
ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದಲ್ಲಿ ಈಚೆಗೆ ನಡೆದ ಸೆಗಣಿ ಓಕುಳಿ ಹಬ್ಬದಲ್ಲಿ ಸೆಣಸಾಡುತ್ತಿರುವ ಯುವಕರು
ಕಿಕ್ಕೇರಿ: ಹೋಬಳಿಯ ಸಾಸಲು ಗ್ರಾಮದಲ್ಲಿ ಸೆಗಣಿ ಓಕುಳಿ ಕಾಳಗದ ಹಬ್ಬ ಈಚೆಗೆ ಸಡಗರದಿಂದ ಜರುಗಿತು.
ಶಿವ ಹಾಗೂ ಭಕ್ತ ಜಂಗಮ ಭೈರವರಾಜರಿಗೆ ಭಕ್ತಿಯ ವಿಚಾರದಲ್ಲಿ ಪಂಥ ನಡೆದು ಭಕ್ತ ಭೈರವರಾಜು ವಿಜೇತರಾಗುತ್ತಾರೆ. ದೀಪಾವಳಿ ಹಬ್ಬದಲ್ಲಿ ಈ ಪ್ರಯುಕ್ತ ಸೋತ ಶಿವನ ಹೆಸರಿನಲ್ಲಿ, ಭಕ್ತ ಭೈರವರಾಜರ ಹೆಸರಿನಲ್ಲಿ ಸೆಗಣಿ ಓಕುಳಿ ಹಬ್ಬ ನಡೆಯುವುದು ವಾಡಿಕೆ. ವಿಜೇತರಾದ ಭೈರವರಾಜರು ಸ್ವರ್ಗಕ್ಕೆ ತಲುಪಿದ ಪುಣ್ಯದಿನ ಕೂಡ ದೀಪಾವಳಿ ಎಂಬ ಪ್ರತೀತಿ ಇದೆ.
ಗ್ರಾಮದಲ್ಲಿನ ರಂಗಸ್ಥಳದಲ್ಲಿ ಶಿವಭಕ್ತ ಜಂಗಮರಾಗಿ ಸಾಸಲು ಗ್ರಾಮದ ಹಾಲುಮತದ ಯುವಕರು, ಶಿವನ ಪರವಾಗಿ ವೀರಶೈವ ಪಂಗಡದ ಯುವಕರು ಕಾಳಗದಲ್ಲಿ ಭಾಗವಹಿಸಿದ್ದರು. ಸೆಗಣಿಯನ್ನು ರಾಶಿ ಮಾಡಿಕೊಂಡು, ಕಾಲಿನಲ್ಲಿ ತುಳಿದು, ಕೈಯಲ್ಲಿ ಕಿವುಚಿ ಹದವಾಗಿ ಉಂಡೆ ತಯಾರಿಸಿಕೊಂಡು ಕಾಳಗಕ್ಕೆ ಸಿದ್ಧರಾದ ಯುವಕರು, ಪರಸ್ಪರ ಸೆಗಣಿಯ ಉಂಡೆಯನ್ನು ಬಿರುಸಿನಿಂದ ಎಸೆದರು. ಅಂತಿಮವಾಗಿ ಭಕ್ತ ಜಂಗಮರ ಗುಂಪಾದ ಸಾಸಲುಕೊಪ್ಪಲು ಗುಂಪಿನ ಯುವಕರು ಹೆಚ್ಚು ಉಂಡೆಯನ್ನು ಶಿವನ ಗುಂಪಿನವರಿಗೆ ಬೀಸಿ ಸೋಲಿಸಿ ವಿಜೇತರಾದರು.
ಬಳಿಕ ಪುಷ್ಕರಿಣಿಯಲ್ಲಿ ಮಿಂದು ಸೋಮೇಶ್ವರ, ಶಂಭುಲಿಂಗೇಶ್ವರ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದರು.
ವಿವಿಧೆಡೆ ಭಕ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.