ADVERTISEMENT

50:50 ಅನುಪಾತದಲ್ಲಿ ಬಡಾವಣೆ ಅಭಿವೃದ್ಧಿ

ಮಂಡ್ಯ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ.ಪ್ರಕಾಶ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 3:01 IST
Last Updated 12 ಡಿಸೆಂಬರ್ 2025, 3:01 IST
ಬಿ.ಪಿ.ಪ್ರಕಾಶ್
ಬಿ.ಪಿ.ಪ್ರಕಾಶ್   

ಮಂಡ್ಯ: ನಗರ ವ್ಯಾಪ್ತಿಯ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿನ ರೈತರ ಸಹಭಾಗಿತ್ವದಲ್ಲಿ 50:50 ಅನುಪಾತದ ಜಂಟಿ ಉದ್ಯಮದೊಂದಿಗೆ ಬಡಾವಣೆ ಅಭಿವೃದ್ಧಿ ಪಡಿಸುವ ಯೋಜನೆಗೆ ಮುಂದಾಗಿದ್ದು, ಇದಕ್ಕಾಗಿ ರೈತರನ್ನು ಸಂಪರ್ಕಿಸುತ್ತಿದ್ದೇವೆ ಎಂದು ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್‌ ತಿಳಿಸಿದರು.

ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಅನುಪಾತದಲ್ಲಿ ಜಂಟಿ ಉದ್ಯಮದೊಂದಿಗೆ ಬಡಾವಣೆಗಳ ಅಭಿವೃದ್ಧಿಪಡಿಸುವ ಮೂಲಕ ನಿವೇಶನ ರಹಿತರಿಗೆ ನಿವೇಶನ ನೀಡುವುದಲ್ಲದೇ ನಗರ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಮುಡಾಕ್ಕೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ ಶಾಸಕ ಪಿ.ರವಿಕುಮಾರ್‌ ಮಾರ್ಗದರ್ಶನದಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಹಕಾರದಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆ ಆರಂಭಿಸಲು ಚಿಂತನೆ ನಡೆಸಲಾಗಿದೆ. ಈಗಾಗಲೇ ರೈತರೊಂದಿಗೆ ಮಾತುಕತೆ ಆರಂಭ ಮಾಡಿದ್ದು, ಶೀಘ್ರದಲ್ಲಿ ಮಾಹಿತಿ ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ದೊಡ್ಡಹಳ್ಳಿಯಂತಿರುವ ಮಂಡ್ಯ ನಗರವನ್ನು ವಿಸ್ತರಿಸಿ ಅಭಿವೃದ್ಧಿಪಡಿಸಬೇಕಾಗಿದೆ. ಈಗಾಗಲೇ ಸಾಹುಕಾರ್ ಚನ್ನಯ್ಯ ಬಡಾವಣೆಯನ್ನು ನಗರಸಭೆಗೆ ಹಸ್ತಾಂತರ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಸಾತನೂರು ಫಾರಂ ಬಡಾವಣೆಯನ್ನು ಗ್ರಾಮ ಪಂಚಾಯಿತಿಗೆ ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಹಲವಾರು ಕಾರಣಗಳಿಂದ ವಿವೇಕಾನಂದನಗರ ಬಡಾವಣೆಯ ಅಭಿವೃದ್ಧಿಗೆ ಹಿನ್ನೆಡೆಯಾಗಿತ್ತು. ಇದೀಗ ಒಳಚರಂಡಿ ವ್ಯವಸ್ಥೆಯ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಈಗಿರುವ ಕಾನೂನು ಅಡೆತಡೆಗಳನ್ನು ನಿವಾರಿಸಿ ಬಡಾವಣೆ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದರು.

ಉಮ್ಮಡಹಳ್ಳಿಯಿಂದ ಇಂಡುವಾಳು ವರೆಗೂ ಒಟ್ಟು 11 ಕಿ.ಮೀ ದೂರ ರಿಂಗ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೊದಲು ನಗರ ಒಳಗೆ ನಕ್ಷೆ ಸಿದ್ಧಪಡಿಸಲಾಗಿತ್ತು. ಇದೀಗ ನಗರ ಹೊರತುಪಡಿಸಿ ಹೊರಗೆ ರಸ್ತೆ ಮಾಡಲು ತೀರ್ಮಾನಿಸಲಾಗಿದ್ದು, ಅದರಂತೆ ಮಂಡ್ಯ, ಶ್ರೀರಂಗಪಟ್ಟಣ ಶಾಸಕರು, ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು, ಮುಡಾ ಅಧ್ಯಕ್ಷರ ಒಳಗೊಂಡಂತೆ ಸಭೆ ನಡೆಸಿ ಡಿಪಿಆರ್ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.

ಮುಡಾ ನಿರ್ದೇಶಕರಾದ ಕಾರ್ತಿಕ್ ಕಲ್ಲಹಳ್ಳಿ, ಮಹೇಶ್, ಕಮಲಮ್ಮ, ಇದ್ರೀಶ್‌ಖಾನ್ ಇದ್ದರು.

19 ಗ್ರಾಮಗಳ ಸೇರ್ಪಡೆ 

ಮುಡಾ ಆಯುಕ್ತ ಎಂ.ಪಿ. ಕೃಷ್ಣಕುಮಾರ್ ಮಾತನಾಡಿ ನಗರಸಭೆ ಸೇರಿದಂತೆ 13 ಗ್ರಾಮ ಪಂಚಾಯಿತಿಗಳ 19 ಗ್ರಾಮಗಳು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಒಳಪಡಲಿವೆ. ಈ ಎಲ್ಲ ಗ್ರಾಮಗಳ ರೈತರು ಜಮೀನು ನೀಡಿದರೆ ರೈತರ ಸಹಭಾಗಿತ್ವದಲ್ಲೇ 50:50 ಅನುಪಾತದಲ್ಲಿ ಅಭಿವೃದ್ಧಿಪಡಿಸಿ ನಿವೇಶನ ಇಲ್ಲದವರಿಗೆ ನಿವೇಶನ ಒದಗಿಸಲಾಗುವುದು ಬಿ.ಪಿ.ಪ್ರಕಾಶ್‌ ಎಂದು ಹೇಳಿದರು. ವಿವೇಕಾನಂದ ಬಡಾವಣೆಯ ನಿವೇಶನ ಹಂಚಿಕೆ ಪ್ರಕರಣ ಮರು ತನಿಖೆ ನಡೆಯುತ್ತಿದೆ. ಎಲ್ಲ ನಿವೇಶನಗಳ ಸಂಪೂರ್ಣ ಮೂಲ ದಾಖಲಾತಿಗಳು ಸಿಬಿಐ ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಲೇಔಟ್ ನಿರ್ಮಾಣ ಮಾಡಿರುವ ಏಳು ಮಂದಿಗೆ ನೋಟಿಸ್ ನೀಡಲು ಕ್ರಮ ವಹಿಸಲಾಗಿದೆ. ಮುಡಾ ಅನುಮತಿ ಪಡೆಯದೆ ಕಂದಾಯ ಜಮೀನಿನಲ್ಲಿ ಯಾವುದೇ ರಸ್ತೆ ಪಾರ್ಕ್ ವಿದ್ಯುತ್ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸದೆ ಅಕ್ರಮವಾಗಿ ಲೇಔಟ್‌ಗಳ ನಿರ್ಮಾಣ ಮಾಡುತ್ತಿರುವುದು ಕಂಡು ಬಂದಿದ್ದು ಅವರ ವಿರುದ್ಧ ಕ್ರಮ ವಹಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.