ADVERTISEMENT

ಸದ್ಗುಣ, ಸಂಸ್ಕಾರವೇ ಶಿಕ್ಷಣದ ಗುರಿ: ಸಿದ್ದಲಿಂಗ ಸ್ವಾಮೀಜಿ

ಆದಿಚುಂಚನಗಿರಿಯಲ್ಲಿ ರಾಜ್ಯಮಟ್ಟದ ವಿಜ್ಞಾತಂ ಉತ್ಸವ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2025, 15:17 IST
Last Updated 19 ಫೆಬ್ರುವರಿ 2025, 15:17 IST
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಬುಧವಾರ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರ 12ನೇ ವಾರ್ಷಿಕ ಪಟ್ಟಾಭಿಷೇಕದ ಪ್ರಯುಕ್ತ ಆಯೋಜಿಸಿರುವ ರಾಜ್ಯಮಟ್ಟದ ವಿಜ್ಞಾತಂ ಉತ್ಸವ ಮತ್ತು ಬೃಹತ್ ವಸ್ತು ಪ್ರದರ್ಶನ ಸಮಾರಂಭವನ್ನು ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಬುಧವಾರ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರ 12ನೇ ವಾರ್ಷಿಕ ಪಟ್ಟಾಭಿಷೇಕದ ಪ್ರಯುಕ್ತ ಆಯೋಜಿಸಿರುವ ರಾಜ್ಯಮಟ್ಟದ ವಿಜ್ಞಾತಂ ಉತ್ಸವ ಮತ್ತು ಬೃಹತ್ ವಸ್ತು ಪ್ರದರ್ಶನ ಸಮಾರಂಭವನ್ನು ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು   

ನಾಗಮಂಗಲ: ‘ಮನುಷ್ಯನನ್ನು ಎತ್ತರಕ್ಕೆ ಕೊಂಡೊಯ್ಯುವ ಸಾಧನಗಳಾಗಿರುವ ಸದ್ಗುಣ ಮತ್ತು ಸಂಸ್ಕಾರಗಳು ಶಿಕ್ಷಣದ ನಿಜವಾದ ಗುರಿಯಾಗಬೇಕು. ಧರ್ಮ, ವಿಜ್ಞಾನ ಮತ್ತು ಅಧ್ಯಾತ್ಮದ ಅವಿನಾಭಾವ ಸಂಬಂಧಗಳು ವಿಶ್ವದಲ್ಲಿ ಜರುಗಿರುವ ಅನೇಕ ಆವಿಷ್ಕಾರಗಳಿಗೆ ನಾಂದಿಯಾಗಿವೆ’ ಎಂದು ತುಮಕೂರು ಸಿದ್ದಗಂಗಾ ಮಠದ ಪೀಠಾಧ್ಯಕ್ಷರ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಆದಿಚುಂಚನಗಿರಿ ಸಂಸ್ಥಾನ ಮಠದಲ್ಲಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರ 12ನೇ ವಾರ್ಷಿಕ ಪಟ್ಟಾಭಿಷೇಕದ ಪ್ರಯುಕ್ತ ಆಯೋಜಿಸಿರುವ ರಾಜ್ಯಮಟ್ಟದ ವಿಜ್ಞಾತಂ ಉತ್ಸವ ಮತ್ತು ಬೃಹತ್ ವಸ್ತು ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದ ಆದಿಚುಂಚನಗಿರಿ ಸಂಸ್ಥಾನ ಮಠವು ದೇಶಕ್ಕೆ ಮಾದರಿಯಾಗಿದೆ. ಮಹಾನ್ ದಾರ್ಶನಿಕರಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿ ಅವರ ದೃಢವಾದ ಸಂಕಲ್ಪ ಶಕ್ತಿಯ ಫಲವಾಗಿ ಇಂದು ಆದಿಚುಂಚನಗಿರಿ ಮಠವು ವಿಶ್ವಮಟ್ಟದಲ್ಲಿ ಬೆಳೆದು ಸಮಾಜ ಸೇವೆಯನ್ನು ಮಾಡುತ್ತಿದೆ. ನಾಡಿನ ವಿದ್ಯಾರ್ಥಿಗಳಿಗೆ ವಿಜ್ಞಾನದ ಆಕರ್ಷಣೆಯನ್ನು ಮತ್ತು ಆಸಕ್ತಿಯನ್ನು ಹೆಚ್ಚಿಸುವ ಮೂಲಕ ಅವರನ್ನು ಜ್ಞಾನವಂತರನ್ನಾಗಿ ಮಾಡುವ ಉದ್ದೇಶದಿಂದ ವಿಜ್ಞಾತಂ ಉತ್ಸವ ಮತ್ತು ವಸ್ತು ಪ್ರದರ್ಶನದ ಕಾರ್ಯಕ್ರಮವನ್ನು ಆಯೋಜಿಸಿರುವುದು ನಿಜಕ್ಕೂ ಅರ್ಥಪೂರ್ಣ’ ಎಂದು ಶ್ಲಾಘಿಸಿದರು.

ADVERTISEMENT

ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಗೌತಮ್ ರಾಧಾಕೃಷ್ಣ ದೇಸಿರಾಜು ಉದ್ಘಾಟಿಸಿದರು. ಅವರು ಬರೆದಿರುವ ಮತದಾರನ ಹಕ್ಕು ಮತ್ತು ಜವಾಬ್ದಾರಿಗಳ ಕುರಿತ ‘ದಿ ಲಿಮಿಟೇಶನ್‌’ ಎಂಬ ಕೃತಿಯನ್ನು ಗಣ್ಯರು ಬಿಡುಗಡೆ ಮಾಡಿದರು.

‘ವಿಜ್ಞಾತಂ ಸಂಚಯ’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ‘ಆದಿಚುಂಚನಗಿರಿ, ಸುತ್ತೂರು ಮತ್ತು ಸಿದ್ದಗಂಗಾ ಮಠಗಳು ಶಿವನ ಮೂರು ಕಣ್ಣುಗಳಿದ್ದಂತೆ, ಶ್ರೇಷ್ಠ ಸಂಸ್ಥಾನಗಳಾಗಿವೆ. ನನ್ನ ಪ್ರೌಢಶಿಕ್ಷಣವೂ ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿ ಆಶೀರ್ವಾದದೊಂದಿಗೆ ನಡೆಯಿತು, ನಂತರ ಬಾಲಗಂಗಾಧರನಾಥ ಸ್ವಾಮೀಜಿ ಅವರ ಮಾರ್ಗದರ್ಶನವೂ ನಮಗೆ ದೊರೆಯಿತು. ಆದಿಚುಂಚನಗಿರಿ ಮಠವು ಆಧ್ಯಾತ್ಮಿಕ ಕ್ಷೇತ್ರಕ್ಕೆ ಮಾತ್ರವೇ ಸೀಮಿತವಾಗದೇ ಶಿಕ್ಷಣ, ಆರೋಗ್ಯ, ಅರಣ್ಯ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಅನೇಕ ಕ್ಷೇತ್ರಗಳನ್ನು ಪೋಷಿಸಿ ಮುನ್ನಡೆಸುತ್ತಿದೆ’ ಎಂದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮಾತನಾಡಿ, ‘ಬೆಂಗಳೂರಿನಲ್ಲಿ ಇತ್ತೀಚೆಗೆ ಜರುಗಿದ ಏರೋ ಇಂಡಿಯಾ ಪ್ರದರ್ಶನದಲ್ಲಿ ಭಾರತದ ಸಾಧನೆಯ ಭರವಸೆಯ ಮೇಲೆ ಹೊರದೇಶಗಳಿಂದ ಅಪಾರ ಸಂಖ್ಯೆಯ ಹೂಡಿಕೆಗಳು ಸಾಧ್ಯವಾಗುತ್ತಿವೆ’ ಎಂದರು.

ಸಮಾರಂಭದ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ‌ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಸಂತನಿಗೂ ವಿಜ್ಞಾನಿಗೂ ವ್ಯತ್ಯಾಸವಿಲ್ಲ. ಧರ್ಮ ಮತ್ತು ಆಧ್ಯಾತ್ಮವನ್ನು ಬೋಧಿಸುವ ಸಂತ ಒಬ್ಬ ಶ್ರೇಷ್ಠ ವಿಜ್ಞಾನಿಯಂತೆ. ಇದಕ್ಕೆ ನಮ್ಮೆಲ್ಲರ ಆರಾಧ್ಯ ದೈವ ಬಾಲಗಂಗಾಧರನಾಥ ಸ್ವಾಮೀಜಿ ಅವರು ದೊಡ್ಡ ಉದಾಹರಣೆಯಾಗಿದ್ದಾರೆ. ಇಂದು ಅನಾವರಣಗೊಂಡಿರುವ ಬೃಹತ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರದರ್ಶನಗೊಳ್ಳುತ್ತಿರುವ ನೂರಾರು ಸಂಖ್ಯೆಯ ವಿಜ್ಞಾನ ಮಾದರಿಗಳು ಜ್ಞಾನ ಸಂಪನ್ನತೆಗೆ ಹಿಡಿದ ಕನ್ನಡಿ. ಹೊಸತನ್ನು ಹುಡುಕುವುದು ಶಿಕ್ಷಣದ ಗುರಿಯಾಗಬೇಕು’ ಎಂದರು.

ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ಚಾಮೀಜಿ, ಮಂಡ್ಯ ಶಾಸಕ ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಕುಮಾರ್, ಮಂಡ್ಯ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಆರ್.ನಂದಿನಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಎಂ.ಎ.ಶೇಖರ್, ಕುಲ ಸಚಿವ ಸಿ.ಕೆ.ಸುಬ್ಬರಾಯ, ಶಿಕ್ಷಣ ಟ್ರಸ್ಟ್ ನ ಆಡಳಿತಾಧಿಕಾರಿ ಎ.ಟಿ.ಶಿವರಾಮು ಇದ್ದರು.

1220ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

ವಸ್ತು ಪ್ರದರ್ಶನದಲ್ಲಿ 172ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ತಂಡಗಳ 1220 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಲ್ಲದೇ ವಸ್ತುಪ್ರದರ್ಶನದಲ್ಲಿ ಸುಮಾರು 180ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಿ ಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತಾದ ಮಾದರಿಗಳನ್ನು ಮಾಡಿದ್ದರು. ಹಸಿರು ಮನೆ ಪರಿಣಾಮ ಯೋಗ ಮತ್ತು ಚಿಕಿತ್ಸೆ ಆಯುರ್ವೇದ ರಕ್ತದಾನ ಆರೋಗ್ಯ ಶಿಕ್ಷಣ ಸುಸ್ಥಿರ ಕೃಷಿ ಯಂತ್ರೋಪಕರಣ ಸ್ಮಾರ್ಟ್ ವಾಟರ್ ಇರಿಗೇಷನ್ ನರ್ಸರಿ ಸಸ್ಯಗಳು ಡ್ರೋನ್ ಮಾದರಿ ಮಳೆ ನೀರುಕೊಯ್ಲು ಸೇರಿದಂತೆ ವಿವಿಧ ಮಾದರಿಗಳು ಎಲ್ಲರ ಗಮನಸೆಳೆದವು. ಅಲ್ಲದೇ ವಿಜ್ಞಾತಂ ಉತ್ಸವದ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.