ADVERTISEMENT

ಲಾವಣಿ ತೋರಿಸಿ, ಬಹಿರಂಗ ಚರ್ಚೆಗೆ ಬನ್ನಿ: ವಿಚಾರವಾದಿಗಳ ಸವಾಲು

ಬ್ರಾಹ್ಮಣರ ಭೂಮಿ ಕಿತ್ತುಕೊಂಡಿದ್ದಕ್ಕೆ ಸೇಡು; ವಿಚಾರವಾದಿಗಳ ಆರೋಪ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 13:03 IST
Last Updated 18 ಮಾರ್ಚ್ 2023, 13:03 IST

ಮಂಡ್ಯ: ಉರಿಗೌಡ ಮತ್ತು ದೊಡ್ಡ ನಂಜೇಗೌಡರು ಟಿಪ್ಪು ಕೊಂದರು ಎನ್ನುವುದಕ್ಕೆ ಇತಿಹಾಸದಲ್ಲಿ ಯಾವುದೇ ಸಾಕ್ಷಿ ಇಲ್ಲ. ಲಾವಣಿ ಸಿಕ್ಕಿದ್ದರೆ ಅದನ್ನು ಸಾರ್ವಜನಿಕರಿಗೆ ತೋರಿಸಬೇಕು, ಜೊತೆಗೆ ಬಹಿರಂಗ ಚರ್ಚೆಗೆ ಬರಬೇಕು ಎಂದು ವಿಚಾರವಾದಿಗಳು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು.

‘ಸಂಶೋಧಕ ಹ.ಕ.ರಾಜೇಗೌಡರು ಸಂಗ್ರಹಿಸಿದ ಲಾವಣಿಯಲ್ಲಿ ಉರಿಗೌಡ, ದೊಡ್ಡ ನಂಜೇಗೌಡರು ಟಿಪ್ಪು ಕೊಂದಿದ್ದಾರೆ ಎಂಬ ಮಾಹಿತಿ ಇದೆ ಎಂದು ಹೇಳುತ್ತಿರುವುದೇ ಶುದ್ಧ ಸುಳ್ಳು. ಚುನಾವಣೆ ಸಂದರ್ಭದಲ್ಲಿ ಅಭಿವೃದ್ಧಿ ಮಾತನಾಡುವುದನ್ನು ಬಿಟ್ಟು ಕಾಲ್ಪನಿಕ ಕತೆಯ ಮೂಲಕ ಜನರ ದಿಕ್ಕು ತಪ್ಪಿಸಲಾಗುತ್ತಿದೆ’ ಎಂದು ಸಾಹಿತಿ ಡಾ.ಜಗದೀಶ್‌ ಕೊಪ್ಪ ಆರೋಪಿಸಿದರು.

‘ಟಿಪ್ಪು ಸುಲ್ತಾನ್‌ ಬ್ರಾಹ್ಮಣರ, ಶ್ರೀಮಂತರ ಜಮೀನು ಕಿತ್ತು ಬಡವರಿಗೆ ಹಂಚಿದ್ದ, ಶರಣಾಗತರಾದ ಸೈನಿಕರಿಗೆ ಭೂಮಿ ಕೊಟ್ಟಿದ್ದ. ಭೂಮಿ ಕಿತ್ತುಕೊಂಡ ಸೇಡಿಗಾಗಿ ಸುಳ್ಳಿನ ಕತೆ ಸೃಷ್ಟಿಸುತ್ತಿದ್ದಾರೆ. ಟಿಪ್ಪು ಸತ್ತ ಇತಿಹಾಸವನ್ನು ಬ್ರಿಟೀಷರು ಪರಿಪೂರ್ಣವಾಗಿ ದಾಖಲಿಸಿದ್ದಾರೆ. ಇತಿಹಾಸ ದಾಖಲಿಸುವುದನ್ನು ನಾವು ಅವರಿಂದ ಕಲಿಯಬೇಕು. ಟಿಪ್ಪು ಇತಿಹಾಸದ ಬಗ್ಗೆ ಬಹಿರಂಗ ಚರ್ಚೆಗೆ ಬರಬೇಕು, ಎಲ್ಲದಕ್ಕೂ ಸಾಕ್ಷಿ ಒದಗಿಸಲಾಗುವುದು’ ಎಂದರು.

ADVERTISEMENT

‘ಟಿಪ್ಪು ಕೊಂದ ಕಿರೀಟ ಮಂಡ್ಯ ಒಕ್ಕಲಿಗರಿಗೆ ಬೇಕಿಲ್ಲ, ಕೊಂದು ಆಳುವ ಸಂಸ್ಕೃತಿ ಮಂಡ್ಯದ್ದಲ್ಲ. ಸುಳ್ಳುಗಳನ್ನು ಸಂಭ್ರಮಿಸುವುದೇ ಬಿಜೆಪಿ ಸಂಸ್ಕೃತಿ. ಇದೇ ಕಾರಣಕ್ಕೆ ಸಚಿವ ಮುನಿರತ್ನ ಸುಳ್ಳಿನ ಚಲನಚಿತ್ರ ನಿರ್ಮಿಸಲು ಹೆಸರು ನೋಂದಣಿ ಮಾಡಿಸಿದ್ದಾರೆ’ ಎಂದು ಆರೋಪಿಸಿದರು.

ನಿವೃತ್ತ ಪ್ರಾಚಾರ್ಯ ಎಂ.ವಿ.ಕೃಷ್ಣ ಮಾತನಾಡಿ ‘ಯುದ್ಧದಲ್ಲಿ ಸಹಾಯ ಮಾಡಿದವರಿಗೆ ಬ್ರಿಟೀಷರು ಹಳ್ಳಿ, ಭೂಮಿ ಇನಾಂ ಕೊಟ್ಟಿದ್ದರು. ಉರಿಗೌಡ, ನಂಜೇಗೌಡರು ಟಿಪ್ಪು ಕೊಂದಿದ್ದರೆ ಅವರಿಗೆ ನೀಡಿದ್ದ ಹಳ್ಳಿ ಯಾವುದು, ಭೂಮಿ ಎಲ್ಲಿದೆ? ಸುಳ್ಳಿನ ಕತೆಯ ಮೂಲಕ ಮಂಡ್ಯ ಜನರಿಗೆ ಅವಮಾನ ಮಾಡಲಾಗುತ್ತಿದೆ’ ಎಂದರು.

ದಸಂಸ ಮುಖಂಡ ಗುರುಪ್ರಸಾದ್‌ ಕೆರಗೋಡು ‘ಟಿಪ್ಪು ನಿಧನ, ಆತನ ಕೊಡುಗೆ ಕುರಿತಾಗಿ ಮಾರ್ಚ್‌ 26ರಂದು ನಗರದಲ್ಲಿ ವಿಚಾರ ಸಂಕಿರಣ, ಸಂವಾದ ಆಯೋಜನೆ ಮಾಡಲಾಗಿದೆ’ ಎಂದರು. ಕೆ.ಬೋರಯ್ಯ, ಉಗ್ರನರಸಿಂಹೇಗೌಡ, ಕೆಂಪೂಗೌಡ, ಅಭಿರುಚಿ ಗಣೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.