ADVERTISEMENT

ಧರ್ಮದ ಮಾರ್ಗದಲ್ಲಿ ನಡೆದರೆ ಮನಸ್ಸಿಗೆ ನೆಮ್ಮದಿ: ನಿರ್ಮಲಾನಂದನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 13:52 IST
Last Updated 11 ಜೂನ್ 2025, 13:52 IST
ಕೆ.ಆರ್.ಪೇಟೆ ತಾಲ್ಲೂಕಿನ ರಾಜೇನಹಳ್ಳಿಯಲ್ಲಿ ಕಾಲ ಭೈರವೇಶ್ವರ ದೇವಾಲಯದ ಲೋಕಾರ್ಪಣೆಯನ್ನು ಆದಿಚುಂಚನಗಿರಿ ಪೀಠದ ನಿರ್ಮಲಾನಂದನಾಥ ಸ್ವಾಮೀಜಿ ನೆರವೇರಿಸಿದರು
ಕೆ.ಆರ್.ಪೇಟೆ ತಾಲ್ಲೂಕಿನ ರಾಜೇನಹಳ್ಳಿಯಲ್ಲಿ ಕಾಲ ಭೈರವೇಶ್ವರ ದೇವಾಲಯದ ಲೋಕಾರ್ಪಣೆಯನ್ನು ಆದಿಚುಂಚನಗಿರಿ ಪೀಠದ ನಿರ್ಮಲಾನಂದನಾಥ ಸ್ವಾಮೀಜಿ ನೆರವೇರಿಸಿದರು   

ಕೆ.ಆರ್.ಪೇಟೆ: ಇಂದಿನ ಒತ್ತಡದ ಜೀವನದಲ್ಲಿ ದೇವರು ಮತ್ತು ಧರ್ಮದ ಮಾರ್ಗದಲ್ಲಿ ಸಾಗುವುದರಿಂದ ಮಾತ್ರ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ರಾಜೇನಹಳ್ಳಿಯಲ್ಲಿ ಬುಧವಾರ ಕಾಲ ಭೈರವೇಶ್ವರ ದೇವಾಲಯದ ಗೋಪುರದ ಕಳಸಾರೋಹಣ ನೆರವೇರಿಸಿ, ವಿಶೇಷ ಪೂಜೆ ಸಲ್ಲಿಸಿದ ಬಳಿಕ  ಮಾತನಾಡಿದರು.

‘ಧರ್ಮದ ಮಾರ್ಗದಲ್ಲಿ ನಡೆದರೆ ಮಾತ್ರ ಮನಸ್ಸಿಗೆ ಶಾಂತಿ ದೊರಕುತ್ತದೆ ಎಂದು ನಮ್ಮ ಪೂರ್ವಜರು ನಂಬಿದ್ದರಿಂದಲೇ ಗುಡಿಗೋಪುರಗಳು ನಿರ್ಮಾಣವಾದವು. ಹಸಿದವರಿಗೆ ಬೇಕಾಗಿರುವುದು ಅನ್ನವೇ ಹೊರತು ಚಿನ್ನವಲ್ಲ, ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮವು ವಿಶ್ವದಲ್ಲಿಯೇ ಯಾವುದೂ ಇಲ್ಲ. ಆದ್ದರಿಂದ ನಮ್ಮ ಮನಸ್ಸು ಹಾಗೂ ಆತ್ಮಸಾಕ್ಷಿ ಒಪ್ಪುವ ಜನಪರ ಕೆಲಸಗಳನ್ನು ಮಾಡುತ್ತಾ ಫಲಾಫಲವನ್ನು ಭಗವಂತನಿಗೆ ಬಿಡೋಣ, ಹೊಗಳಿಕೆ ತೆಗಳಿಕೆಗೆ ಸಮಾನ ಸ್ಥಾನ ನೀಡುವುದನ್ನು ರೂಢಿಸಿಕೊಳ್ಳೊಣ’ ಎಂದರು.

ADVERTISEMENT

ಲೋಕಾಯುಕ್ತ ವಿಶ್ರಾಂತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಮಾತನಾಡಿ, ‘ಮಾನವನ ಅತಿಯಾದ ಆಸೆ ಮತ್ತು ಸ್ವಾರ್ಥದಿಂದಾಗಿ ಸಮಾಜವು ನೈತಿಕವಾಗಿ ಅಧಃಪತನದತ್ತ ಸಾಗುತ್ತಿದೆ. ಈ ಹಿಂದೆ ಕಳ್ಳತನ, ಮೋಸ, ವಂಚನೆ ಮಾಡಿ ಜೈಲಿಗೆ ಹೋಗಿ ಬಂದವರನ್ನು ಸಾಮಾನ್ಯರು ಮಾತನಾಡಿಸಲು ಹೆದರುತ್ತಿದ್ದರು. ಆದರೆ ಇಂದು ಭ್ರಷ್ಟಾಚಾರ ಮಾಡಿ ಕೋಟಿಗಟ್ಟಲೆ ಹಣ ಮಾಡಿರುವವರಿಗೆ ಜನರು ಜೈಕಾರ ಹಾಕುತ್ತಿದ್ದಾರೆ. ಹಾದಿ ತಪ್ಪುತ್ತಿರುವ ಯುವ ಜನಾಂಗವನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ದು ಸಶಕ್ತ ಸದೃಢ ಸಮಾಜವನ್ನು ಕಟ್ಟುವುದು ಇಂದಿನ ಅಗತ್ಯ’ ಎಂದರು.

ಮೈಸೂರಿನ ಆದಿಚುಂಚನಗಿರಿ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಮಂಡ್ಯದ ಕೊಮ್ಮೆರಹಳ್ಳಿಯ ವಿಶ್ವಮಾನವ ಕ್ಷೇತ್ರದ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಾಸಕ ಎಚ್.ಟಿ. ಮಂಜು ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರೇವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ಬಿ.ಪ್ರಕಾಶ್, ಪ್ರಮುಖರಾದ ರಾಜೇನಹಳ್ಳಿ ಕುಮಾರಸ್ವಾಮಿ, ಬೂಕಹಳ್ಳಿ ಮಂಜು, ಆರ್.ಟಿ.ಒ ಮಲ್ಲಿಕಾರ್ಜುನ, ವಿಶ್ರಾಂತ ಎಸಿಪಿ ಕೆ.ಎನ್.ರಮೇಶ್, ಬಿಜಿಎಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ನರಸೇಗೌಡ, ಗಂಜಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್, ಅಂಚಿ ಸಣ್ಣಸ್ವಾಮಿಗೌಡ, ಉದ್ಯಮಿ ಬಾಬುಲಿಂಗರಾಜ ಅರಸು, ಆರ್.ಎಸ್.ಮುಕುಂದ, ಪದ್ಮೇಶ್, ಆರ್.ಕೆ.ರಾಜೇಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.