
ಮಂಡ್ಯ: ಸಮಗ್ರ ಕನ್ನಡಿಗರ ಬೇಡಿಕೆಗಳ ಈಡೇರಿಕೆಗಾಗಿ ಹೊಸ ವರ್ಷ ಜನವರಿ 1ರಿಂದ ವರ್ಷದಾದ್ಯಂತ ‘ಕನ್ನಡ ಚಳವಳಿ ವಾಟಾಳ್ ಪಕ್ಷ’ದ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದರು.
ನಗರದ ಸಂಜಯ್ ವೃತ್ತದ ಬಳಿ ಈಡುಗಾಯಿ ಒಡೆದು, ಕಡ್ಲೇಪುರಿ ಹಂಚಿ ಗುರುವಾರ ನಡೆದ ವಿನೂತನ ಚಳವಳಿಯಲ್ಲಿ ಅವರು ಮಾತನಾಡಿದರು.
ಬೆಳಗಾವಿ ಉಳಿಸಬೇಕು, ಎಂಇಎಸ್ ನಿಷೇಧ ಮಾಡಬೇಕು, ಗಡಿನಾಡು ಬೆಳಗಾವಿ ಅಭಿವೃದ್ಧಿಯಾಗಬೇಕು, ಕನ್ನಡಿಗರಿಗೆ ಉದ್ಯೋಗ ಕಲ್ಪಿಸಬೇಕು, ಗ್ರೇಟರ್ ಬೆಂಗಳೂರು ಬೇಡವೇ ಬೇಡ, ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಆದ್ಯತೆ ನೀಡಬೇಕು, ಹಿಂದುಳಿದ ಗಡಿ ಪ್ರದೇಶ ಚಾಮರಾಜನಗರ ಅಭಿವೃದ್ಧಿಯಾಗಬೇಕು ಎಂದು ಒತ್ತಾಯಿಸಿದರು.
ಮೆಟ್ರೊ ದರ ಇಳಿಸಬೇಕು, ಮಹದಾಯಿ–ಕಳಸಾ ಬಂಡೂರಿ ಯೋಜನೆ ಅನುಷ್ಠಾನಗೊಳ್ಳಬೇಕು, ಮೇಕೆದಾಟು ಯೋಜನೆ ಕಾರ್ಯಗತಗೊಳ್ಳಬೇಕು, ಕನ್ನಡದಲ್ಲೇ ನಾಮಫಲಕ ಅಳವಡಿಸಬೇಕು, ಪುರುಷರಿಗೂ ಉಚಿತ ಬಸ್ ಪಾಸ್ ನೀಡಬೇಕು, ರಾಜ್ಯದಲ್ಲಿ ಪರಭಾಷಾ ದಬ್ಬಾಳಿಕೆ ನಿಲ್ಲಬೇಕು, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ನಿಲ್ಲಬೇಕು ಸೇರಿದಂತೆ ಕನ್ನಡಿಗರ ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಕರವೇ ಮುಖಂಡ ಜಯರಾಮ್ ಇತರೆ ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.