ADVERTISEMENT

ಆಲದ ಮರದ ಕೊಂಬೆಗಳಿಗೆ ಕೊಡಲಿ

ಮರದಲ್ಲಿ ಆಶ್ರಯ ಪಡೆದಿದ್ದ ನೂರಾರು ಪಕ್ಷಿಗಳ ಜೀವಕ್ಕೆ ಕುತ್ತು, ಸ್ಥಳೀಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 10:02 IST
Last Updated 5 ಡಿಸೆಂಬರ್ 2019, 10:02 IST
ಮದ್ದೂರು ಪಟ್ಟಣದ ಗೊರವನಹಳ್ಳಿ ವೃತ್ತದಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜಿನ ಆವರಣದಲ್ಲಿರುವ ಆಲದ ಮರದ ಕೊಂಬೆಗಳನ್ನು ಕಡಿಯಲಾಗಿದೆ (ಎಡಚಿತ್ರ). ಆಲದ ಮರದಲ್ಲಿ ಗೂಡು ಕಟ್ಟಿದ್ದ ಪಕ್ಷಿಯ ಮರಿಯೊಂದು ಮೃತಪಟ್ಟಿರುವುದನ್ನು ಸ್ಥಳೀಯರು ತೋರಿಸಿದರು
ಮದ್ದೂರು ಪಟ್ಟಣದ ಗೊರವನಹಳ್ಳಿ ವೃತ್ತದಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜಿನ ಆವರಣದಲ್ಲಿರುವ ಆಲದ ಮರದ ಕೊಂಬೆಗಳನ್ನು ಕಡಿಯಲಾಗಿದೆ (ಎಡಚಿತ್ರ). ಆಲದ ಮರದಲ್ಲಿ ಗೂಡು ಕಟ್ಟಿದ್ದ ಪಕ್ಷಿಯ ಮರಿಯೊಂದು ಮೃತಪಟ್ಟಿರುವುದನ್ನು ಸ್ಥಳೀಯರು ತೋರಿಸಿದರು   

ಮದ್ದೂರು: ಪಟ್ಟಣದ ಗೊರವನಹಳ್ಳಿ ವೃತ್ತದಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜಿನ ಆವರಣದಲ್ಲಿ ಬೃಹತ್‌ ಆಲದ ಮರ. ಆ ಮರದ ತುಂಬೆಲ್ಲಾ ನೂರಾರು ಪಕ್ಷಿಗಳು ಗೂಡು ಕಟ್ಟಿಕೊಂಡು ವಾಸ ಮಾಡುತ್ತಿದ್ದವು. ಆದರೆ, ಪಕ್ಷಿಗಳ ಹಿಕ್ಕೆ ಜನರ ಮೇಲೆ ಬೀಳುತ್ತದೆ, ಮರದ ಕೊಂಬೆಗಳು ವಿದ್ಯುತ್‌ ತಂತಿಗೆ ತಾಗುತ್ತದೆ ಎಂಬ ನೆಪವೊಡ್ಡಿ ಸೆಸ್ಕ್‌ ಸಿಬ್ಬಂದಿ ಮರದ ಕೊಂಬೆಗಳನ್ನು ಬುಧವಾರ ಕಡಿದು ಹಾಕಿದ್ದಾರೆ.

ಮರದಲ್ಲಿ ಕಟ್ಟಿದ್ದ ಗೂಡುಗಳು ಕೆಳಗೆ ಬಿದ್ದಿದ್ದು, ಅದರಲ್ಲಿದ್ದ ಮರಿಗಳು ಮೃತಪಟ್ಟಿವೆ. ಮೊಟ್ಟೆಗಳು ಒಡೆದು ಹಾಳಾಗಿವೆ. ಕೊಂಬೆಗಳನ್ನು ಕಡೆದ ಸೆಸ್ಕ್‌ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯುತ್‌ ಕಂಬವು ರಸ್ತೆಯ ಇನ್ನೊಂದು ಬದಿಯಲ್ಲಿ ಹಾದು ಹೋಗಿದೆ. ಮರದ ಕೊಂಬೆಗಳು ವಿದ್ಯುತ್‌ ತಂತಿಗೆ ತಾಗುವುದು ಕಡಿಮೆ. ಕೆಲವೊಂದು ಕೊಂಬೆಗಳು ಮಾತ್ರ ತಂತಿಗೆ ತಗುಲುತ್ತಿದ್ದವು. ಅದನ್ನು ಮಾತ್ರ ಕತ್ತರಿಸಬಹುದಿತ್ತು. ಆದರೆ, ಮರದ ಕೆಳಭಾಗದ ಒಂದು ಬದಿಯ ಎಲ್ಲ ಕೊಂಬೆಗಳನ್ನೂ ಕಡಿಯಲಾಗಿದೆ. ಇದರಿಂದ ಕೊಕ್ಕರೆ ಜಾತಿಯ ಪಕ್ಷಿಗಳ ಜೀವಕ್ಕೆ ಕುತ್ತು ಬಂದಿದೆ.

ADVERTISEMENT

ರಸ್ತೆಯ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿಕೊಂಡ ಪೆಟ್ಟಿಗೆ ಅಂಗಡಿ ಮಾಲೀಕರಿಗೆ, ಅಲ್ಲಿಗೆ ಬರುವ ಗಿರಾಕಿಗಳಿಗೆ, ಪಾದಚಾರಿ ಮಾರ್ಗದಲ್ಲಿ ಸಂಚರಿಸುವ ಜನರಿಗೆ ಪಕ್ಷಿಗಳ ಹಿಕ್ಕೆ ಬೀಳುತ್ತದೆ ಎಂಬ ಏಕಮಾತ್ರ ಉದ್ದೇಶದಿಂದ ಬೃಹತ್‌ ಗಾತ್ರದ ಮರದ ಕೊಂಬೆಗಳನ್ನು ಕತ್ತರಿಸಲಾಗಿದೆ.

ಈ ಭಾಗದಲ್ಲಿ ಓಡಾಡುವ ಜನರು ಹಾಗೂ ಅಂಗಡಿಗಳಿಗೆ ಬರುವ ಗ್ರಾಹಕರ ಮೇಲೆ ಪಕ್ಷಿಗಳ ಹಿಕ್ಕೆಗಳು ಬೀಳುತ್ತಿದ್ದವು. ಇದರಿಂದ ವ್ಯಾಪಾರ ಮಾಡಲು ಕಷ್ಟವಾಗುತ್ತಿತ್ತು. ಹೀಗಾಗಿ, ಮರದ ಕೊಂಬೆಗಳನ್ನು ಕತ್ತರಿಸಲಾಗಿದೆ ಎಂದು ರಸ್ತೆ ಬದಿ ವ್ಯಾಪಾರಿಯೊಬ್ಬರು ಹೇಳಿದರು.

ಪರಿಸರ ಸಂರಕ್ಷಣೆ ಮಾಡಬೇಕು ಎಂದು ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಸೆಸ್ಕ್‌ ಸಿಬ್ಬಂದಿಯು ಮರಗಳನ್ನು ಕಡಿಯುವುದಕ್ಕೆ ತೋರಿಸುವ ಆಸಕ್ತಿಯನ್ನು ಜನರಿಗೆ ಸಮರ್ಪಕ ವಿದ್ಯುತ್‌ ನೀಡಲು ತೋರಿಸುವುದಿಲ್ಲ. ಈ ಆಲದ ಮರದಲ್ಲಿ ನೂರಾರು ಪಕ್ಷಿಗಳು ಆಶ್ರಯ ಪಡೆದಿದ್ದವು. ಅವುಗಳ ನಾಶಕ್ಕೆ ಸೆಸ್ಕ್‌ ಸಿಬ್ಬಂದಿ ಮುನ್ನುಡಿ ಬರೆದಿದ್ದಾರೆ ಎಂದು ಸ್ಥಳೀಯ ನಿವಾಸಿಯೊಬ್ಬರು ದೂರಿದರು.

ಕೊಂಬೆ ಕತ್ತರಿಸುವಂತೆ ಮನವಿ ಮಾಡಿದ್ದ ಪುರಸಭೆ ಸದಸ್ಯ
ಮರದ ಮೇಲೆ ಆಶ್ರಯ ಪಡೆದಿರುವ ಪಕ್ಷಿಗಳು ಇಡುವ ಹಿಕ್ಕೆಗಳಿಂದ ಜನರಿಗೆ ತೊಂದರೆ ಆಗುತ್ತಿತ್ತು. ಅಲ್ಲದೆ, ಕಾಲೇಜು ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಅವರ ಬಟ್ಟೆಗಳು ಗಲೀಜು ಆಗುತ್ತಿತ್ತು. ದುರ್ವಾಸನೆಯೂ ಬೀರುತ್ತಿತ್ತು. ಕೊಂಬೆಗಳನ್ನು ಕಡಿಯುವಂತೆ ವ್ಯಾಪಾರಿಗಳು ಆಗ್ರಹಿಸುತ್ತಿದ್ದಾರೆ. ಹೀಗಾಗಿ ಕೊಂಬೆಗಳನ್ನು ಕಡಿಯುವಂತೆ ಸ್ಥಳೀಯ ಪುರಸಭೆ ಸದಸ್ಯರು ಮನವಿ ಮಾಡಿದ್ದರು. ಅಲ್ಲದೆ, ವಿದ್ಯುತ್‌ ತಂತಿಗೂ ಕೊಂಬೆಗಳು ತಾಗುತ್ತಿದ್ದವು. ಯಾವುದೇ ಅನಾಹುತ ಆಗದಂತೆ ತಡೆಯಲು ಕೊಂಬೆಗಳನ್ನು ಕತ್ತರಿಸಲಾಗಿದೆ ಎಂದು ಸೆಸ್ಕ್‌ ಸಹಾಯಕ ಎಂಜಿನಿಯರ್‌ ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.