ADVERTISEMENT

ಪರಿಹಾರ ನೀಡದೆ ನಾಲೆ ಆಧುನೀಕರಣ ಬೇಡ: ರೈತ ಮುಖಂಡರ ಒಕ್ಕೊರಲಿನ ಒತ್ತಾಯ

ನೀರು ನಿಲ್ಲಿಸಿ ಕಾಮಗಾರಿ ಮಾಡದಿರಲು ರೈತ ಮುಖಂಡರ ಒಕ್ಕೊರಲಿನ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 12:13 IST
Last Updated 28 ಜೂನ್ 2021, 12:13 IST
ವಿ.ಸಿ.ನಾಲೆ ಆಧುನೀಕರಣ ಕುರಿತು ಸೋಮವಾರ ನಡೆದ ಸಭೆಯಲ್ಲಿ ರೈತ ಮುಖಂಡರು ತಮ್ಮ ಅಭಿಪ್ರಾಯ ತಿಳಿಸುತ್ತಿರುವುದು
ವಿ.ಸಿ.ನಾಲೆ ಆಧುನೀಕರಣ ಕುರಿತು ಸೋಮವಾರ ನಡೆದ ಸಭೆಯಲ್ಲಿ ರೈತ ಮುಖಂಡರು ತಮ್ಮ ಅಭಿಪ್ರಾಯ ತಿಳಿಸುತ್ತಿರುವುದು   

ಮಂಡ್ಯ: ‘ಕೇವಲ 46 ಕಿ.ಮೀ ನಾಲೆ ಆಧುನೀಕರಣ ಕಾಮಗಾರಿಗಾಗಿ ಇಡೀ ವಿಶ್ವೇಶ್ವರಯ್ಯ ನಾಲೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ನಿಲ್ಲಿಸುವುದು ಸರಿಯಲ್ಲ. ಕಾಮಗಾರಿ ಮಾಡುವುದೇ ಮುಖ್ಯವಾದರೆ ನಷ್ಟ ಅನುಭವಿಸುವ ರೈತರಿಗೆ ಸೂಕ್ತ ಪರಿಹಾರ ಘೋಷಣೆ ಮಾಡಬೇಕು’ ಎಂಬ ಒತ್ತಾಯ ಸೋಮವಾರ ನಡೆದ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರ ಸಭೆಯಲ್ಲಿ ವ್ಯಕ್ತವಾಯಿತು.

ನಾಲೆ ಆಧುನೀಕರಣ ಕಾಮಗಾರಿ ಕುರಿತು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ವಿಷಯ ಪ್ರಸ್ತಾಪಿಸಿದ ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್‌ ಶಂಕರೇಗೌಡ, ಕೆಆರ್‌ಎಸ್‌ ಜಲಾಶಯದಿಂದ 46.25 ಕಿ.ಮೀ.ವರೆಗೆ ₹ 300 ಕೋಟಿ ವೆಚ್ಚದಲ್ಲಿ ವಿ.ಸಿ. ನಾಲೆ ಆಧುನೀಕರಣ ನಡೆಸಲು ಉದ್ದೇಶಿಸಲಾಗಿದೆ. ಟೆಂಡರ್‌ ಅವಧಿ ಮುಕ್ತಾಯವಾಗುತ್ತಿದ್ದು ಯೋಜನೆ ಜಾರಿ ಬಗ್ಗೆ ನಿರ್ಣಯ ಕೈಗೊಳ್ಳಬೇಕಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪೂಗೌಡ ‘ಕಾಮಗಾರಿ ಜಾರಿ ಕುರಿತಂತೆ ಅಧಿಕಾರಿಗಳು ರೈತರಿಗೆ ಯಾವುದೇ ಮಾಹಿತಿ ನೀಡಿಲ್ಲ. ಈಗಾಗಲೇ ಕೃಷಿ ಚಟುವಟಿಕೆ ಆರಂಭಗೊಂಡಿದ್ದು 4 ಸಾವಿರ ಎಕರೆಯಲ್ಲಿ ಕಬ್ಬು ನಾಟಿ ಮಾಡಿದ್ದಾರೆ. ರೈತರು ಸದ್ಯ ಕೋವಿಡ್‌ ಸಂಕಷ್ಟದಲ್ಲಿದ್ದು ಕಾಮಗಾರಿಗೆ ಇದು ಸಕಾಲವಲ್ಲ. ನೀರು ನಿಲುಗಡೆ ಮಾಡಿದರೆ ಅದರಿಂದ ಉಂಟಾಗುವ ನಷ್ಟ ತುಂಬಿಕೊಡುವ ಬಗ್ಗೆಯೂ ನಿರ್ಣಯಿಸಬೇಕು’ ಎಂದರು.

ADVERTISEMENT

‘ನೀರು ನಿಂತರೆ ಸಾವಿರಾರು ಕೋಟಿ ನಷ್ಟವಾಗುತ್ತದೆ. ಜೊತೆಗೆ ತೆಂಗು, ಅಡಿಕೆ ಬೆಳೆಗೆ ನೀರು ಸಿಗದಿದ್ದರೆ ರೈತರ ಜೀವನ ಹಾಳಾಗುತ್ತದೆ. ನಾಲೆ ಆಧುನೀಕರಣ ಅವಶ್ಯಕತೆ ಇದೆ, ಆದರೆ ಇದು ಸಂಕಷ್ಟ ಕಾಲವಾಗಿದ್ದು ಕಾಮಗಾರಿಯನ್ನು ಮುಂದೂಡಬೇಕು’ ಎಂದರು.

ರೈತಸಂಘ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ‘ಮಂಡ್ಯ ಜಿಲ್ಲೆಯ ರೈತರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಇಲ್ಲಿಯ ಹೆಣ್ಣುಮಕ್ಕಳು, ಯುವಜನರು ಅನ್ಯ ಜಿಲ್ಲೆಗಳಿಗೆ ಕೆಲಸಕ್ಕೆ ಹೋಗುತ್ತಿದ್ದಾರೆ. ಮೈಷುಗರ್‌ ಸ್ಥಗಿತಗೊಂಡ ನಂತರ ರೈತರ ಸ್ಥಿತಿ ಆರ್ಥಿಕವಾಗಿ, ಸಾಮಾಜಿಕವಾಗಿ ಕೆಳಮಟ್ಟಕ್ಕೆ ಕುಸಿದಿದೆ. ಈ ನಿಟ್ಟಿನಲ್ಲಿ ಯಾವುದೇ ನಿರ್ಣಯ ಕೈಗೊಳ್ಳುವಾಗ ರೈತರ ಹಿತ ಕಾಯುವ ಬಗ್ಗೆ ಚಿಂತಿಸಬೇಕು’ ಎಂದರು.

ಮುಖಂಡ ಕೆ.ಎಸ್‌.ನಂಜುಂಡೇಗೌಡ ಮಾತನಾಡಿ ‘ಈ ಹಿಂದೆಯೂ ನಾಲೆ ಆಧುನೀಕರಣ ಕಾಮಗಾರಿಯನ್ನು ನೋಡಿದ್ದೇವೆ. ಆಗಲೂ ರೈತರು ನಷ್ಟ ಅನುಭವಿಸಿದ್ದು ಯಾವುದೇ ಪರಿಹಾರ ಸಿಕ್ಕಿಲ್ಲ, ಈ ವಿಚಾರದಲ್ಲಿ ರೈತರು ಸಾಕಷ್ಟು ನೋವುಂಡಿದ್ದಾರೆ. ಹೀಗಾಗಿ ಯೋಜನೆ ರೂಪಿಸುವ ಹಂತದಲ್ಲೇ ನಷ್ಟ ಪರಿಹಾರವನ್ನೂ ಪ್ರಕಟಿಸಬೇಕು’ ಎಂದು ಒತ್ತಾಯಿಸಿದರು.

ಉಪನ್ಯಾಸಕ ನಾಗರಾಜು ಮಾತನಾಡಿ ‘ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಸಿದರೆ ಕೇವಲ ಒಂದು ತಿಂಗಳಲ್ಲಿ ಯೋಜನೆ ಜಾರಿಗೊಳಿಸಬಹುದು. ಇದಕ್ಕೆ ಪರಿಹಾರದ ಪ್ರಶ್ನೆಯೇ ಬರುವುದಿಲ್ಲ. ನೀರು ನಿಲ್ಲಿಸಿದ ಬಿಡುವಿನ ಅವಧಿಯಲ್ಲಿ ಆಧುನಿಕ ಯಂತ್ರೋಪಕರಣ ಬಳಸಿ ಕಾಮಗಾರಿ ಮಾಡಬೇಕು’ ಎಂದರು.

ಶಾಸಕ ಸುರೇಶ್‌ಗೌಡ, ಅಧಿಕಾರಿಗಳು ಬೇಸಿಗೆ ಬೆಳೆ ಹಾಕಬಾರದು ಎಂಬ ಬಗ್ಗೆ ಯಾವುದೇ ಮುನ್ಸೂಚನೆ ನೀಡಿಲ್ಲ. ಹೀಗಾಗಿ ಕಾಮಗಾರಿ ನಡೆಸಿದರೆ ಸೂಕ್ತ ಪರಿಹಾರ ನೀಡಬೇಕು ಎಂದರು. ಶಾಸಕ ಅನ್ನದಾನಿ, ಕೊನೆಯ ಭಾಗ ಮಳವಳ್ಳಿ ತಾಲ್ಲೂಕಿಗೆ ನೀರು ಬರುತ್ತಿಲ್ಲ, ಹೀಗಾಗಿ ಕಾಮಗಾರಿ ಅನುಷ್ಠಾನ ಮಾಡಬೇಕು. ಆದರೆ ನೀರು ತಪ್ಪಿಸದ ಸಂದರ್ಭದಲ್ಲಿ ಕಾಮಗಾರಿ ಮಾಡಬೇಕು ಎಂದರು.

ಶಾಸಕ ಕೆ.ಟಿ.ಶ್ರೀಕಂಠೇಗೌಡ, ನಾಲೆಯ ಕಡೆಭಾಗದಿಂದ ಸಮಗ್ರವಾಗಿ ಆಧುನೀಕರಣವಾಗಬೇಕು. ಶಿಂಷಾ ನಾಲೆ, ಉಪನಾಲೆಗಳ ಆಧುನೀಕರಣವಾಗಬೇಕು. ಉಪನಾಲೆ ಬಿಟ್ಟು ಮುಖ್ಯನಾಲೆಯ ಕಾಮಗಾರಿ ಮಾಡಿದರೆ ಯಾವುದೇ ಪ್ರಯೋಜನವಾಗುವುದಿಲ್ಲ’ ಎಂದರು.

ಟಿ.ನರಸೀಪುರ ಶಾಸಕ ಅಶ್ವಿನ್‌ ಕುಮಾರ್‌, ಶಾಸಕ ಎಂ.ಶ್ರೀನಿವಾಸ್‌, ಜಿಲ್ಲಾಧಿಕಾರಿ ಎಸ್‌.ಅಶ್ವತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅಶ್ವಿನಿ, ಜಿಪಂ ಸಿಇಒ ದಿವ್ಯಾಪ್ರಭು ಇದ್ದರು.

ಸ್ಪಷ್ಟ ನಿರ್ಧಾರಕ್ಕೆ ಬರದ ಸಚಿವ

ರೈತರು, ಶಾಸಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರು ನಾಲೆ ಆಧುನೀಕರಣ ಕಾಮಗಾರಿ ಕುರಿತು ಯಾವುದೇ ಸ್ಪಷ್ಟ ನಿರ್ಣಯ ತಿಳಿಸಲಿಲ್ಲ.

‘ಆಧುನಿಕ ಯಂತ್ರೋಪಕರಣ ಬಳಸಿ ಕಾಮಗಾರಿ ನಡೆಸಲು ಸಾಧ್ಯವಾಗುವುದಿಲ್ಲ. ತುರ್ತು ಸಂದರ್ಭದಲ್ಲಷ್ಟೇ ಆ ರೀತಿ ಮಾಡಬಹುದು. ಈಗ ಅಷ್ಟೊಂದು ಹಣ ತರಲು ಸಾಧ್ಯವಿಲ್ಲ. ರೈತರು ತಮ್ಮ ಅಭಿಪ್ರಾಯ ತಿಳಿಸಿದ್ದು ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು’ ಎಂದಷ್ಟೇ ಹೇಳಿ ಸಭೆ ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.