ADVERTISEMENT

ಮಂಡ್ಯ: ಜಿಲ್ಲೆಯಾದ್ಯಂತ ವೈಕುಂಠ ಏಕಾದಶಿ ಸಂಭ್ರಮ

ವೈಕುಂಠ ದ್ವಾರ ಪ್ರವೇಶಿಸಿ ಪುನೀತರಾದ ಭಕ್ತರು: ವೆಂಕಟೇಶ್ವರಸ್ವಾಮಿಗೆ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2025, 13:19 IST
Last Updated 10 ಜನವರಿ 2025, 13:19 IST
ಮಂಡ್ಯ ನಗರದ ಹೊಸಹಳ್ಳಿ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ದೇವರ ಮೂರ್ತಿಗೆ ಹೂವಿನ ಅಲಂಕಾರ ಮಾಡಿರುವುದು
ಮಂಡ್ಯ ನಗರದ ಹೊಸಹಳ್ಳಿ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ದೇವರ ಮೂರ್ತಿಗೆ ಹೂವಿನ ಅಲಂಕಾರ ಮಾಡಿರುವುದು   

ಮಂಡ್ಯ: ಜಿಲ್ಲೆಯಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಶುಕ್ರವಾರ ಬೆಳಗ್ಗಿನಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ ಹವನಗಳು ಶ್ರದ್ಧಾ ಭಕ್ತಿಯಿಂದ ನಡೆದವು, ದರ್ಶನಕ್ಕೆ ಬಂದ ಭಕ್ತರು ವೈಕುಂಠ ದ್ವಾರ ಪ್ರವೇಶಿಸಿ ಪುನೀತರಾದರು.

ವಿಶೇಷವಾಗಿ ಶ್ರೀನಿವಾಸ, ಲಕ್ಷ್ಮೀ ಜನಾರ್ದನಸ್ವಾಮಿ, ಲಕ್ಷ್ಮಿ ವೆಂಕಟೇಶ್ವರ ಸೇರಿದಂತೆ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದವು. ಭಕ್ತರು ದೇವಾಲಯಗಳಿಗೆ ಆಗಮಿಸಿ ಪ್ರಥಮ ಪೂಜೆ ಸಲ್ಲಿಸಿದರು. ಜೊತೆಗೆ ಇಷ್ಟಾರ್ಥ ಸಿದ್ಧಿಗೆ ಶ್ರದ್ಧಾ-ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.

ನಗರದ ಲಕ್ಷ್ಮೀಜನಾರ್ದನಸ್ವಾಮಿ, ಹನಿಯಂಬಾಡಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ, ಶ್ರೀನಿವಾಸ ದೇವಸ್ಥಾನಗಳಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜಾ ಕಾರ್ಯಗಳು ನಡೆದವು. ದೇವಾಲಯಗಳಲ್ಲಿ ವಿವಿಧ ಹೂಗಳಿಂದ ಮೂರ್ತಿಗಳನ್ನು ಸಿಂಗರಿಸಿ ಪೂಜಿಸಲಾಯಿತು.

ADVERTISEMENT

ತಾಲ್ಲೂಕಿನ ಸಾತನೂರು ಕಂಬದ ನರಸಿಂಹಸ್ವಾಮಿ, ಕಿರಗಂದೂರು ವೆಂಕಟೇಶ್ವರ ದೇವಸ್ಥಾನ, ಸ್ವರ್ಣಸಂದ್ರದ ಶ್ರೀರಾಮ ಮಂದಿರ, ಶ್ರೀ ಶನೈಶ್ಚರಸ್ವಾಮಿ ದೇವಾಲಯ ಹಾಗೂ ಹೊಸಬೂದನೂರು ಗ್ರಾಮದಲ್ಲಿರುವ ಐತಿಹಾಸಿಕ ಶ್ರೀ ಅನಂತಪದ್ಮನಾಭ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಪೂಜಾ ಕೈಂಕರ್ಯಗಳು ನಡೆದವು.

ದೇವಾಲಯದಲ್ಲಿ ಭಕ್ತರಿಗೆ ಲಾಡು, ಅವಲಕ್ಕಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಬೂದನೂರು ಗ್ರಾಮದಲ್ಲಿರುವ ಐತಿಹಾಸಿಕ ಶ್ರೀ ಅನಂತಪದ್ಮನಾಭ ದೇವಸ್ಥಾನ ಟ್ರಸ್ಟ್ ವತಿಯಿಂದ ಸಂಜೆ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.

ತಾಲ್ಲೂಕಿನ ಹೊಳಲು ಗ್ರಾಮದಲ್ಲಿರುವ ಕೇಶವ ನಾರಾಯಣಸ್ವಾಮಿ ದೇವಾಲಯದಲ್ಲಿ ವಿನಾಯಕ ಗೆಳೆಯರ ಬಳಗದ ವತಿಯಿಂದ ವಿಶೇಷ ಪೂಜೆ ನೆರವೇರಿಸಲಾಯಿತು. ವಿಗ್ರಹಕ್ಕೆ ವಿಶೇಷ ಹೂಗಳಿಂದ ಅಲಂಕರಿಸಿ ಪೂಜಿಸಲಾಯಿತು.

ಗುರುವಾರ ಸಂಜೆ ದೇವಸ್ಥಾನದಲ್ಲಿ ಶ್ರೀದೇವಿ, ಭೂದೇವಿ ,ಶ್ರೀ ಆಂಜನೇಯ ದೇವರಿಗೆ ವಿಶೇಷ ಪೂಜೆ ಹಾಗೂ ಹೋಮ, ಹವನ ಕಾರ್ಯಕ್ರಮವು ನಡೆಯಿತು. ಶುಕ್ರವಾರ ಬೆಳಗ್ಗೆ ಶ್ರೀದೇವಿ, ಭೂದೇವಿ, ಸಮೇತ ಶ್ರೀ ಕೇಶವ ನಾರಾಯಣ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ, ಬೆಣ್ಣೆ ಅಲಂಕಾರ, ಸುಪ್ರಭಾತ ಸೇವೆ, ಮಹಾಮಂಗಳಾರತಿ ನಡೆದವು. ಭಕ್ತರಿಗೆ ವಿಶೇಷವಾಗಿ ಉಪ್ಪಿಟ್ಟು ಹಾಗೂ ಲಾಡು ಪ್ರಸಾದ ವಿತರಿಸಲಾಯಿತು

ಮಂಡ್ಯ ನಗರದ ಹೊಸಹಳ್ಳಿ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ದ್ವಾರ ಪ್ರವೇಶ ಮಾಡುತ್ತಿರುವ ಭಕ್ತರು
ಮಂಡ್ಯ ತಾಲ್ಲೂಕು ಹೊಳಲು ಗ್ರಾಮದ ಕೇಶವ ನಾರಾಯಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ದೇವರ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು
ಭಕ್ತರಿಗೆ ಲಾಡು, ಅವಲಕ್ಕಿ, ಉಪ್ಪಿಟ್ಟು ವಿತರಣೆ  ಶ್ರೀನಿವಾಸ, ವೆಂಕಟೇಶ್ವರಸ್ವಾಮಿಗೆ ಬೆಣ್ಣೆ ಅಲಂಕಾರ ಹೂವಿನ ಅಲಂಕಾರದಿಂದ ಕಂಗೊಳಿಸಿದ ದೇವರ ಮೂರ್ತಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.