
ಮಂಡ್ಯ: ಗ್ರಾಮೀಣ ಭಾಗದಲ್ಲಿರುವ ಕೆರೆಗಳ ಸಂರಕ್ಷಣೆ ಆಗಬೇಕು. ಜೊತೆಗೆ ಸ್ತ್ರೀಶಕ್ತಿ ಸಂಘಗಳು ಸ್ವಯಂ ಉದ್ಯೋಗವಾಗಿ ರೂಪಿಸಿಕೊಳ್ಳಲು ಮೀನು ಸಾಕಾಣಿಕೆಯಂತಹ ಕೆಲಸಗಳಿಗೆ ಮುಂದಾಗಿ ಸರ್ಕಾರದಿಂದ ಸಿಗುವ ಸೌಲಭ್ಯ ಬಳಸಿಕೊಳ್ಳಬೇಕು ಎಂದು ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಸಲಹೆ ನೀಡಿದರು.
ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ವತಿಯಿಂದ ಮತ್ಸ್ಯಸಂಜೀವಿನಿ ಯೋಜನೆಯಡಿ ತೂಬಿನಕೆರೆ ಗ್ರಾ.ಪಂ.ವ್ಯಾಪ್ತಿಯ ಮಹಿಳಾ ಸ್ವಸಹಾಯ ಗುಂಪುಗಳಿಗೆ ಗುತ್ತಿಗೆ ನೀಡಲಾದ ಕೆರೆಗೆ ಮೀನು ಮರಿ ಬಿಡುವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಕೆರೆಗಳನ್ನು ಸ್ತ್ರಿಶಕ್ತಿಗಳು ಎನ್ಆರ್‌ಎಲ್ಎಂ ಘಟಕ ರಚನೆ ಮಾಡಿಕೊಂಡು ಉದ್ಯೋಗ ಕೊಟ್ಟು ಸ್ವಯಂ ಉದ್ಯೋಗದಲ್ಲಿ ತಮ್ಮ ಜೀವನ ರೂಪಿಸಿಕೊಳ್ಳಬೇಕು. ಆ ಮೂಲಕ ಕೆರೆಗಳಲ್ಲಿ ಮೀನು ಮರಿ ಬಿಟ್ಟು ಸಾಕಬೇಕು. ಸಂಘಗಳ ಪ್ರತಿಯೊಬ್ಬರು ಎಲ್ಲರು ಇದು ನಮ್ಮ ಜವಾಬ್ದಾರಿ ಎಂದು ತಿಳಿದುಕೊಂಡು ಮೀನು ಸಾಕುವುದು ಮುಖ್ಯವಾಗಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ್‌ಮೂರ್ತಿ ಮಾತನಾಡಿ, ತಾಲ್ಲೂಕಿನ ವ್ಯಾಪ್ತಿಯೊಳಗೆ ಐದು ಸ್ತ್ರೀ ಸಂಘಗಳಿಗೆ ಪ್ರಾಯೋಗಿಕವಾಗಿ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಪ್ರಥಮವಾಗಿ ರಾಗಿಮುದ್ದನಹಳ್ಳಿ ಗ್ರಾಮದ ಕೆರೆಗೆ ಮೀನು ಮರಿ ಬಿಡಲು ಅವಕಾಶ ನೀಡಲಾಗಿದೆ. ಬಹಿರಂಗ ಹರಾಜುವಿಲ್ಲದೆ ಸ್ವಯಂ ಉದ್ಯೋಗ ಕಲ್ಪಿಸಲು ಉಚಿತವಾಗಿ ಅವಕಾಶ ಕಲ್ಪಿಸಲಾಗಿದೆ ಇದರ ಸದ್ಬಳಕೆ ಆಗಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಪುರುಷೋತ್ತಮ್, ಮೀನುಗಾರಿಕೆ ಇಲಾಖೆಯ ಲೋಕೇಶ್, ಪಿಡಿಒ ಕಲಾ, ಮುಖಂಡರಾದ ಮಂಜುನಾಥ್, ಶಿವು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.