ADVERTISEMENT

ಗಿಡಗಳಿಗೆ ಹುಟ್ಟುಹಬ್ಬ, ನಾಮಕರಣ

ಸಗಣಿಯಿಂದ ತಯಾರಿಸಿದ ಕೇಕ್‌ ಕತ್ತರಿಸಿ ಜನ್ಮದಿನಾಚರಣೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 17:26 IST
Last Updated 12 ನವೆಂಬರ್ 2019, 17:26 IST
ಪಟ್ಟಣದ ಆರ್‌ಟಿಒ‌ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ.ಜಿ.ಎನ್. ಪ್ರಸಾದ್ ಅವರು ಸಗಣಿಯಿಂದ ತಯಾರಿಸಿದ ಕೇಕ್ ಕತ್ತರಿಸಿ ಗಿಡಗಳ ಹುಟ್ಟುಹಬ್ಬ ಆಚರಿಸಿದರು
ಪಟ್ಟಣದ ಆರ್‌ಟಿಒ‌ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ.ಜಿ.ಎನ್. ಪ್ರಸಾದ್ ಅವರು ಸಗಣಿಯಿಂದ ತಯಾರಿಸಿದ ಕೇಕ್ ಕತ್ತರಿಸಿ ಗಿಡಗಳ ಹುಟ್ಟುಹಬ್ಬ ಆಚರಿಸಿದರು   

ನಾಗಮಂಗಲ: ಪಟ್ಟಣದ ಆರ್‌ಟಿಒ ಕಚೇರಿ ಆವರಣದಲ್ಲಿ ನೆಟ್ಟಿದ್ದ ಗಿಡಗಳಿಗೆ ಒಂದು ವರ್ಷ ತುಂಬಿದ ಹಿನ್ನೆಲೆ ಗಿಡಗಳ ಹುಟ್ಟುಹಬ್ಬ ಮತ್ತು ನಾಮಕರಣ ಮಹೋತ್ಸವ ಆಚರಿಸಲಾಯಿತು.

ಆವರಣದಲ್ಲಿರುವ 87ಕ್ಕೂ ಹೆಚ್ಚು ಹೊಂಗೆ ಮರಗಳು ಮತ್ತು 100ಕ್ಕೂ ಹೆಚ್ಚು ಇತರೆ ಮರಗಳಿಗೆ ಸುಮಿತ್ರಾ, ಪೂರ್ವಿಕಾ, ಚಿತ್ರಾ, ಮಧುರಾ, ಚೆಲುವಿ, ಭಾರತಿ, ಮಾಳವಿಕ ಮತ್ತು ಧಾರಿಣಿ ಎಂಬ ಹೆಸರನ್ನು ಇಡಲಾಯಿತು. ಜೊತೆಗೆ, ಮರಗಳಿಗೆ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮದ ಹೆಣ್ಣು ಮಕ್ಕಳ ಹೆಸರನ್ನು ಇಟ್ಟು ಭಾವೈಕ್ಯ ಸಂದೇಶವನ್ನು ಸಾರಲಾಯಿತು.

ಸಗಣಿಯಿಂದ ಕೇಕ್ ತಯಾರಿಸಿ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಎಲ್ಲಾ ಗಿಡಗಳ ಪಾತಿಗಳಿಗೆ ಕೊಟ್ಟಿಗೆ ಗೊಬ್ಬರ ಮತ್ತು ಕೆಂಪು ಮಣ್ಣು ಹಾಕಿ ಪೋಷಣೆ ಮಾಡಲಾಯಿತು. ನಂತರ, ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳಿಂದ ಕೇಕ್ ಕತ್ತರಿಸಿ ಪ್ರತಿ ಗಿಡಗಳಿಗೂ ಹಾಕಲಾಯಿತು. ಪಟ್ಟಣದ ನ್ಯಾಷನಲ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಎಲ್ಲಾ ಗಿಡ ಮರಗಳನ್ನೂ ಪರಿಚಯಿಸಲಾಯಿತು.

ADVERTISEMENT

ಎಸ್.ಬಿ.ಎಲ್ ವಾಯುಮಾಲಿನ್ಯ ತಪಾಸಣಾ ಕೇಂದ್ರ, ಹಂಪ ವಾಯುಮಾಲಿನ್ಯ ತಪಾಸಣಾ ಕೇಂದ್ರ, ವಾಹನ ಚಾಲನಾ ತರಬೇತಿ ಕೇಂದ್ರದ ಮಾಲೀಕರು ಮತ್ತು ನ್ಯಾಷನಲ್ ಪ್ರೌಢಶಾಲೆ ವಿದ್ಯಾರ್ಥಿಗಳು ಇದ್ದರು.

ವಾಯುಮಾಲಿನ್ಯ ತಪಾಸಣೆ ಕೇಂದ್ರದ ಮಾಲೀಕ ನಂದೀಶ್ ಮಾತನಾಡಿ, ‘ಮರಗಳ ಹನನದಿಂದ ಪರಿಸರದ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ಗಿಡ ನೆಟ್ಟು ಪೋಷಿಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.