ADVERTISEMENT

ವೈಜ್ಞಾನಿಕ ಹಿನ್ನೆಲೆಯಲ್ಲಿ ಮಳೆ ಮೂಲ ಅರಸುತ್ತಾ: ನಿಸರ್ಗದ ರಾಯಭಾರಿ ಕಾದಂಬರಿ

ಎಂ.ಟೆಕ್‌ ಪದವೀಧರನ ಚೊಚ್ಚಲ ಕೃತಿ ‘ನಿಸರ್ಗದ ರಾಯಭಾರಿ’

ಎಂ.ಎನ್.ಯೋಗೇಶ್‌
Published 19 ಜನವರಿ 2021, 16:32 IST
Last Updated 19 ಜನವರಿ 2021, 16:32 IST
ಎಚ್‌.ಸಿ.ಶ್ರೇಯಸ್‌
ಎಚ್‌.ಸಿ.ಶ್ರೇಯಸ್‌   

ಮಂಡ್ಯ: ಮಳೆಯ ಬಗ್ಗೆ ಬಹಳಷ್ಟು ಕವಿಗಳು ಕವಿತೆ ಕಟ್ಟಿದ್ದಾರೆ, ಮಳೆಯ ಗೀತೆಗಳಿಗೆ, ಚಲನಚಿತ್ರಗಳಿಗೆ ಕೊರತೆ ಇಲ್ಲ. ಆದರೆ ಮಳೆಯನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಕಂಡು ಕಾವ್ಯ ಕಟ್ಟಿದವರು ಕಡಿಮೆ. ಆದರೆ ಮಂಡ್ಯದ ಎಂ.ಟೆಕ್‌ ಪದವೀಧರರೊಬ್ಬರು ವಿಜ್ಞಾನದ ಹಿನ್ನೆಲೆಯಲ್ಲಿ ಮಳೆಯ ಜಾಡು ಹಿಡಿಯಹೊರಟು ಯಶಸ್ವಿಯಾಗಿದ್ದು ‘ನಿಸರ್ಗದ ರಾಯಭಾರಿ’ ಕಾದಂಬರಿ ರಚಿಸಿದ್ದಾರೆ.

ಬೆಂಗಳೂರಿನ ಗೋಪಾಲನ್‌ ಎಂಜಿನಿಯರಿಂಗ್‌ ಮತ್ತು ಮ್ಯಾನೇಜ್‌ಮೆಂಟ್‌ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಎಚ್‌.ಸಿ.ಶ್ರೇಯಸ್‌ ಕನ್ನಡ ಭಾಷೆಯ ಮೇಲೆ ಅಪಾರ ಪ್ರೀತಿಯುಳ್ಳವರಾಗಿದ್ದು ತಮ್ಮ ಚೊಚ್ಚಲ ಕೃತಿಯಲ್ಲೇ ಓದುಗರ ಗಮನ ಸೆಳೆದಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ ‘ನಿಸರ್ಗದ ರಾಯಭಾರಿ’ ಕೃತಿ ‘ನಿಸರ್ಗದ ಜಾಡನ್ನು ಅರಸುತ್ತಾ’ ಎಂಬ ಸಾಲಿನೊಂದಿಗೆ ಓದುಗರನ್ನು ಸೆಳೆದುಕೊಳ್ಳುತ್ತದೆ.

ಸಾಮಾನ್ಯ ವ್ಯಕ್ತಿಗೆ ಮಳೆ ಒಂದು ರೀತಿಯ ನಿಗೂಢ. ಮಳೆಯ ವೈಜ್ಞಾನಿಕ ಕಾರಣಗಳು ವಿಜ್ಞಾನಿ, ವಿಜ್ಞಾನ ವಿದ್ಯಾರ್ಥಿಗಷ್ಟೇ ತಿಳಿಯುತ್ತವೆ. ಆದರೆ ಈ ಕಾದಂಬರಿಯಲ್ಲಿ ಸಾಮಾನ್ಯ ವ್ಯಕ್ತಿಗೂ ಮಳೆಯ ವೈಜ್ಞಾನಿಕ ಹಿನ್ನೆಲೆಗಳು ಅತ್ಯಂತ ಸಹಜವಾಗಿ, ಸರಳವಾಗಿ, ಕತೆಯ ರೂಪದಲ್ಲಿ, ಮನರಂಜೆನೆಯ ರೂಪಕವಾಗಿ ಅರ್ಥವಾಗುತ್ತವೆ.

ADVERTISEMENT

ಸಾಹಿತ್ಯ ಓದು, ಪಠ್ಯ ಓದು ಎರಡನ್ನೂ ಬೊಗಸೆಯಲ್ಲಿಡಿದು ಶ್ರೇಯಸ್‌ ಕಾದಂಬರಿ ರೂಪ ಕೊಟ್ಟಿದ್ದಾರೆ. ಮಳೆಯ ಬಗ್ಗೆ ಕುತೂಹಲ ಮೂಡಿಸಿಕೊಂಡ ವ್ಯಕ್ತಿಯೊಬ್ಬ ಪಶ್ಚಿಮಘಟ್ಟಕ್ಕೆ ತೆರಳಿ ಮಳೆಯನ್ನು ಇನ್ನಷ್ಟು ಅರಿಯುವ ಯತ್ನವೇ ‘ನಿಸರ್ಗದ ರಾಯಭಾರಿ’ ಕಾದಂಬರಿ ರೂಪಗೊಂಡಿದೆ. ಲೇಖಕನೇ ಕತೆಯ ನಿರೂಪಕನಾಗಿ ಮಳೆಯ ತಿರುಳನ್ನು ಅನಾವರಣಗೊಳಿಸಿದ್ದಾರೆ.

ಪ್ರತಿ ಪುಟದಲ್ಲೂ ಮಳೆಯ ಬಗ್ಗೆ ಕುತೂಹಲಗಳು ಮೂಡುತ್ತವೆ. ಘಟ್ಟದ ಸೌಂದರ್ಯ ಬಯಲು ಸೀಮೆ, ‘ಉದ್ಯಾನಗರಿ ‌’ ಎಂಬ ಗರಿಯೊಂದಿಗೆ ಬೆಂಗಾಡು ರೂಪ ಪಡೆಯುತ್ತಿರುವ ಬೆಂಗಳೂರಿನಲ್ಲಿ ಯಾವ ಪ್ರಮಾಣದಲ್ಲಿ ಮಳೆಯಾಗುತ್ತದೆ. ಮಳೆಯ ಪ್ರಮಾಣದ ವ್ಯತ್ಯಾಸಕ್ಕೆ ಕಾರಣಗಳೇನು ಎಂಬ ಪ್ರಶ್ನೆಗಳಿಗೆ ಕಾದಂಬರಿಯಲ್ಲಿ ಉತ್ತರ ದೊರೆಯುತ್ತದೆ. ಅದಕ್ಕೆ ಸಂಬಂಧಪಟ್ಟ ಅಂಕಿ–ಅಂಶಗಳೂ ಇಲ್ಲಿವೆ. ರೇಖಾಚಿತ್ರಗಳ ಮೂಲಕ ಮಳೆಯ ವಿವರ ನೀಡಿದ್ದಾರೆ.

ಮಳೆಯ ಭಾಷ್ಪೀಕರಣ, ರಾಸಾಯನಿಕ ಕ್ರಿಯೆ, ಪ್ರವಾಹ, ಜಲಪಾತ ಸೃಷ್ಟಿ, ಭೂಕುಸಿತ, ನೀರಿನ ಸಂಗ್ರಹ, ಜಲಾನಯನ ಪ್ರದೇಶ, ಒತ್ತಡ, ಭೂಪರಿವರ್ತನೆ ಮುಂತಾದ ಅಂಶಗಳನ್ನು ಸುಲಭವಾಗಿ ವಿವರಿಸಿದ್ದಾರೆ. ಮಳೆಯ ಪ್ರಮಾಣ ಅಳೆಯುವ ಬಗ್ಗೆ ಕೆಲವರಿಗೆ ಕುತೂಹಲವಿರುತ್ತದೆ. ಅದರ ಸುಲಭ ವಿಧಾನವನ್ನು ಶ್ರೇಯಸ್‌ ಇಲ್ಲಿ ಸೊಗಸಾಗಿ ವಿವರಿಸಿದ್ದಾರೆ. ಮನೆಯ ಜಾಗ, ತಾರಸಿಯ ಮೇಲೆ ಬಿದ್ದ ಮಳೆಯ ಪ್ರಮಾಣವನ್ನು ಸುಲಭ ವಿಧಾನದ ಮೂಲಕ ಲೆಕ್ಕಾಚಾರ ಹಾಕಿದ್ದಾರೆ.

ಓದುಗರಿಗೆ ಪಶ್ಚಿಮ ಘಟ್ಟವನ್ನು ಅನುಭವಿಸಿದ ಭಾವ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೇಯಸ್‌ ಬಳಸಿರುವ ಭಾಷೆಯಲ್ಲಿ ಆಳವಾದ ಕನ್ನಡ ಓದು ಮತ್ತು ಪ್ರೀತಿ ಅನಾವರಣಗೊಂಡಿದೆ. ನಿವೃತ್ತ ಬ್ಯಾಂಕ್‌ ವ್ಯವಸ್ಥಾಪಕ ಚಂದ್ರಹಾಸ್‌ ಹಾಗೂ ಯಶೋದಾ ದಂಪತಿಯ ಪುತ್ರರಾಗಿರುವ ಶ್ರೇಯಸ್‌ ತಮ್ಮ ಚೊಚ್ಚಲ ಕೃತಿಯಲ್ಲೇ ಪ್ರಕೃತಿಯ ಸೊಗಸಿಗೆ ಬಣ್ಣ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಜಲವಿಜ್ಞಾನದ ಬಗ್ಗೆ ಮೊದಲಿನಿಂದಲೂ ಕುತೂಹಲವಿತ್ತು. ಪಠ್ಯದ ಮಾದರಿ ಬಿಟ್ಟು ಕಾದಂಬರಿ ರೂಪ ರೂಪದಲ್ಲಿ ಬರೆಯಲೆತ್ನಿಸಿದ್ದೇನೆ. ಬಹುಪಾಲು ವಿಚಾರ ನೈಜತೆಯಿಂದ ಕೂಡಿವೆ.

–ಎಚ್‌.ಸಿ.ಶ್ರೇಯಸ್‌, ಲೇಖಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.