ADVERTISEMENT

ಟಿಪ್ಪು ಸುಲ್ತಾನ್‌ ಬಗ್ಗೆ ಪೂರ್ವಾಗ್ರಹ ಸಲ್ಲದು: ದೇವಿ

ಜನವಾದಿ ಮಹಿಳಾ ಸಂಘಟನೆ ಕಾರ್ಯದರ್ಶಿ ದೇವಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 3:17 IST
Last Updated 5 ಜನವರಿ 2026, 3:17 IST
ಶ್ರೀರಂಗಪಟ್ಟಣ ಸಮೀಪದ ರಾಜೀವ್‌ನಗರದಲ್ಲಿ ಮುಸ್ಲಿಂ ಸೌಹಾರ್ದ ಒಕ್ಕೂಟ ಹಾಗೂ ಇನ್ಸಾಫ್‌ ಮೈಸೂರು ಸಹಯೋಗದಲ್ಲಿ ಭಾನುವಾರ ನಡೆದ ಕೋಮು ಸೌಹಾರ್ದ ಸಭೆಯಲ್ಲಿ ಮುಸ್ಲಿಂ ಸೌಹಾರ್ದ ಒಕ್ಕೂಟದ ಗೌರವಾಧ್ಯಕ್ಷ ಇಲ್ಯಾಸ್ ಅಹಮದ್‌ ಖಾನ್‌ ಮಾತನಾಡಿದರು
ಶ್ರೀರಂಗಪಟ್ಟಣ ಸಮೀಪದ ರಾಜೀವ್‌ನಗರದಲ್ಲಿ ಮುಸ್ಲಿಂ ಸೌಹಾರ್ದ ಒಕ್ಕೂಟ ಹಾಗೂ ಇನ್ಸಾಫ್‌ ಮೈಸೂರು ಸಹಯೋಗದಲ್ಲಿ ಭಾನುವಾರ ನಡೆದ ಕೋಮು ಸೌಹಾರ್ದ ಸಭೆಯಲ್ಲಿ ಮುಸ್ಲಿಂ ಸೌಹಾರ್ದ ಒಕ್ಕೂಟದ ಗೌರವಾಧ್ಯಕ್ಷ ಇಲ್ಯಾಸ್ ಅಹಮದ್‌ ಖಾನ್‌ ಮಾತನಾಡಿದರು   

ಶ್ರೀರಂಗಪಟ್ಟಣ: ‘ನಿರ್ದಿಷ್ಟ ಧರ್ಮಕ್ಕೆ ಸೇರಿದವನು ಎಂಬ ಕಾರಣಕ್ಕೆ ಟಿಪ್ಪು ಸುಲ್ತಾನ್‌ ಬಗ್ಗೆ ಪೂರ್ವಾಗ್ರಹ ಸಲ್ಲದು’ ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಕಾರ್ಯದರ್ಶಿ ದೇವಿ ಹೇಳಿದರು.

ತಾಲ್ಲೂಕಿನ ಗಡಿ ಭಾಗದ ರಾಜೀವ್‌ನಗರದಲ್ಲಿ ಮುಸ್ಲಿಂ ಸೌಹಾರ್ದ ಒಕ್ಕೂಟ ಹಾಗೂ ಇನ್ಸಾಫ್‌ ಮೈಸೂರು ಸಂಘಟನೆಯ ಸಹಯೋಗದಲ್ಲಿ ಭಾನುವಾರ ನಡೆದ ಕೋಮು ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿದರು.

‘ಟಿಪ್ಪು ಭೂ ರಹಿತರಿಗೆ ಜಮೀನು ಹಂಚಿದ್ದ. ಹಿಂದೂ ದೇವಾಲಯಗಳನ್ನು ರಕ್ಷಿಸಿ, ಪೋಷಿಸಿದ್ದ. ತನ್ನ ರಾಜ್ಯದಲ್ಲಿ ಮದ್ಯ ಮತ್ತು ಜೂಜು ನಿಷೇಧಿಸಿದ್ದ. ಅವನ ಜನಪರ ಕಾರ್ಯಗಳನ್ನು ಜನರಿಗೆ ತಿಳಿಸಬೇಕು. ಏಳೆಂಟು ವರ್ಷಗಳ ಈಚೆಗೆ ಶ್ರೀರಂಗಪಟ್ಟಣದಲ್ಲಿ ಆರಂಭವಾಗಿರುವ ಹನುಮಾನ್‌ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ಸಂದರ್ಭದಲ್ಲಿ ಟಿಪ್ಪು ಬಗ್ಗೆ ಟೀಕೆ, ಟಿಪ್ಪಣಿಗಳು ಕೇಳಿ ಬರುತ್ತಿದ್ದು, ತಪ್ಪು ಕಲ್ಪನೆಗಳನ್ನು ದೂರಮಾಡಬೇಕು’ ಎಂದು ತಿಳಿಸಿದರು.

ADVERTISEMENT

ಪ್ರಜ್ಞಾವಂತರ ವೇದಿಕೆ ಸಂಚಾಲಕ ಸಿ.ಎಸ್‌. ವೆಂಕಟೇಶ್ ಮಾತನಾಡಿ, ‘ಧರ್ಮದ ಹೆಸರಿನಲ್ಲಿ ಒಬ್ಬ ವ್ಯಕ್ತಿ ಅಥವಾ ಇಡೀ ಸಮುದಾಯನ್ನು ತೇಜೋವಧೆ ಮಾಡಬಾರದು. ಕೆಲವು ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಸ್ವಾರ್ಥ ಸಾಧನೆಗಾಗಿ ಟಿಪ್ಪು ಸುಲ್ತಾನ್‌ ಬಗ್ಗೆ ಅಪಪ್ರಚಾರ ಮಾಡುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಇತಿಹಾಸ ಸಂಶೋಧಕ ಕಲೀಮುಲ್ಲಾ, ‘ಹಿಂದೂ, ಮುಸ್ಲಿಂ, ಕ್ರೈಸ್ತರಾದಿಯಾಗಿ ಯಾರೇ ತಪ್ಪು ಮಾಡಿದರೂ ಖಂಡಿಸಬೇಕು. ಉತ್ತಮ ನಡತೆಯ ಮೂಲಕ ಇತರರಿಗೆ ಮಾದರಿಯಾಗಬೇಕು. ಮುಸ್ಲಿಮರು ಪ್ರಾದೇಶಿಕ ಭಾಷೆ ಕಲಿತರೆ ಇತರ ಧರ್ಮೀಯರ ಜತೆ ಸಾಮರಸ್ಯ ಸಾಧ್ಯವಾಗಲಿದೆ’ ಎಂದರು.

‘ಟಿಪ್ಪು ಸುಲ್ತಾನನ ನೈಜ ಸಾಧನೆಗಳನ್ನು ಮನೆ ಮನೆಗಳಿಗೆ ಮುಟ್ಟಿಸಬೇಕು. ವಿರೋಧಿಗಳಿಗೆ ಆತನ ಶೌರ್ಯ ಮತ್ತು ಜನಪರ ಯೋಜನೆಗಳ ಬಗ್ಗೆ ತಿಳಿಸಬೇಕು’ ಎಂದು ಮಹಮದ್‌ ತಾಹೇರ್ ಹೇಳಿದರು.

ಇನ್ಸಾಫ್‌ ಮೈಸೂರು ಸಂಘಟನೆಯ ನೂರ್‌ ಮಹಮದ್‌ ಮರ್ಚೆಂಟ್, ವಕೀಲ ಬಾಬುರಾಜ್, ಸಾಹಿತಿ ಸಾ.ವೆ.ರ. ಸ್ವಾಮಿ, ಕರ್ನಾಟಕ ಹೈ ಕೋರ್ಟ್‌ ವಕೀಲ ಎಂ.ಎಸ್‌. ಮುಕ್ಕರಂ, ಮುಸ್ಲಿ ಸೌಹಾರ್ದ ಒಕ್ಕೂಟದ ಗೌರವಾಧ್ಯಕ್ಷ ಇಲ್ಯಾಸ್ ಅಹಮದ್ ಖಾನ್‌, ಕ್ಯಾತನಹಳ್ಳಿ ಚಂದ್ರಣ್ಣ, ಸಿಪಿಎಂ ಮುಖಂಡರಾದ ಟಿ.ಎಲ್‌. ಕೃಷ್ಣೇಗೌಡ, ಬಿ.ಪಿ. ಸೂರ್ಯ, ಎನ್‌.ಎಲ್‌. ಭರತ್‌ರಾಜ್‌, ವಿಜಯಕುಮಾರ್‌, ಮಂಡ್ಯ ಮುಕುಂದ, ಟಿ.ಡಿ. ನಾಗರಾಜು, ಸಯ್ಯದ್‌ಖಾನ್‌ ಬಾಬು ಮಾತನಾಡಿದರು.

ಮುಸ್ಲಿಂ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಮಹಮದ್‌ ಅಪ್ಸರ್‌, ಕಾರ್ಯದರ್ಶಿ ಮಹಮದ್‌ ಸುಕ್ಕೂರ್‌, ಅಯೂಬ್‌, ಉಮರ್‌, ಬಿಜಿವಿಎಸ್‌ ಸಂಘಟನೆಯ ವಜ್ರಮುನಿ, ಪಾಲಹಳ್ಳಿ ಅನಿಲ್‌ಕುಮಾರ್‌, ಮಹಮದ್‌ ಪಾಷ, ಕೆ.ಎಸ್‌. ಜಯಶಂಕರ್‌, ಕೆ.ಶೆಟ್ಟಹಳ್ಳಿ ಅಪ್ಪಾಜಿ, ಖೈರುನ್ನೀಸಾ ಸಭೆಯಲ್ಲಿ ಪಾಲ್ಗೊಂಡಿದ್ದರು.

ಜ.30ಕ್ಕೆ ಸಾಮರಸ್ಯ ಸಮಾವೇಶ

‘ಜ.30ರಂದು ಹುತಾತ್ಮ ದಿನಾಚರಣೆಯ ನಿಮಿತ್ತ ಪಟ್ಟಣದಲ್ಲಿ ಸಾಮರಸ್ಯ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಮನುಷ್ಯ ಧರ್ಮ ಜಾತಿ ಪಂಗಡಗಳನ್ನು ಮೀರಿ ಬದುಕುವ ಅಗತ್ಯತೆ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಮಾನವ ಪರ ಸಂಘಟನೆಗಳು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು’ ಎಂದು ಸಿಪಿಎಂ ಮುಖಂಡ ಜಗನ್ನಾಥ್‌ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.