ADVERTISEMENT

ಮಂಡ್ಯ: ಜವರಾಯನ ವಿರುದ್ಧ ಸತ್ಯಾಭಾಮಾ ಹೋರಾಟ

ಸತ್ಯನಿಸರ್ಗ ಅವರ ‘ಗೆದ್ದೇ ಗೆಲ್ಲುವೆನು ಒಂದು ದಿನ’ ಕೃತಿ ಬಿಡುಗಡೆ, ಮಂಜುಳಾ ಹುಲ್ಲಹಳ್ಳಿ ಅಭಿಮತ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 13:14 IST
Last Updated 26 ಫೆಬ್ರುವರಿ 2021, 13:14 IST
ಅನನ್ಯ ಹಾರ್ಟ್‌ ಸಂಸ್ಥೆ ವತಿಯಿಂದ ಗಾಂಧಿಭವನದಲ್ಲಿ ನಡೆದ ಸಮಾರಂಭದಲ್ಲಿ ಸತ್ಯನಿಸರ್ಗ ಅವರ ‘ಗೆದ್ದೇ ಗೆಲ್ಲುವೆನು ಒಂದು’ ಕೃತಿ ಬಿಡುಗಡೆ ಮಾಡಲಾಯಿತು
ಅನನ್ಯ ಹಾರ್ಟ್‌ ಸಂಸ್ಥೆ ವತಿಯಿಂದ ಗಾಂಧಿಭವನದಲ್ಲಿ ನಡೆದ ಸಮಾರಂಭದಲ್ಲಿ ಸತ್ಯನಿಸರ್ಗ ಅವರ ‘ಗೆದ್ದೇ ಗೆಲ್ಲುವೆನು ಒಂದು’ ಕೃತಿ ಬಿಡುಗಡೆ ಮಾಡಲಾಯಿತು   

ಮಂಡ್ಯ: ‘ಕ್ಯಾನ್ಸರ್‌ ಎಂದೊಡನೆ ಮನಸ್ಸು ಭಯದಿಂದ ಚದುರಿ ಹೋಗುತ್ತದೆ, ದೇಹ ಕುಗ್ಗುತ್ತದೆ. ಆದರೆ ಸತ್ಯನಿಸರ್ಗ (ಸತ್ಯಭಾಮಾ) ಅವರು ಮೂರು ವರ್ಷಗಳಿಂದ ಕ್ಯಾನ್ಸರ್‌ ಜೊತೆ ಬದುಕುತ್ತಾ ಜವರಾಯನ ವಿರುದ್ಧ ಹೋರಾತ್ತಿದ್ದಾರೆ’ ಎಂದು ಚಿಕ್ಕಮಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ, ಚಿಂತಕಿ ಮಂಜುಳಾ ಹುಲ್ಲಹಳ್ಳಿ ಹೇಳಿದರು.

ಅನನ್ಯ ಹಾರ್ಟ್‌ ಸಂಸ್ಥೆಯ ವತಿಯಿಂದ ನಗರದ ಗಾಂಧಿಭವನದಲ್ಲಿ ಶುಕ್ರವಾರ ನಡೆದ ಸತ್ಯನಿಸರ್ಗ ಅವರ ‘ಗೆದ್ದೇ ಗೆಲ್ಲುವೆನು ಒಂದು ದಿನ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘29 ಇಂಚಿನ ಆಪರೇಷನ್‌ ಎದುರಿಸಿರುವ ಸತ್ಯಭಾಮಾ ಕ್ಯಾನ್ಸರ್‌ ವಿರುದ್ಧ ಹೋರಾಡಿದ ರೀತಿ ವೈದ್ಯರಿಗೇ ಪಾಠವಾಗಿದೆ. ಸಾವಿನ ಬಗ್ಗೆ ಮಾತನಾಡಿದರೆ ಸಾಕು, ಸಮಾಜ ಭಯಪಡುತ್ತದೆ. ಆದರೆ ಹೊಸ್ತಿಲಲ್ಲೇ ಕಾದುಕುಳಿತಿರುವ ಸಾವನ್ನು ಅವರು ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಎದುರಿಸುತ್ತಿದ್ದಾರೆ. ಕ್ಯಾನ್ಸರ್‌ ಎಂದರೆ ಸಾವಲ್ಲ, ಅದಕ್ಕೆ ಆತ್ಮವಿಶ್ವಾಸವೇ ಮದ್ದು ಎಂಬ ಸತ್ಯವನ್ನು ಜಗತ್ತಿಗೆ ತಿಳಿಸಿದ್ದಾರೆ’ ಎಂದರು.

ADVERTISEMENT

‘ಕ್ಯಾನ್ಸರ್‌ ವಿರುದ್ಧದ ಹೋರಾಟವನ್ನು ಕೃತಿಯಲ್ಲಿ ಲೇಖಕಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಕ್ಯಾನ್ಸರ್‌ ಇದೆ ಎಂಬ ವಿಚಾರ ಗೊತ್ತಾದೊಡನೆ ಅವರು ಕಗ್ಗಿ ಹೋಗಲಿಲ್ಲ. ನಿರ್ಲಿಪ್ತ ಭಾವದಿಂದ ಎಲ್ಲವನ್ನೂ ಎದುರಿಸಿದ್ದಾರೆ. ಆಕೆಯ ಮನೋಭಲ, ಧೈರ್ಯ ಹಾಗೂ ಆತ್ಮವಿಶ್ವಾಸ ಆಶ್ಚರ್ಯ ಮೂಡಿಸುತ್ತದೆ. ಕ್ಯಾನ್ಸರ್‌ ವಿರುದ್ಧ ಹೋರಾಡಿ ಗೆಲ್ಲುತ್ತೇನೆ ಎಂಬ ಧ್ವನಿ ಕೃತಿಯಲ್ಲಿ ಮೊಳಗಿದೆ’ ಎಂದರು.

‘ಇಲ್ಲಿಯವರೆಗೂ ಸತ್ಯಭಾಮಾ ಮೂರು ಶಸ್ತ್ರಚಿಕತ್ಸೆ ಎದುರಿಸಿದ್ದಾರೆ. ಪ್ರತಿ ಬಾರಿಯೂ ನೋವು ನುಂಗಿ ನಗೆ ಬೀರಿದ್ದಾರೆ. ಅವರ ಅನುಭವಗಳಿಗೆ ಕೃತಿಯಲ್ಲಿ ಅಕ್ಷರ ರೂಪ ನೀಡಿದ್ದಾರೆ. ಅವರ ಹೋರಾಟಕ್ಕೆ ಅವರ ಕುಟುಂಬ ಸದಸ್ಯರು, ಸ್ನೇಹಿತರು, ವೈದ್ಯರು ಹೆಗಲು ಕೊಟ್ಟಿದ್ದಾರೆ. ಸಾಹಿತ್ಯದ ಮೇಲೆ ವಿಶೇಷ ಆಸಕ್ತಿ ಹೊಂದಿರುವ ಅವರು ಕ್ಯಾನ್ಸರ್‌ ಗೆದ್ದು ಬಂದು ಮತ್ತಷ್ಟು ಬರೆಯುವಂತಾಗಬೇಕು’ ಎಂದು ಹಾರೈಸಿದರು.

ಮೈಸೂರು ರೇಡಿಯಂಟ್‌ ಆಸ್ಪತ್ರೆಯ ಕಾನ್ಸರ್‌ ತಜ್ಞ ಡಾ.ಕಿರಣ್‌ ಶಂಕರ್‌ ಮಾತನಾಡಿ ‘ಸತ್ಯಾಭಾಮಾ ಅವರ ಮನೋಬಲ ಮಾದರಿಯಾದುದು. ಕಾನ್ಸರ್ ಕೂಡ ಇತರ ರೋಗಗಳಂತೆ ಒಂದು ರೋಗ ಎಂಬ ಭಾವನೆ ಅವರಲ್ಲಿತ್ತು. ಈ ಸತ್ಯ ಎಲ್ಲರಿಗೂ ಗೊತ್ತಾದರೆ ಶೇ 99ರಷ್ಟು ಕ್ಯಾನ್ಸರ್‌ ಗೆಲ್ಲಬಹುದು’ ಎಂದರು.

‘ಕ್ಯಾನ್ಸರ್‌ ಎಂದೊಡನೆ ದೈಹಿಕ ನೋವಿಗಿಂತ ಮಾನಸಿಕ ನೋವು ಹೆಚ್ಚಾಗಿ ಕಾಡುತ್ತದೆ. ಆದರೆ ಸತ್ಯಭಾಮಾ ಅವರ ಕಣ್ಣಲ್ಲಿ ನಾನು ಒಮ್ಮೆಯೂ ಕಣ್ಣೀರು ನೋಡಲಿಲ್ಲ. ವೈದ್ಯರ ಮಾರ್ಗದರ್ಶನಗಳನ್ನು ಚಾಚೂತಪ್ಪದೇ ಪಾಲಿಸುತ್ತಿದ್ದರು. ಸಕಾರಾತ್ಮಕ ಗುಣಗಳಿಂದಲೇ ಅವರು ರೋಗದ ವಿರುದ್ಧ ಹೋರಾಡುತ್ತಿದ್ದಾರೆ’ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶೈಲಜಾ ಮಾತನಾಡಿ ‘ನಾವ್ಯಾರೂ ಅರ್ಜಿ ಹಾಕಿಕೊಂಡು ಹುಟ್ಟಿ ಬಂದವರಲ್ಲ. ಹುಟ್ಟಿದ ಮೇಲೆ ಎಲ್ಲರೂ ಸಾಯಲೇಬೇಕು. ಹುಟ್ಟು–ಸಾವಿನ ನಡುವೆ ಇರುವ ಜೀವನವನ್ನು ಹೋರಾಟದಲ್ಲಿ ಕಳೆಯುತ್ತೇವೆ. ಎಲ್ಲರೂ ಒಂದಲ್ಲ ಒಂದು ರೀತಿ ಹೋರಾಟ ಮಾಡುತ್ತಾರೆ. ಆದರೆ ಸತ್ಯಭಾಮಾ ಅವರು ಮಾಡುತ್ತಿರುವ ಹೋರಾಟ ಇಡೀ ಜಗತ್ತಿಗೆ ಮಾದರಿಯಾದುದು’ ಎಂದರು.

ಸಮಾರಂಭದಲ್ಲಿ ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ, ಸಾಹಿತಿಗಳಾದ ತೈಲೂರು ವೆಂಕಟಕೃಷ್ಣ, ಡಾ.ಪ್ರದೀಪ್‌ಕುಮಾರ್‌ ಹೆಬ್ರಿ, ಬಿ.ಎಸ್‌.ಅನುಪಮಾ, ಕಾಡೇನಹಳ್ಳಿ ನಾಗಣ್ಣಗೌಡ ಇದ್ದರು. ಪುಸ್ತಕ ಬಿಡುಗಡೆ ನಂತರ ಕವಿಗೋಷ್ಠಿ ನಡೆಯಿತು.

*********

ಉಯ್ಯಾಲೆಯಾದ ವ್ಹೀಲ್‌ಚೇರ್‌...

‘ಪ್ರತಿ ಶಸ್ತ್ರಚಿಕಿತ್ಸೆ ವೇಳೆ ಆಪರೇಷನ್‌ ಥಿಯೇಟರ್‌ಗೆ ತೆರಳುವಾಗ ವೀಲ್‌ಚೇರ್‌ ಸತ್ಯಭಾವ ಅವರಿಗೆ ತುಗುಯ್ಯಾಲೆ ಎನಿಸುತ್ತಿತ್ತು. ಭಯದಿಂದ ಅವರು ಶಸ್ತ್ರಚಿಕಿತ್ಸೆಗೆ ಒಳಗಾದವರಲ್ಲ. ವ್ಹೀಲ್‌ಚೇರ್‌ ತಳ್ಳುವವನು, ಅಕ್ಕ ನೀವು ಗೆದ್ದು ಬರುತ್ತೀರಾ ಎಂದು ಹಾರೈಸಿದ್ದ. ಭಾವುಕ ಕ್ಷಣಗಳನ್ನು ಲೇಖಕಿ ಕೃತಿಯಲ್ಲಿ ತೆರೆದಿಟ್ಟಿದ್ದಾರೆ’ ಎಂದು ಮಂಜುಳಾ ಹುಲ್ಲಹಳ್ಳಿ ಹೇಳಿದರು.

‘ಶಸ್ತ್ರಚಿಕಿತ್ಸೆಗೆ ತೆರಳುವ ಮುಂಚೆ ಅವರು ಸಾಯುವ ಆಟ ಆಡಿದ್ದರು. ತಾನು ಸತ್ತರೆ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ತಮ್ಮ ಮನೆಯವರನ್ನು ಕೇಳಿದ್ದರು. ಇಂತಹ ವಿಚಾರಗಳು ಸತ್ಯಭಾಮಾ ಅವರ ಮನಸ್ಸಿನ ಶಕ್ತಿಯನ್ನು ಅನಾವರಣಗೊಳಿಸುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.