
ಮಂಡ್ಯ: ಅಖಂಡ ಭಾರತದಲ್ಲಿ ವೈಭವಯುತ ಸಾಮ್ರಾಜ್ಯ ಕಟ್ಟಿ ಮೆರೆದ ಉಪ್ಪಾರ ಸಮುದಾಯವು ಹಿಂದುಳಿದಿದೆ ಎಂದು ಹೊಸದುರ್ಗದ ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ವಿಷಾದಿಸಿದರು.
ನಗರದ ಗಾಂಧಿ ಭವನದಲ್ಲಿ ಜಿಲ್ಲಾ ಜೈ ಭಗೀರಥ ಉಪ್ಪಾರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶುಕ್ರವಾರ ನಡೆದ ಭಗೀರಥ ಜಯಂತ್ಯುತ್ಸವ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಜನಪ್ರತಿನಿಧಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಭಗೀರಥ ಮಹರ್ಷಿ ಅಸಾಧ್ಯ ಕೆಲಸವನ್ನು ಸಾಧ್ಯ ಮಾಡಿ ತೋರಿಸಿದ್ದಾರೆ, ಅದೇ ರೀತಿ ಬಸವ, ಬುದ್ಧ, ನಾಡಪ್ರಭು ಕೆಂಪೇಗೌಡ, ಸ್ವಾಮಿ ವಿವೇಕಾನಂದ, ಬಸವಣ್ಣ, ಅಂಬೇಡ್ಕರ್ ಸೇರಿದಂತೆ ಅನೇಕ ಸಂತರನ್ನು ಎಲ್ಲರೂ ಗೌರವಿಸುತ್ತಾರೆ. ಸೂರ್ಯವಂಶ ಕ್ಷತ್ರಿಯರಲ್ಲಿ ಬರುವ ಸಗರ, ದಿಲೀಪ, ಮಾಂಧಾತ ಚಕ್ರವರ್ತಿಗಳು, ಸತ್ಯಹರಿಶ್ಚಂದ್ರ, ಪ್ರಭು ಶ್ರೀರಾಮ, ದಶರಥ ಮಹಾರಾಜ, ಭಗೀರಥ ಮಹರ್ಷಿಗಳು ಇಡೀ ಭರತ ಭೂಮಿಯನ್ನು ಪವಿತ್ರಗೊಳಿಸಿ ದೈವಾನು ಸಂಭೂತರಾಗಿದ್ದರು’ ಎಂದು ಬಣ್ಣಿಸಿದರು.
ಉಪ್ಪು, ರುಚಿಯಾದ ವಿವಿಧ ಬಗೆಯ ಭೋಜನ ಕೊಟ್ಟ ಉಪ್ಪಾರ ಸಮುದಾಯವನ್ನು ಮರೆಯುತ್ತಿರುವುದು ಏಕೆ? ಸಮುದಾಯವು ಹಿಂದುಳಿಯಲು ಕಾರಣವನ್ನು ಅರ್ಥ ಮಾಡಕೊಂಡು ಪರಿಹಾರ ಕಂಡುಕೊಳ್ಳಬೇಕಿದೆ’ ಎಂದು ಸಲಹೆ ನೀಡಿದರು.
ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ‘ನಿವೇಶನರಹಿತರಿಗೆ ನಿವೇಶನ ನೀಡುವುದು ಹಾಗೂ ಶೈಕ್ಷಣಿಕವಾಗಿ, ರಾಜಕೀಯವಾಗಿ ಮುಂದುವರಿಯಲು ಈ ಸಮುದಾಯಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯವಿದೆ. ಉಪ್ಪಾರ ಸಮುದಾಯಕ್ಕೆ ಅದರದೇ ಆದ ಇತಿಹಾಸವಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳೋಣ’ ಎಂದು ತಿಳಿಸಿದರು.
ಮಾಜಿ ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಉಪ್ಪಾರ ಸಮುದಾಯದ ರಾಜಕೀಯ ಮುಖಂಡರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರು, ಉಪ್ಫಾರ ಸಂಘದ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಎರ್ರಿಸ್ವಾಮಿ, ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷೆ ನಾಗರತ್ನ, ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜು, ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಮಂಜಪ್ಪ, ಮುಖಂಡರಾದ ಕೆ.ವೆಂಕಟೇಶ್, ನಂಜನಗೂಡು ಸೋಮಣ್ಣ, ಚಾಮರಾಜನಗರ ರೇವಣ್ಣ ಭಾಗವಹಿಸಿದ್ದರು.
ಭಗೀರಥರ ಕೊಡುಗೆ ಅಪಾರ ಉಪ್ಪು, ರುಚಿ ಕೊಟ್ಟ ಉಪ್ಪಾರ ಸಮುದಾಯ ಭರತ ಭೂಮಿ ಪವಿತ್ರಗೊಳಿಸಿದ ಕೀರ್ತಿ ಸಮಾಜಕ್ಕಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.