ಶ್ರೀರಂಗಪಟ್ಟಣ: ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆ ಕೃಷಿ ಜಮೀನು, ಸರ್ಕಾರಿ ಶಾಲೆ, ಗ್ರಂಥಾಲಯ ಕಟ್ಟಡ ಮತ್ತು ಸ್ಮಾರಕಗಳ ಪಹಣಿಗಳಲ್ಲಿ ವಕ್ಫ್ ಎಂದು ನಮೂದಾಗಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ‘ಶ್ರೀರಂಗಪಟ್ಟಣ ಬಂದ್’ ಗೆ ಉತ್ತಮ ಪ್ರತಿಕ್ರಿಯೆ ದೊರಕಿತು.
ಪಟ್ಟಣದಲ್ಲಿ ಅಂಗಡಿ, ಹೋಟೆಲ್ ಬೆಳಿಗ್ಗೆಯಿಂದ ಸಂಜೆವರೆಗೂ ಸಂಪೂರ್ಣವಾಗಿ ಮುಚ್ಚಿದ್ದವು. ಬ್ಯಾಂಕ್ ಶಾಖೆಗಳೂ ಬಂದ್ ಆಗಿದ್ದು, ಪೇಟೆ ಬೀದಿ ಬಿಕೋ ಎನ್ನುತ್ತಿತ್ತು. ರಾಜ್ಯ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳು ತೆರೆದಿದ್ದವರಾದರೂ ಜನ ವಿರಳವಾಗಿದ್ದರು. ಆಸ್ಪತ್ರೆ, ಔಷಧಿ ಅಂಗಡಿ ಹಾಗೂ ಹಾಪ್‌ಕಾಮ್ಸ್ ಮಳಿಗೆಗಳು ತೆರೆದಿದ್ದವು. ವಕೀಲರು ನ್ಯಾಯಾಲಯ ಕಲಾಪದಿಂದ ದೂರ ಉಳಿದು ಬೆಂಬಲ ವ್ಯಕ್ತಪಡಿಸಿದರು.
ಪಟ್ಟಣದ ಕುವೆಂಪು ವೃತ್ತದ ಬಳಿ, ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಾನವ ಸಪರಳಿ ರಚಿಸಿ ಪ್ರತಿಭಟಿಸಿದರು. ರಾಜ್ಯ ಸರ್ಕಾರ, ಮುಖ್ಯಮಂತ್ರಿ ಹಾಗೂ ಸಚಿವ ಜಮೀರ್ ಅಹಮದ್‌ಖಾನ್ ವಿರುದ್ಧ ಘೋಷಣೆ ಕೂಗಿದರು. ಕುವೆಂಪು ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಮುಖ್ಯ ಬೀದಿಯಲ್ಲಿ ಕಬ್ಬಿನ ಜಲ್ಲೆ ಹಿಡಿದು ಎತ್ತಿನ ಗಾಡಿ ಮತ್ತು ಟ್ರ್ಯಾಕ್ಟರ್ ಸಹಿತ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪುರಸಭೆ ವೃತ್ತ, ಲಕ್ಷ್ಮಿ ಗುಡಿ ವೃತ್ತ ಮತ್ತು ಅಂಬೇಡ್ಕರ್ ವೃತ್ತದ ಮೂಲಕ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.