ಮಂಡ್ಯ: ಮಹಿಳೆಯರ ಪರಿಸ್ಥಿತಿ ನರಕದಂತಿದೆ, ದುಡಿಯುವ ಸ್ಥಳದಲ್ಲಿಯೂ ಕಿರುಕುಳ ಹೆಚ್ಚಾಗಿ ಹೀನ ಕೃತ್ಯಗಳು ಅವರ ಮೇಲೆ ನಡೆಯುತ್ತಿವೆ ಎಂದು ಅಖಿಲ ಭಾರತ ಸಿಐಟಿಯು ಕಾರ್ಯದರ್ಶಿ ಎ.ಆರ್.ಸಿಂಧು ವಿಷಾದಿಸಿದರು.
ನಗರದ ಎಸ್.ಬಿ.ಸಮುದಾಯ ಭವನದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ಸಹಯೋಗದಲ್ಲಿ ಭಾನುವಾರ ಮುಕ್ತಾಯಗೊಂಡ ದುಡಿಯುವ ಮಹಿಳೆಯರ 9ನೇ ರಾಜ್ಯ ಸಮಾವೇಶದ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರ ಮೇಲಿನ ದೌರ್ಜನ್ಯಗಳು ಕರ್ನಾಟಕದಲ್ಲಿ ಎರಡು ಮೂರು ದಿನಗಳಿಂದ ಎಳೆಎಳೆಯಾಗಿ ಚರ್ಚೆಯಾಗುತ್ತಿವೆ. ಧರ್ಮಸ್ಥಳದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಮತ್ತೊಂದೆಡೆ ಪ್ರಜ್ವಲ್ ರೇವಣ್ಣ ಎಂಬ ರಾಜಕಾರಣಿಗೆ ಶಿಕ್ಷೆ ಆಗಿರುವ ಬಗ್ಗೆ ನೋಡುತ್ತಿದ್ದೇವೆ. ಇದು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಮಹಿಳೆಯರ ಮೇಲೆ ಅಪರಾಧ ಕೃತ್ಯಗಳು ನಡೆಯುತ್ತಿವೆ ಎಂದು ಹೇಳಿದರು.
ಮಥುರಾ, ಕಾಶಿಯಂತಹ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವಂತಹ ಪ್ರಕರಣಗಳು ನಡೆದಿರುವುದನ್ನು ನಾವು ನೋಡುತ್ತಿದ್ದೇವೆ. ಪುರುಷ ಪ್ರಧಾನ ಪಾಳೆಗಾರಿಕೆ ವ್ಯವಸ್ಥೆಯ ಒಳಗಡೆ ಮಹಿಳೆಯರನ್ನು ರಕ್ಷಣೆ ಮಾಡುವಂತಹ ವ್ಯವಸ್ಥೆಗಳೇ ದಬ್ಬಾಳಿಕೆ ಮಾಡುತ್ತಿವೆ. ಮಠಗಳು, ರಾಜಕಾರಣಿಗಳು ಇಂತಹ ಘಟನೆಗಳನ್ನು ತಡೆಯುತ್ತಿಲ್ಲ, ಬಿಜೆಪಿ ಮುಖಂಡ ಬ್ರಿಜ್‌ಭೂಷಣ್ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವಂತೆಯೇ, ಅವರನ್ನು ಬೆಂಬಲಿಸಿದ ಶಾಸಕರು ದೌರ್ಜನ್ಯ ನಡೆಸಿದ್ದಾರೆ. ಹೋರಾಟ ನಡೆಸಿದರೂ ನ್ಯಾಯ ಸಿಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ರಾಜ್ಯ ಘಟಕ ಅಧ್ಯಕ್ಷೆ ಎಸ್.ವರಲಕ್ಷ್ಮಿ ಮಾತನಾಡಿ, ಕೆಲಸದ ಸ್ಥಳಗಳಲ್ಲಿ ದುಡಿಯುವ ಮಹಿಳೆಯರಿಗೆ ಯಾವುದೇ ತಾರತಮ್ಯವಿಲ್ಲದೆ ಹೆರಿಗೆ ಭತ್ಯೆ ಜಾರಿ ಮಾಡಬೇಕು. ಗುತ್ತಿಗೆ, ಹೊರಗುತ್ತಿಗೆ, ಗೌರವ ಧನ, ಪ್ರೋತ್ಸಾಹ ಧನ, ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರಿಗೂ ಈ ಸೌಲಭ್ಯ ನೀಡಬೇಕು. ಹೆರಿಗೆ ಸೌಲಭ್ಯ ನೀಡದ ಗುತ್ತಿಗೆದಾರರ ಲೈಸೆನ್ಸ್ ರದ್ದುಗೊಳಿಸಿ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ತಂದಿರುವ ನಾಲ್ಕು ಸಂಹಿತೆಗಳನ್ನು ಕರ್ನಾಟಕ ಸರ್ಕಾರ ರದ್ದುಗೊಳಿಸಬೇಕು. ರಾತ್ರಿಪಾಳಿ ಕಡ್ಡಾಯ ಮಾಡಬಾರದು. ಕೆಲಸದ ಸಮಯವನ್ನು 8 ರಿಂದ 12 ಗಂಟೆಗೆ ಹೆಚ್ಚಿಸಬಾರದು, 13 ಅಪಾಯಕಾರಿ ಉದ್ದಿಮೆಗಳಲ್ಲಿ ಮಹಿಳೆಯರನ್ನು ದುಡಿಸಬಾರದು, ಪ್ಲಾಂಟೇಷನ್, ಗಾರ್ಮೆಂಟ್ಸ್ ಮುಂತಾದ ಉದ್ದಿಮೆಗಳ ಕನಿಷ್ಠ ವೇತನವನ್ನು ಪ್ರತ್ಯೇಕವಾಗಿ ಅಧಿಸೂಚನೆಯಲ್ಲಿ ತರದೆ ಇರುವುದು ಸರಿಯಲ್ಲ. ಎಲ್ಲ ಕಚೇರಿ ಮತ್ತು ವಲಯಗಳಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ಧ ಆಂತರಿಕ ದೂರು ಸಮಿತಿಗಳನ್ನು ರಚಿಸಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ಜಿ.ರಾಮಕೃಷ್ಣ, ಬಾಲಾಜಿ ರಾವ್, ಪ್ರಧಾನ ಕಾರ್ಯದರ್ಶಿ ಮಿನಾಕ್ಷಿ ಸುಂದರಂ, ಕಾರ್ಯದರ್ಶಿಗಳಾದ ಸಿ.ಕುಮಾರಿ, ಮಾಲಿನಿ ಮೇಸ್ತಾ, ಸಂಚಾಲಕಿ ಎಚ್.ಎಸ್.ಸುನಂದಾ, ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ್, ಸಿಪಿಎಂ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ಮುಖಂಡರಾದ ಸೌಮ್ಯಾ ಸಕಲೇಶಪುರ, ತುಳಸಿದೇವಿ, ಬಿ.ಹನುಮೇಶ್ ಭಾಗವಹಿಸಿದ್ದರು.
ದುಡಿಯುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನಿಲ್ಲಬೇಕು. ಕಡಿಮೆ ಕೂಲಿ ನೀಡಿ ಹೆಚ್ಚು ದುಡಿಮೆ ಮಾಡಿಸಿಕೊಳ್ಳುವುದು ಸರಿಯಲ್ಲ ಸರ್ಕಾರಗಳ ಇಚ್ಛಾಶಕ್ತಿ ಕೊರತೆಯಿಂದ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆದೇವಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜನವಾದಿ ಮಹಿಳಾ ಸಂಘಟನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.