ಶ್ರೀರಂಗಪಟ್ಟಣ: ‘ತಾಲ್ಲೂಕಿನ ಕೆಆರ್‌ಎಸ್ ಜಲಾಶಯದ ಹಿನ್ನೀರಿನಿಂದ 133 ಅಡಿ ಆಳದಲ್ಲಿ ಮೈಸೂರು ನಗರಕ್ಕೆ ನೀರು ಕೊಂಡೊಯ್ಯುತ್ತಿದ್ದು, ಇದರಿಂದ ಮಂಡ್ಯ ಜಿಲ್ಲೆಗೆ ತೊಂದರೆಯಾಗಲಿದೆ’ ಎಂದು ಬಿಜೆಪಿ ಮುಖಂಡ ಕೆ.ಎಸ್. ನಂಜುಂಡೇಗೌಡ ಹೇಳಿದರು.
‘ಹಳೇ ಉಂಡವಾಡಿ ಗ್ರಾಮದಿಂದ ಮೈಸೂರು ನಗರದವರೆಗೆ 6 ಅಡಿ ವ್ಯಾಸದ ಕೊಳವೆಗಳನ್ನು ಅಳವಡಿಸಿ ನೀರು ಕೊಂಡೊಯ್ಯುವ ಕಾಮಗಾರಿ ನಡೆಯುತ್ತಿದೆ. ಈ ಪ್ರಮಾಣದಲ್ಲಿ ನೀರು ಹೋದರೆ 4 ದಿನಗಳಲ್ಲಿ ಜಲಾಶಯದ ಒಂದು ಟಿಎಂಸಿ ಅಡಿ ನೀರು ಖಾಲಿಯಾಗಲಿದೆ. ಜಲಾಶಯದ 130 ಅಡಿ ಆಳದಲ್ಲಿ ಈ ಬೃಹತ್ ಕೊಳವೆಗಳನ್ನು ಹಾಕಲಾಗುತ್ತಿದ್ದು, ಡೆಡ್ ಸ್ಟೋರೇಜ್‌ವರೆಗೂ ನೀರು ಖಾಲಿಯಾಗಲಿದೆ. ಬೆಂಗಳೂರು ನಗರಕ್ಕೂ ಇದೇ ರೀತಿ ನೀರು ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿದೆ. ಇದರಿಂದ ಮಂಡ್ಯ ಜಿಲ್ಲೆಗೆ ಯಾವುದೇ ತೊಂದರೆ ಇಲ್ಲ ಎಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವರು ಸ್ಪಷ್ಟಪಡಿಸಬೇಕು’ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
‘ಬೆಂಗಳೂರಿನಲ್ಲಿ, ರಾಜ್ಯ ಸರ್ಕಾರ ಆಯೋಜಿಸಿದ್ದ ಐಪಿಲ್ ಗೆಲುವಿನ ವಿಜಯೋತ್ಸವದಲ್ಲಿ 11 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಸಂವಿಧಾನದ ಬಗ್ಗೆ ಗೌರವ ಇದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.
ವಿಜಯೋತ್ಸವಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಲಾಯಿತು. ಬಿಜೆಪಿ ಮುಖಂಡರಾದ ಹನಿಯಂಬಾಡಿ ನಾಗರಾಜು, ಬಿ.ಸಿ. ಕೃಷ್ಣೇಗೌಡ, ದರಸಗುಪ್ಪೆ ಸುರೇಶ್, ಪುಟ್ಟಮಾದು, ರಾಮಕೃಷ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.