ಮಂಡ್ಯ: ಬಂಡವಾಳಶಾಹಿಗಳಿಂದ ದುಡಿಯವ ಮಹಿಳೆಯರಿಗೆ ಭದ್ರತೆ ಸಿಗುತ್ತಿಲ್ಲ, ಕೆಲಸದ ಒತ್ತಡ ಹೆಚ್ಚು ಹಾಗೂ ಸಮಾನ ವೇತನ ನೀಡುತ್ತಿಲ್ಲ ಎಂದು ಸಿಐಟಿಯು ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯ ಜಿಲ್ಲಾ ಸಂಚಾಲಕಿ ಸಿ.ಕುಮಾರಿ ಆರೋಪಿಸಿದರು.
ನಗರದ ಸಿಐಟಿಯು ಜಿಲ್ಲಾ ಕಚೇರಿಯಲ್ಲಿ ಶನಿವಾರ ನಡೆದ ದುಡಿಯುವ ಮಹಿಳೆಯರ ನಾಲ್ಕನೇ ಜಿಲ್ಲಾ ಸಮಾವೇಶದಲ್ಲಿ ಅವರು ಮಾತನಾಡಿದರು.
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ಮಹಿಳೆಗೆ ಅಸಾಧ್ಯವಾಗಿದೆ. ಅತ್ಯಂತ ಅಪಾಯಕಾರಿ ಕೆಲಸ ಮಾಡಲು ಹೇಳುವ ಬಂಡವಾಳಶಾಹಿಗಳ ನಡೆ ಖಂಡನೀಯವಾಗಿದೆ. ಭವಿಷ್ಯ ನಿಧಿ ಸಿಗದೇ ಕೆಲಸ ನಿರ್ವಹಿಸುವುದು ಕಷ್ಟ ಎನ್ನುವುದನ್ನು ಸರ್ಕಾರಗಳು ಮರೆತಂತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳೆಯರು ದುಡಿಯುವ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ, ನಿಷೇಧಿಸುವಿಕೆ, ಕಾಯ್ದೆ 2013ರ ಪ್ರಕಾರ ಆಂತರಿಕ ದೂರು ಸಮಿತಿ ರಚಿಸಬೇಕು. ಮಹಿಳೆಯರ ಸುರಕ್ಷತೆಗೆ ಮೊದಲ ಆದ್ಯತೆಯನ್ನು ಸರ್ಕಾರಗಳು ನೀಡಬೇಕು ಎಂದು ಒತ್ತಾಯಿಸಿದರು.
ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು. ದುಡಿಯುವ ಸ್ಥಳದಲ್ಲಿ ಮೂರು ವರ್ಷದೊಳಗಿನ ಮಕ್ಕಳ ಆರೈಕೆ, ಪೋಷಣೆ, ಆಟಿಕೆಗಳು ಮತ್ತು ಮನರಂಜನೆಯ ವ್ಯವಸ್ಥೆಗಳೊಂದಿಗೆ ಸೂಕ್ತ ಸುವ್ಯವಸ್ಥಿತ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಬೇಕು. ದುಡಿಯುವ ಸ್ಥಳಗಳಲ್ಲಿ ಮಹಿಳೆಯರಿಗಾಗಿ ಶೌಚಾಲಯಗಳ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಮಹದೇವಮ್ಮ, ಮಂಜುಳಾರಾಜ್, ಜಯಲಕ್ಷ್ಮಮ್ಮ, ಶಶಿಕಲಾ, ಕುಪ್ಪಮ್ಮ, ನಾಗವೇಣಿ, ಕವಿತಾ, ಸೌಭಾಗ್ಯ, ಭಾರತಿ, ಮಂಗಳಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.