ADVERTISEMENT

ಶಾಲಾ ಕಟ್ಟಡ ಸಮಸ್ಯೆ ಬಗ್ಗೆ ವಾಟ್ಸ್ಆ್ಯಪ್‌ನಲ್ಲಿ ದೂರು: ಸ್ಪಂದಿಸಿದ ಶಿಕ್ಷಣ ಸಚಿವ

ಮದ್ದೂರು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 13:31 IST
Last Updated 14 ಸೆಪ್ಟೆಂಬರ್ 2019, 13:31 IST
ಮದ್ದೂರು ತಾಲ್ಲೂಕು ಗುರುದೇವರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಸಚಿವ ಎಸ್‌.ಸುರೇಶ್‌ಕುಮಾರ್‌ ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು
ಮದ್ದೂರು ತಾಲ್ಲೂಕು ಗುರುದೇವರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಸಚಿವ ಎಸ್‌.ಸುರೇಶ್‌ಕುಮಾರ್‌ ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು   

ಮಂಡ್ಯ: ಶಾಲಾ ಕಟ್ಟಡ ನಿರ್ಮಾಣ ವಿಚಾರದಲ್ಲಿ ಗೊಂದಲವಿದ್ದು ಅದನ್ನು ಸರಿಪಡಿಸಬೇಕು ಎಂದು ಮದ್ದೂರು ತಾಲ್ಲೂಕು ಗುರುದೇವರಹಳ್ಳಿ ಗ್ರಾಮಸ್ಥರೊಬ್ಬರು ವಾಟ್ಸ್ಆ್ಯಪ್‌ಮೂಲಕ ಸಲ್ಲಿಸಿದ್ದ ದೂರಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಸ್ಪಂದಿಸಿದ್ದಾರೆ.

ಗ್ರಾಮದಲ್ಲಿ ನೂತನ ಶಾಲಾ ಕಟ್ಟಡ ಕಟ್ಟಲು ಉದ್ದೇಶಿಸುವ ಜಾಗ ತಮಗೆ ಸೇರಬೇಕು ಎಂದು ಖಾಸಗಿ ವ್ಯಕ್ತಿಯೊಬ್ಬರು ಕೋರ್ಟ್‌ ಮೆಟ್ಟಿಲೇರಿದ್ದಾರೆ. ಹಳೆಯ ಶಾಲಾ ಕಟ್ಟಡ ಶಿಥಿಲಗೊಂಡಿದ್ದು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡದಲ್ಲಿ ತರಗತಿ ನಡೆಸಲಾಗುತ್ತಿದೆ. ಈ ಕುರಿತು ಗ್ರಾಮದ ಮುಖಂಡ ಪುಟ್ಟಸ್ವಾಮಿ ಸಚಿವ ಸುರೇಶ್‌ಕುಮಾರ್‌ ಅವರ ವಾಟ್ಸ್ಆ್ಯಪ್‌ ಸಂಖ್ಯೆ ಪಡೆದು ಸಮಸ್ಯೆ ಬಗ್ಗೆ ವಿವರಿಸಿ ದೂರು ಕೊಟ್ಟಿದ್ದರು.

ADVERTISEMENT

ದೂರಿಗೆ ಸ್ಪಂದಿಸಿದ ಸಚಿವ ಸುರೇಶ್‌ಕುಮಾರ್‌ ಶನಿವಾರ ಬೆಳಿಗ್ಗೆ ಶಾಲೆಗೆ ಭೇಟಿ ನೀಡಿ ಗ್ರಾಮಸ್ಥರು, ಶಿಕ್ಷಕರು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಶಾಲಾ ಮಕ್ಕಳೊಂದಿಗೆ ಕೆಲ ಹೊತ್ತು ಕಳೆದರು.

‘ಗುರುದೇವರಹಳ್ಳಿ ಶಾಲಾ ಕಟ್ಟಡದ ವಿಚಾರವಾಗಿ ಎಲ್ಲಾ ಮಾಹಿತಿ ಪಡೆದಿದ್ದೇನೆ. ಕೋರ್ಟ್‌ನಲ್ಲಿರುವ ಮೊಕದ್ದಮೆ ಕುರಿತು ಸರ್ಕಾರಿ ವಕೀಲರ ಜೊತೆ ಮಾತನಾಡಿ ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು. ಅಲ್ಲಿಯವರೆಗೂ ಶಾಲೆ ನಡೆಸಲು ತಾತ್ಕಾಲಿಕ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಹೇಳಿದರು.

ವಾಟ್ಸ್ಆ್ಯಪ್‌ ದೂರಿಗೆ ಸಚಿವರು ಸ್ಪಂದನೆ ನೀಡಿದ್ದಕ್ಕೆ ಗ್ರಾಮಸ್ಥ ಪುಟ್ಟಸ್ವಾಮಿ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.