
ಮಂಡ್ಯ: ನಗರದ ಗುತ್ತಲು ಕೆರೆಗೆ ತ್ಯಾಜ್ಯ ನೀರು ಹರಿಸಲಾಗುತ್ತಿರುವ ಸಂಬಂಧ ಲೋಕಾಯುಕ್ತದಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕುಮಾರ ಅವರು ಅಧಿಕಾರಿಗಳೊಂದಿಗೆ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಗುತ್ತಲು ಕೆರೆಯಲ್ಲಿರುವ ತ್ಯಾಜ್ಯ ನೀರು ಸಂಸ್ಕರಣ ಘಟಕ (ಎಸ್.ಟಿ.ಪಿ) ಉನ್ನತೀಕರಣಕ್ಕಾಗಿ ₹30 ಕೋಟಿ ಟೆಂಡರ್ ಕರೆದು, ಮಾರ್ಚ್‌ನಲ್ಲಿ ಗುತ್ತಿಗೆದಾರರಿಗೆ ಕೆಲಸ ಆರಂಭಿಸಲು ಆದೇಶ ನೀಡಲಾಗಿದೆ. 9 ತಿಂಗಳಿಂದ ಕೆಲಸ ಆರಂಭವಾಗಿಲ್ಲ. ಯಾವ ಹಂತಗಳಲ್ಲಿ ತಡವಾಗಿದೆ ಎಂಬುದನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು.
ಹಾಲಹಳ್ಳಿ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಒಳಚರಂಡಿ ಕೊಳವೆ ಮಾರ್ಗವನ್ನು ನೇರವಾಗಿ ತೆರೆದ ಚರಂಡಿಗೆ ಸಂಪರ್ಕ ಕಲ್ಪಿಸಿದ್ದು, ಇದರಿಂದ ತ್ಯಾಜ್ಯ ನೀರು ಗುತ್ತಲು ಕೆರೆಗೆ ಹರಿಯುತ್ತಿದೆ.
ಇಂಟರ್‌ಸೆಪ್ಷನ್ ಮತ್ತು ಡಿವಿಷನ್ ಮೂಲಕ ಹತ್ತಿರದ ಮ್ಯಾನ್‌ಹೋಲ್‌ಗಳಿಂದ ತ್ಯಾಜ್ಯ ನೀರು ಶುದ್ಧೀಕರಣ ಘಟಕಕ್ಕೆ ಕೊಳಚೆ ನೀರನ್ನು ಪಂಪ್ ಮಾಡಿ ಸಂಸ್ಕರಿಸಬೇಕು ಎಂದು ಈಗಾಗಲೇ ಅನುಮೋದನೆಗೊಂಡು ಕಾಮಗಾರಿ ನಿರ್ವಹಿಸಲು ಕಾರ್ಯದೇಶ ನೀಡಿರುವ ಟೆಂಡರ್‌ದಾರರಿಗೆ, ಕೆ.ಯು.ಐ.ಡಿ.ಎಫ್.ಸಿ ಹಾಗೂ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳಲ್ಲಿ ಅಳವಡಿಸಿರುವ ಎಸ್.ಟಿ.ಪಿ.ಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಘಟಕದಲ್ಲಿ ಶುದ್ಧೀಕರಿಸಿದ ನೀರನ್ನು ಮಂಡಳಿಯು ನಿಗದಿಪಡಿಸಿರುವ ಮಾನಕಗಳಿಗೆ ಅನುಗುಣವಾಗಿ ಸಂಸ್ಕರಣೆ ಮಾಡಿ ಸಮೀಪದಲ್ಲಿರುವ ವ್ಯವಸಾಯ ಹಾಗೂ ತೋಟಗಾರಿಕೆಗೆ ಉಪಯೋಗಿಸಲು ಸೂಕ್ತ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿ 15 ದಿನಗಳಿಗೊಮ್ಮೆ ಕೆಲಸದ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ಕರೆಯಬೇಕು ಎಂದು ಹೇಳಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಟಿ.ಎನ್.ನರಸಿಂಹಮೂರ್ತಿ, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್ ಪ್ರತಾಪ್, ನಗರಸಭೆ ಪೌರಾಯುಕ್ತೆ ಪಂಪಾಶ್ರೀ ಹಾಜರಿದ್ದರು.
ತ್ಯಾಜ್ಯ ತುರ್ತು ವಿಲೇವಾರಿಗೆ ಸೂಚನೆ
ಮಂಡ್ಯ: ಅನುಮೋದನೆಗೊಂಡ ಡಿ.ಪಿ.ಆರ್ ರೀತಿ ಗುತ್ತಿಗೆದಾರರಿಂದ ಶೇ 42ರಷ್ಟು ಸಂಸ್ಕರಣೆ ಮಾಡಿರುವ ತ್ಯಾಜ್ಯವನ್ನು ಹೊರತುಪಡಿಸಿ ಉಳಿದ ಪಾರಂಪರಿಕ ತ್ಯಾಜ್ಯವನ್ನು ನಿಗದಿತ ಅವಧಿಯಲ್ಲಿ ತುರ್ತಾಗಿ ವಿಲೇವಾರಿ ಮಾಡಲು ಜಿಲ್ಲಾಧಿಕಾರಿ ಕುಮಾರ ಸೂಚಿಸಿದರು. ಮಂಡ್ಯ ನಗರಸಭೆ ವ್ಯಾಪ್ತಿಯಲ್ಲಿನ ಕಾಳೇನಹಳ್ಳಿ ಗ್ರಾಮದಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬುಧವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಮನೆ– ಮನೆಯಿಂದ ಕಸ ಸಂಗ್ರಹಣೆ ಮಾಡುವಲ್ಲಿ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ಸಂಗ್ರಹಿಸಿ ನಂತರ ನೆಲಭರ್ತಿ ಜಾಗದಲ್ಲಿ ಸೂಕ್ತ ಕ್ರಮವಹಿಸಿ ವಿಲೇವಾರಿ ಮಾಡಲು ಸೂಚಿಸಲಾಯಿತು.
‘ಬೀದಿನಾಯಿ ನಿಯಂತ್ರಣಕ್ಕೆ ಕ್ರಮವಹಿಸಿ’
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಬೀದಿ ನಾಯಿಗಳ ಹಾವಳಿ ತಪ್ಪಿಸುವ ಸಂಬಂಧ ಪ್ರಮಾಣೀಕೃತ ಕಾರ್ಯ ವಿಧಾನಗಳಂತೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕುಮಾರ ಸೂಚಿಸಿದರು. ಜನನ ನಿಯಂತ್ರಣ ಕ್ರಮಗಳನ್ನು ಅಳವಡಿಸಿದ ನಂತರದಲ್ಲಿ ರೇಬಿಸ್ ಅಥವಾ ಗಂಭೀರವಾಗಿ ಆಕ್ರಮಣಕಾರಿ ನಡವಳಿಕೆ ಹೊಂದಿರುವ ನಾಯಿಗಳನ್ನು ಬೀದಿಗೆ ಬಿಡದೆ ಪ್ರತ್ಯೇಕ ಮತ್ತು ಸುರಕ್ಷಿತ ಸ್ಥಳದಲ್ಲಿ ಇರಿಸುವಂತೆ ಮಾರ್ಗದರ್ಶನ ನೀಡಲಾಯಿತು. ಸ್ಥಳೀಯ ನಿವಾಸಿಗಳು ಆರ್‌ಡಬ್ಲ್ಯೂಎಗಳು ಮತ್ತು ಪ್ರಾಣಿ ಕಲ್ಯಾಣ ಸಂಸ್ಥೆಗಳ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀದಿನಾಯಿಗಳಿಗೆ ಜನನ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.