿ ಎತ್ತಿದರೆ ಉರುಳಿಸುತ್ತೇವೆ ಎಂಬ ಭಯದ ವಾತಾವರಣವಿದೆ. ಸಮಾಜದಲ್ಲೂ ಪ್ರತಿಭಟನೆಯ ಶಕ್ತಿ ಕಡಿಮೆಯಾಗಿದೆ. ಕೆಲವು ಸಾಹಿತಿಗಳು ಸ್ವಾಯತ್ತ ಪ್ರಜ್ಞೆ ಕಳೆದುಕೊಂಡಿರುವುದು ಕೂಡ ಸಮಸ್ಯೆಗೆ ಕಾರಣವಾಗಿದೆ. ಸಾಹಿತಿಗಳು ಪ್ರಶಸ್ತಿಯ ಹಂಗಿಗೆ ಬೀಳಬಾರದು ಮತ್ತು ಸ್ಥಾನಮಾನಕ್ಕಾಗಿ ವಿಧಾನಸೌಧ ಸುತ್ತಬಾರದು ಎಂದು ಪ್ರತಿಪಾದಿಸಿದರು.
ಸರ್ಕಾರದ ನೆರವು ಇಲ್ಲದೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಮಾಜ ಮನಸು ಮಾಡಬೇಕು. ಆಳ್ವಾಸ್ ಸಂಸ್ಥೆ ನಡೆಸುವ ‘ನುಡಿಸಿರಿ’ ಮತ್ತು ಧಾರವಾಡದಲ್ಲಿ ನಡೆಯುವ ‘ಸಾಹಿತ್ಯ ಸಂಭ್ರಮ’ ಕಾರ್ಯಕ್ರಮಗಳು ಮಾದರಿಯಾಗಿವೆ. ಹೀಗಾಗಿ ‘ಜಾಗೃತ ಚಳವಳಿ’ ನಡೆಯಬೇಕಿದೆ. ಅದಕ್ಕೆ ಸಮೂಹ ಮಾಧ್ಯಮಗಳ ಪಾತ್ರ ದೊಡ್ಡದು ಎಂದು ಅಭಿಪ್ರಾಯಪಟ್ಟರು.
ಟಿಪ್ಪು ಗೋಷ್ಠಿಗೆ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಸಾಹಿತ್ಯ ಅಂದ್ರೆ ಎಲ್ಲವನ್ನೂ ಒಳಗೊಂಡಿದ್ದು. ಎಲ್ಲ ವಿಷಯಗಳು ಗೋಷ್ಠಿಯಲ್ಲಿ ಚರ್ಚೆಯಾಗಿ, ಸರಿ–ತಪ್ಪು ಯಾವುದು ಎಂಬುದು ನಿರ್ಧಾರವಾಗಲಿ’ ಎಂದು ನರಹಳ್ಳಿ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.