ಮಂಡ್ಯ: ಉಪಲೋಕಾಯುಕ್ತ ಬಿ.ವೀರಪ್ಪ ಅವರು ಜಿಲ್ಲೆಯಲ್ಲಿ ಮೇ 26ರಿಂದ 29ರವರೆಗೆ ವಿವಿಧ ಸರ್ಕಾರಿ ಇಲಾಖೆಗಳಿಗೆ ಭೇಟಿ ನೀಡಿ ಹೋದ ಬೆನ್ನಲ್ಲೇ 26 ಅಧಿಕಾರಿಗಳು ವರ್ಗಾವಣೆಗೊಂಡಿದ್ದಾರೆ. ನಾಲ್ವರು ನೌಕರರು ಅಮಾನತುಗೊಂಡಿದ್ದಾರೆ.
ವೀರಪ್ಪ ಅವರು ಸರ್ಕಾರಿ ಕಚೇರಿ, ಜಾಗ ಸೇರಿದಂತೆ 26 ಸ್ಥಳಗಳಿಗೆ ಭೇಟಿ ಕೊಟ್ಟು ಕಡತಗಳನ್ನು ಪರಿಶೀಲಿಸಿ, ಅಹವಾಲುಗಳನ್ನು ಸ್ವೀಕರಿಸಿದ್ದರು. ಕರ್ತವ್ಯದಲ್ಲಿ ನಿರ್ಲಕ್ಷ್ಯ, ವಿಳಂಬ ಧೋರಣೆ, ಅಕ್ರಮ ಎಸಗಿದ ತಪ್ಪಿತಸ್ಥ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ನಿಗದಿತ ಸಮಯದಲ್ಲಿ ಸೂಚಿಸಿದ ಕೆಲಸಗಳನ್ನು ಪೂರ್ಣಗೊಳಿಸುವಂತೆ ತಾಕೀತು ಮಾಡಿದ್ದರು. ಒಟ್ಟು 22 ಸ್ವಯಂಪ್ರೇರಿತ ದೂರುಗಳನ್ನು ದಾಖಲಿಸಿಕೊಂಡು ಬಿಸಿ ಮುಟ್ಟಿಸಿದ್ದರು. ಇಂಡುವಾಳು ಗ್ರಾಮ ಪಂಚಾಯಿತಿಯ ಪಿಡಿಒ ಆಗಿದ್ದ ವಿಶಾಲಮೂರ್ತಿ ಮತ್ತು ಹಾಲಿ ಪಿಡಿಒ ಯೋಗೇಶ್ ಇಬ್ಬರನ್ನೂ ಅಮಾನತುಗೊಳಿಸಿದ್ದರು.
ವರ್ಗಾವಣೆ ಸಂಚಲನ:
‘ಸ್ವಯಂಪ್ರೇರಿತ ದೂರುಗಳಿಗೆ ಸಂಬಂಧಿಸಿ 26 ಅಧಿಕಾರಿಗಳು ವರ್ಗಾವಣೆಗೊಂಡಿದ್ದಾರೆ. ಕೆಲವರು ತಾವೇ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಕೆಲವರು ‘ಪರಸ್ಪರ ವರ್ಗಾವಣೆ’ಯಡಿ ಸ್ಥಳ ಬದಲಾಯಿಸಿಕೊಂಡಿದ್ದಾರೆ. ನಿಯಮಾನುಸಾರ ಕೆಲವರ ಸ್ಥಳ ಬದಲಾಗಿದೆ’ ಎನ್ನುತ್ತಾರೆ ಜಿಲ್ಲಾ ಲೋಕಾಯುಕ್ತ ಪೊಲೀಸರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ(ಆಡಳಿತ) ಹಾಗೂ ಕೆ.ಆರ್.ಪೇಟೆಯ ಲೋಕೋಪಯೋಗಿ ಇಲಾಖೆಯ ಎಇಇ ಹಾಸನಕ್ಕೆ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಕೇಂದ್ರ ಕಚೇರಿಗೆ ಹಾಗೂ ಸಹಾಯಕ ನಿರ್ದೇಶಕರು ಚಾಮರಾಜನಗರಕ್ಕೆ ವರ್ಗಾವಣೆಯಾಗಿದ್ದಾರೆ. ಮದ್ದೂರು, ಶ್ರೀರಂಗಪಟ್ಟಣ ಮತ್ತು ಮಂಡ್ಯ ತಹಶೀಲ್ದಾರ್‌ಗಳು, ಮಂಡ್ಯ ಮತ್ತು ಪಾಂಡವಪುರದ ಕಾರ್ಯನಿರ್ವಹಣಾಧಿಕಾರಿಗಳು ವರ್ಗಾವಣೆಯಾಗಿದ್ದಾರೆ.
ಡಿಸಿಎಫ್, ಆರ್‌ಎಫ್‌ಒಗಳ ವರ್ಗಾವಣೆ:
ಮುಡಾ ಆಯುಕ್ತರು ಮೈಸೂರಿನ ತರಬೇತಿ ಕೇಂದ್ರಕ್ಕೆ, ಡಿಸಿಎಫ್ ಮೈಸೂರಿಗೆ, ಪಾಂಡವಪುರ ಆರ್‌ಎಫ್‌ಓ ರಾಮನಗರಕ್ಕೆ, ಶ್ರೀರಂಗಪಟ್ಟಣ ಆರ್‌ಎಫ್ಒ ಹುಣಸೂರಿಗೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೇಂದ್ರ ಕಚೇರಿಗೆ ವರ್ಗಾವಣೆಗೊಂಡಿದ್ದಾರೆ.
ವೈದ್ಯಾಧಿಕಾರಿಗಳ ಬದಲಾವಣೆ
ಮಂಡ್ಯ ಮಿಮ್ಸ್ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಮೈಸೂರಿನ ಮುಡಾಕ್ಕೆ ಮಂಡ್ಯ ತಾಲ್ಲೂಕಿನ ಮುಖ್ಯ ವೈದ್ಯಾಧಿಕಾರಿಗಳಿಬ್ಬರು ಮೈಸೂರು ಜಿಲ್ಲಾಸ್ಪತ್ರೆಗೆ ಹಾಗೂ ಪಿರಿಯಾಪಟ್ಟಣ ಆಸ್ಪತ್ರೆಗೆ ಮದ್ದೂರು ವೈದ್ಯಾಧಿಕಾರಿ ಬಂಗಾರಪೇಟೆಗೆ ವರ್ಗಾವಣೆಗೊಂಡಿದ್ದಾರೆ. ಶ್ರೀರಂಗಪಟ್ಟಣ ಮದ್ದೂರು ಮಂಡ್ಯ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಜಿಲ್ಲೆಯ ಬೇರೆಡೆಗೆ ವರ್ಗಾವಣೆಗೊಂಡಿದ್ದಾರೆ. ಶ್ರೀರಂಗಪಟ್ಟಣ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮೈಸೂರಿನ ವಿಭಾಗೀಯ ಕಚೇರಿಗೆ ಮದ್ದೂರು ಮುಖ್ಯಾಧಿಕಾರಿ ಬಿಡದಿ ಪುರಸಭೆಗೆ ಶ್ರೀರಂಗಪಟ್ಟಣ ಎಡಿಎಲ್‌ಆರ್ ಅವರು ಕೇಂದ್ರ ಕಚೇರಿಗೆ ವರ್ಗಾವಣೆಗೊಂಡಿದ್ದಾರೆ ಎಂದು ಜಿಲ್ಲಾ ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.
- ‘ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಸಿಗಲಿ’
ತಪ್ಪಿತಸ್ಥ ಅಧಿಕಾರಿಗಳು ಆರೋಪದಿಂದ ಪಾರಾಗಲು ವರ್ಗಾವಣೆ ಮೊರೆ ಹೋಗಿದ್ದಾರೆ. ಪೊಲೀಸರು ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಕಾಣಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ಒಂದೇ ಕಡೆ ಹೆಚ್ಚು ವರ್ಷ ಬೇರೂರಲು ಅವಕಾಶ ನೀಡಬಾರದು. – ಎಂ.ಬಿ.ನಾಗಣ್ಣಗೌಡ ಮೈಸೂರು ವಿಭಾಗೀಯ ಅಧ್ಯಕ್ಷ ಕರುನಾಡ ಸೇವಕರು ಸಂಘಟನೆ ‘ತಪ್ಪುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಲ್ಲಿಗೆ ವರ್ಗಾವಣೆಯಾದರೂ ತಪ್ಪಿತಸ್ಥ ಅಧಿಕಾರಿಗಳು ಮಾಡಿದ ಅಕ್ರಮ ಅವ್ಯವಹಾರಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರು ಅದಕ್ಕೆ ಉತ್ತರದಾಯಿಯಾಗಿರುತ್ತಾರೆ. ಪ್ರಕರಣಗಳ ವಿಚಾರಣೆ ಮುಂದುವರಿಯುತ್ತದೆ. – ಸುರೇಶ್ ಬಾಬು ಲೋಕಾಯುಕ್ತ ಎಸ್ಪಿ ಮಂಡ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.