ಮಳವಳ್ಳಿ: ಇಲ್ಲಿನ ಪ್ರಸಿದ್ಧ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧೆಡೆ ಶುಕ್ರವಾರ ವೈಕುಂಠ ಏಕಾದಶಿ ಅಂಗವಾಗಿ ದೇವರ ದರ್ಶನಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು.
ಕೋಟೆ ಸಾರಂಗಪಾಣಿ ದೇವಸ್ಥಾನ, ತಾಲ್ಲೂಕಿನ ಸುಣ್ಣದದೊಡ್ಡಿಯ ಲಕ್ಷ್ಮಿನಾರಾಯಣಸ್ವಾಮಿ ದೇವಸ್ಥಾನಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ವಿಶೇಷ ಪೂಜಾ ಕೈಂಕರ್ಯಗಳನ್ನು ಅರ್ಚಕರು ನೆರವೇರಿಸಿದರು. ತಾಲ್ಲೂಕಿನ ವಿವಿಧ ಊರುಗಳಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದುಕೊಂಡರು.
ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಬೆಳಗಿನ ಜಾವದಿಂದ ದೇವರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ವೈಕುಂಠ ದ್ವಾರವನ್ನು ಸಂಪ್ರದಾಯಕವಾಗಿ ನಿರ್ಮಿಸಿ ದೇವರಿಗೆ ಅಭಿಷೇಕ, ಪೂಜೆ ನೆರೆವೇರಿಸಿ ನಂತರ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ನೂರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದರು.
ದರ್ಶನ ಪಡೆದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಗಂಗಾಧರೇಶ್ವರಸ್ವಾಮಿ ದೇವಸ್ಥಾನದಲ್ಲಿಯೂ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ತಾಲ್ಲೂಕಿನ ಸುಣ್ಣದದೊಡ್ಡಿ ಗ್ರಾಮದ ಲಕ್ಷ್ಮಿನಾರಾಯಣಸ್ವಾಮಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ವೈಕುಂಠ ಏಕಾದಶಿ ಆಚರಿಸಲಾಯಿತು. ಬೆಳಿಗ್ಗೆ ದೇವರಿಗೆ ಅಭಿಷೇಕ ಸೇರಿ ನಾನಾ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಸಾರಂಗಪಾಣಿ ದೇಗುಲದಲ್ಲೂ ವೈಕುಂಠ ಏಕಾದಶಿ ಪ್ರಯುಕ್ತ ಮಾಡಲಾಗಿದ್ದ ಅಲಂಕಾರ ಹಾಗೂ ಉತ್ಸವಮೂರ್ತಿ ಗಮನ ಸೆಳೆಯಿತು. ಬಳಿಕ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕುಟುಂಬದ ಸದಸ್ಯರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.