ADVERTISEMENT

ಮೇಲುಕೋಟೆ | 9ರಂದು ಉಪರಾಷ್ಟ್ರಪತಿ ಭೇಟಿ: ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 5:34 IST
Last Updated 6 ನವೆಂಬರ್ 2025, 5:34 IST
ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಸ್ಥಾನಕ್ಕೆ ಅ.9ರಂದು ಉಪರಾಷ್ಟ್ರಪತಿಗಳು ಭೇಟಿನೀಡುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಕುಮಾರ ಹೆಲಿಪ್ಯಾಡ್ ನಿರ್ಮಿಸುವ ಸ್ಥಳ ಪರಿಶೀಲಿಸಿದರು
ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಸ್ಥಾನಕ್ಕೆ ಅ.9ರಂದು ಉಪರಾಷ್ಟ್ರಪತಿಗಳು ಭೇಟಿನೀಡುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಕುಮಾರ ಹೆಲಿಪ್ಯಾಡ್ ನಿರ್ಮಿಸುವ ಸ್ಥಳ ಪರಿಶೀಲಿಸಿದರು   

ಮೇಲುಕೋಟೆ: ಜಿಲ್ಲೆಯ ಧಾರ್ಮಿಕ ಕ್ಷೇತ್ರವಾದ ಮೇಲುಕೋಟೆಗೆ ನ.9ರಂದು ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹೆಲಿಪ್ಯಾಡ್ ಹಾಗೂ ದೇವಾಲಯದ ಸ್ಥಳವನ್ನು ಜಿಲ್ಲಾಧಿಕಾರಿ ಕುಮಾರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಪರಿಶೀಲಿಸಿದರು.

ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಮಾತನಾಡಿದ ಕುಮಾರ, ಯಾವುದೇ ಲೋಪಕ್ಕೆ ಅವಕಾಶ ನೀಡದಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಮಾರ್ಗಸೂಚಿಯಂತೆ ಅಧಿಕಾರಿಗಳು ಕೆಲಸ ನಿರ್ವಹಣೆ ಮಾಡಬೇಕು. ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ದಾರಿಯನ್ನು ಎಚ್ಚರಿಕೆಯಿಂದ ನಿರ್ವಹಿಸಿಬೇಕು. ನಿರಂತರವಾಗಿ ವಿದ್ಯುತ್ ಸಂಪರ್ಕ, ಇಂಟರ್‌ನೆಟ್ ಸಂಪರ್ಕ ಇರುವಂತೆ ನೋಡಿಕೊಳ್ಳಬೇಕು. ರಸ್ತೆಗಳ ಅಕ್ಕಪಕ್ಕದಲ್ಲಿ ಸ್ವಚ್ಛತೆಗೆ ಕ್ರಮವಹಿಸಬೇಕು, ಆಂಬುಲೆನ್ಸ್‌ನೊಂದಿಗೆ ನುರಿತ ಆರೋಗ್ಯ ಸಿಬ್ಬಂದಿಯನ್ನು ನೇಮಿಸಬೇಕು ಎಂದ ಅವರು, ಮೇಲುಕೋಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಹೆಲಿಪ್ಯಾಡ್ ನಿರ್ಮಾಣ ಮಾಡಲು ಅಗ್ನಿಶಾಮಕ ದಳಕ್ಕೆ ಸೂಚಿಸಿದರು.

ಹೆಲಿಪ್ಯಾಡ್‌ನಿಂದ ಚಲುವನಾರಾಯಣ ಸ್ವಾಮಿ ದೇವಾಲಯಕ್ಕೆ ನೇರವಾಗಿ ಕರೆತಂದು ದೇವಾಲಯದ ಸಂಪ್ರಾದಯದಂತೆ ಅದ್ಧೂರಿಯಾಗಿ ಪೂರ್ಣಕುಂಭ ಸ್ವಾಗತದೊಂದಿಗೆ ಗೌರವ ಸಮರ್ಪಣೆ ಮಾಡಿ ದೇವಾಲಯದಲ್ಲಿ ದೇವರ ದರ್ಶನಕ್ಕೆ ಎಲ್ಲಾ ವ್ಯವಸ್ಥೆ ಕಲ್ಪಿಸಬೇಕು ಎಂದು ದೇವಾಲಯದ ಅರ್ಚಕರಿಗೆ ಹಾಗೂ ದೇವಾಲಯದ ಇಒ ಅವರಿಗೆ ಸೂಚನೆ ನೀಡಿದರು.

ADVERTISEMENT

ಉಪರಾಷ್ಟ್ರಪತಿ ಬರುವಾಗ ಹಾಗೂ ಹೋಗುವಾ ರಸ್ತೆಮಾರ್ಗದಲ್ಲಿ ಯಾವುದೇ ಲೋಪವಾಗದಂತೆ ಪೊಲೀಸರು ಹೆಚ್ಚಿನ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು ಎಂದು ತಾಕೀತು ಮಾಡಿದರು. 

ಈ ವೇಳೆ ಪಾಂಡವಪುರ ಉಪವಿಭಾಗಾಧಿಕಾರಿ ಡಾ.ಶ್ರೀನಿವಾಸ್, ಪಾಂಡವಪುರ ತಹಶೀಲ್ದಾರ್ ಬಸವರೆಡ್ಡಪ್ಪ ರೋಣದ, ಮುಜರಾಯಿ ತಹಶೀಲ್ದಾರ್ ತಮ್ಮೇಗೌಡ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್‌ಪಿ ಶಾಂತಮಲ್ಲಪ್ಪ, ಅಧಿಕಾರಿಗಳು ಭಾಗವಹಿಸಿದ್ದರು.

ಎರಡನೇ ಭಾರಿ ಭೇಟಿ: ರಾಧಾಕೃಷ್ಣನ್ ಆಂಧ್ರಪ್ರದೇಶ ಹಾಗೂ ಜಾರ್ಖಂಡ್ ರಾಜ್ಯಪಾಲರಾಗಿದ್ದ ವೇಳೆ ಕುಟುಂಬ ಸಮೇತ ಮೇಲುಕೋಟೆಗೆ ಆಗಮಿಸಿ ದೇವರ ದರ್ಶನ್ ಪಡೆದಿದ್ದರು. ಹಾಗೇ ಮೂರು–ನಾಲ್ಕು ದಿನ ಇಲ್ಲೇ ವಾಸ್ತವ್ಯ ಹೂಡಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದ್ದರು.

ಭಕ್ತರಿಗೆ ದೇವರದರ್ಶನ ಇಲ್ಲ: ಡಿಸಿ

ಭಾನುವಾರ ಬೆಳಿಗ್ಗೆ 9ಗಂಟೆಯಿಂದ ಉಪರಾಷ್ಟ್ರಪತಿಗಳು ದೇವರದರ್ಶನ ಮುಗಿಸಿ ದೇವಾಲಯದಿಂದ ನಿರ್ಗಮಿಸುವವರೆಗೆ ಭಕ್ತರಿಗೆ ದೇವರ ದರ್ಶನ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಕುಮಾರ್ ತಿಳಿಸಿದ್ದಾರೆ. ಅಂದು ರಾಮಾನುಜಾಚಾರ್ಯರ ಮಾಸತಿರುನಕ್ಷತ್ರ ಮಹೋತ್ಸವ ಚಿತ್ತಿರೈ ಆರಿದ್ರಾನಕ್ಷತ್ರವೂ ಇರುವ ಕಾರಣ ರಾಮಾನುಜಾಚಾರ್ಯರಿಗೆ ಬೆಳಿಗ್ಗೆ 9 ಗಂಟೆ ವೇಳೆಗೆ ಅಭಿಷೇಕ ನಡೆದು ಪೂಜಾಕೈಂಕರ್ಯಗಳನ್ನು ಮುಕ್ತಾಯಗೊಳಿಸಲಾಗುತ್ತದೆ. ವಿಶೇಷ ಅಲಂಕಾರದಲ್ಲಿ ದರ್ಶನ ಮಾಡಲಿದ್ದಾರೆ. ದೇವಾಲಯದ ಸಾಂಪ್ರದಾಯಿಕ ಪದ್ಧತಿಯಂತೆ ಸ್ವಾಗತಿಸಿ ಸೇವೆ ಮಾಡಿಸುವಂತೆ ಸೂಚನೆ ನೀಡಲಾಗಿದೆ. ಭಕ್ತರು ಈ ಬದಲಾವಣೆಯನ್ನು ಗಮನಿಸಿ ಸಹಕಾರ ನೀಡುವಂತೆ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.