
ಮದ್ದೂರು: ತಾಲ್ಲೂಕಿನ ಕೊಪ್ಪ ಹೋಬಳಿಯ ಅಬಲವಾಡಿ ಗ್ರಾಮದ ಪ್ರಸಿದ್ಧ ಶ್ರೀ ತೋಪಿನ ತಿಮ್ಮಪ್ಪ ಸ್ವಾಮಿ ದೇಗುಲವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ತೆಗೆದುಕೊಳ್ಳಲು ತಹಶೀಲ್ದಾರ್ ಸೇರಿ ಅಧಿಕಾರಿಗಳು ಮುಂದಾದಾಗ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ ತಡೆದಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ಹಿಂದಿನಿಂದಲೂ ದೇವಸ್ಥಾನವನ್ನು ಶ್ರೀ ತೋಪಿನ ತಿಮ್ಮಪ್ಪ ಸೇವಾ ಟ್ರಸ್ಟ್ ವತಿಯಿಂದ ನಿರ್ವಹಣೆ ಮಾಡಿಕೊಂಡು ಬರಲಾಗುತ್ತಿತ್ತು. ಏಕಾಏಕಿ ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಹಾಗೂ ಅಧಿಕಾರಿಗಳು ಮುಜರಾಯಿ ಇಲಾಖೆಗೆ ದೇಗುಲವನ್ನು ಒಳಪಡಿಸಿಕೊಂಡು ಹುಂಡಿಯನ್ನು ದೇಗುಲದಲ್ಲಿ ಇಡಲು ಮುಂದಾದಾಗ ದೇಗುಲದ ಆವರಣದಲ್ಲಿ ನೂರಾರು ಮಂದಿ ಭಕ್ತರು ಹಾಗೂ ಗ್ರಾಮಸ್ಥರು ವಿಷಯ ತಿಳಿದು ಜಮಾಯಿಸಿ ತಹಶೀಲ್ದಾರ್ ಅವರನ್ನು ಸುಮಾರು 3 ಗಂಟೆಗಳ ಕಾಲ ಅಡ್ಡಗಟ್ಟಿ ನಿಂತು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ತಹಶೀಲ್ದಾರ್ ಹಾಗೂ ಗ್ರಾಮಸ್ಥರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಬಿಗಡಾಯಿಸಿದ ಕಾರಣ ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರು ಗ್ರಾಮಸ್ಥರ ಜೊತೆ ಮಾತನಾಡಿ, ಈ ದೇವಾಲಯವು ಸಿ ಶ್ರೇಣಿಗೆ ಸೇರಿದ್ದು, ಇದನ್ನು ಮುಜರಾಯಿ ಇಲಾಖೆಗೆ ವಶಕ್ಕೆ ತೆಗೆದುಕೊಳ್ಳುವಂತೆ ಇದೇ ಗ್ರಾಮದ ಗ್ರಾಮಸ್ಥರು ಹೈಕೋರ್ಟ್ ಮೊರೆ ಹೋಗಿದ್ದರು ಎಂದರು.
ಈ ಸಂಬಂಧ ನ. 18 ರಂದು ದೇವಸ್ಥಾನವನ್ನು ಮುಜರಾಯಿ ಇಲಾಖೆ ವಶಕ್ಕೆ ತೆಗೆದುಕೊಳ್ಳುವಂತೆ ಆದೇಶ ಹೊರಡಿಸಿದೆ. ಹೀಗಾಗಿ ಕೋರ್ಟ್ ಆದೇಶದ ಮೇರೆಗೆ ಇಲಾಖೆ ವಶಕ್ಕೆ ತೆಗೆದುಕೊಳ್ಳಲು ಆಗಮಿಸಿದ್ದೇವೆ. ಇನ್ನೆರಡು ದಿನಗಳ ಕಾಲಾವಕಾಶ ನೀಡಲಾಗುವುದು. ಅಷ್ಟರೊಳಗೆ ಭಕ್ತಾದಿಗಳು ಹಾಗೂ ಗ್ರಾಮಸ್ಥರು ದೇಗುಲವನ್ನು ಮುಜರಾಯಿ ಇಲಾಖೆಗೆ ಸುಪರ್ದಿಗೆ ನೀಡುವಂತೆ ಮನವಿ ಮಾಡಿ, ಸ್ಥಳದಿಂದ ನಿರ್ಗಮಿಸಿದರು. ಆಗ ಪರಿಸ್ಥಿತಿ ಶಾಂತವಾಯಿತು.
ಈ ವೇಳೆ ಡಿವೈಎಸ್ಪಿ ಯಶವಂತ್ ಕುಮಾರ್, ಸಿಪಿಐ ನಾರಾಯಣ್, ಪಿಎಸ್‌ಐ ಭೀಮಪ್ಪ ಬಾಣಸಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.