
ಏಕಕಾಲಕ್ಕೆ 30 ಮಂದಿ ಹಾಡುಗಾರರಿಂದ ಪಂಚರತ್ನ ಕೃತಿಗಳ ಗಾಯನ ಗೋಷ್ಠಿ | ಕೇಳುಗರಿಗೆ ಮುದ ನೀಡಿದ ಡೋಲು, ನಾಗಸ್ವರ ವಾದನ | ಮಹಿಳಾ ತಂಡದಿಂದ ಭಜನೆ
ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಬುಧವಾರ ನಡೆದ ಸಂಗೀತ ಕ್ಷೇತ್ರದ ದಿಗ್ಗಜ ತ್ಯಾಗರಾಜರ 179ನೇ ಆರಾಧನಾ ಮಹೋತ್ಸವದಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ವಿದ್ವಾಂಸರು ಸಂಗೀತದ ರಸದೌತಣ ಉಣಬಡಿಸಿದರು.
ಇಲ್ಲಿನ ಮುಖ್ಯ ಬೀದಿಯಲ್ಲಿರುವ ಕೋದಂಡರಾಮ ದೇವಾಲಯ ಸಭಾಂಗಣದ ತ್ಯಾಗರಾಜರ ಮೃತ್ತಿಕೆಯ ಬೃಂದಾವನದ ಮುಂದೆ ಬೆಳಿಗ್ಗೆಯಿಂದ ಸಂಜೆವರೆಗೂ ಸಂಗೀತ ಕಾರ್ಯಕ್ರಮಗಳು ನಿರಂತರವಾಗಿ ನಡೆದವು. ಹರೀಶ್ ಪಾಂಡವ ಅವರು ತ್ಯಾಗರಾಜರ ರಚನೆಯ, ಗೌಳಿಪಯ ರಾದ ‘ತೆರತೀಯಗರಾದ’, ಪಯವರಾಳಿ ರಾಗದ ‘ನಿನ್ನನೇಂ ನೆಮ್ಮಿನಾನುರಾ’ ಮತ್ತು ಪುರಂದರದಾಸರ ರಚನೆ ಸಿಂಧೂ ಭೈರವಿ ರಾಗದ ‘ತಿರುಪತಿ ವೆಂಕಟರಮಣ’ ಇತರ ಗೀತೆಗಳನ್ನು ಹಾಡಿದರು.
ರಾಕೇಶ್ ಅಯ್ಯಂಗಾರ್, ಮೈಸೂರಿನ ಗಾಯತ್ರಿ ಸತ್ಯನಾರಾಯಣ ಮತ್ತು ತಂಡದ ಗಾಯನ ಗೋಷ್ಠಿ ಗಮನ ಸೆಳೆಯಿತು. ಪಟ್ಟಣದ ರಾಜೇಶ್ ಮತ್ತು ಪದ್ಮನಾಭ ಅವರ ಕೊಳಲು ಗಾಯನಕ್ಕೆ ನೆರೆದಿದ್ದವರು ತಲೆದೂಗಿದರು. ಯಶಸ್ವಿ ಮತ್ತು ತಂಡ ಪಿಟೀಲು, ವಿಕ್ರಂ ಭಾರದ್ವಾಜ್ ಮತ್ತು ತಂಡ ಮೃದಂಗ, ಗುರುಮೂರ್ತಿಮತ್ತು ತಂಡ ಸ್ಯಾಕ್ಸೋಫೋನ್ ನುಡಿಸಿತು. ಏಕಕಾಲಕ್ಕೆ 30 ಮಂದಿ ಹಾಡುಗಾರರು ಪಂಚರತ್ನ ಕೃತಿಗಳ ಗಾಯನ ಗೋಷ್ಠಿ ನಡೆಸಿಕೊಟ್ಟರು. ಮಹಿಳಾ ತಂಡದಿಂದ ಭಜನೆ ನಡೆಯಿತು. ಡೋಲು ಮತ್ತು ನಾಗಸ್ವರ ವಾದನಗಳು ಕೇಳುಗರಿಗೆ ಮುದ ನೀಡಿದವು.
ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಊಂಛವೃತ್ತಿ ನಡೆಯಿತು. ತ್ಯಾಗರಾಜರ ಭಾವಚಿತ್ರವನ್ನು ಮಂಗಳ ವಾದ್ಯ ಸಹಿತ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ತ್ಯಾಗರಾಜರ ಭಾವಚಿತ್ರಕ್ಕೆ ಪೂಜೆಗಳು ನಡೆದವು. ಸಂಜೆ ರಾಜಬೀದಿಗಳಲ್ಲಿ ವಾದ್ಯಗೋಷ್ಠಿ ಜರುಗಿತು.
ತ್ಯಾಗರಾಜರ ಆರಾಧನಾ ಮಹೋತ್ಸವದ ಅಂಗವಾಗಿ ತ್ಯಾಗರಾಜರ ಮೃತ್ತಿಕೆಯುಳ್ಳ ಬೃಂದಾವನಕ್ಕೆ ಅಭಿಷೇಕ ಮಾಡಲಾಯಿತು. ಕೋದಂಡರಾಮ ದೇವಾಲಯದ ಪ್ರಧಾನ ಅರ್ಚಕ ವಿನಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ಪೂಜೆಗಳು ನಡೆದವು. ಸ್ಥಳೀಯರು ಮಾತ್ರವಲ್ಲದೆ ಮೈಸೂರು, ಬೆಂಗಳೂರು, ಹಾಸನ, ಮಂಡ್ಯ ಇತರ ಕಡೆಗಳಿಂದಲೂ ಸಂಗೀತ ಪ್ರಿಯರು ಆಗಮಿಸಿದ್ದರು.
ತ್ಯಾಗರಾಜ ಆರಾಧನಾ ಮಹೋತ್ಸವ ಸಮಿತಿ ಅಧ್ಯಕ್ಷ ಎಲ್. ಮಂಜುನಾಥ್, ಉಪಾಧ್ಯಕ್ಷ ಜಗದೀಶ್, ಕಾರ್ಯದರ್ಶಿ ಪಿ. ಗುರುಪ್ರಸಾದ್, ಖಜಾಂಚಿ ಎನ್. ವೆಂಕಟೇಶ್, ಯಜಮಾನ್ ಪಿ. ಗೋವಿಂದು, ಮಹಾಲಕ್ಷ್ಮಿ ದೇವಾಲಯದ ಪ್ರಧಾನ ಅರ್ಚಕ ಕೃಷ್ಣಭಟ್ ಇದ್ದರು. ಪ್ರಸಾದ ವಿತರಣೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.