ADVERTISEMENT

ದೇಶದಲ್ಲಿವೆ 2,600 ಘೇಂಡಾಮೃಗ

ಚಾಮರಾಜೇಂದ್ರ ಮೃಗಾಲಯದಲ್ಲಿ ವಿಶ್ವ ಘೇಂಡಾಮೃಗ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 19:48 IST
Last Updated 22 ಸೆಪ್ಟೆಂಬರ್ 2019, 19:48 IST
   

ಮೈಸೂರು: ಚಾಮರಾಜೇಂದ್ರ ಮೃಗಾಲಯದಲ್ಲಿ ಯೂತ್‌ ಕ್ಲಬ್‌ ಸದಸ್ಯರು ವಿಶ್ವ ಘೇಂಡಾಮೃಗ ದಿನವನ್ನು ಭಾನುವಾರ ಆಚರಿಸಿದರು.

ವಿವಿಧ ಶಾಲೆಗಳ ಆಸಕ್ತ 62 ವಿದ್ಯಾರ್ಥಿಗಳು ಯೂತ್‌ ಕ್ಲಬ್‌ನ ಸದಸ್ಯರಾಗಿದ್ದಾರೆ. ಅವರಿಗೆ ಹಾಗೂ ಪ್ರವಾಸಿಗರಿಗೆ ಘೇಂಡಾಮೃಗಗಳ ಕುರಿತು ‌ಮೃಗಾಲಯದ ಜೀವಶಾಸ್ತ್ರಜ್ಞೆ ಸ್ನೇಹಾ ವಿವರಿಸಿದರು.

ಘೇಂಡಾಮೃಗಗಳು ಸಸ್ಯಾಹಾರಿ ಪ್ರಾಣಿಗಳು. ಬೃಹತ್‌ ದೇಹ, ದಪ್ಪ ಕಾಲುಗಳು ಹಾಗೂ ವಿಶಿಷ್ಟ ಕೊಂಬುಗಳನ್ನು ಹೊಂದಿರುತ್ತವೆ. ಬಿಳಿ ಘೇಂಡಾಮೃಗ, ಕಪ್ಪು ಘೇಂಡಾಮೃಗ, ಒಂದು ಕೊಂಬಿನ ಘೇಂಡಾಮೃಗ, ಸುಮಾತ್ರ ಘೇಂಡಾಮೃಗ ಮತ್ತು ಜಾವನ್‌ ಘೇಂಡಾಮೃಗಗಳೆಂಬ ಪ್ರಭೇದಗಳಿವೆ. ಸುಮಾತ್ರ ಹಾಗೂ ಜಾವನ್‌ ಘೇಂಡಾಮೃಗಗಳು ಅಳಿವಿನಂಚಿನಲ್ಲಿವೆ. ಜಗತ್ತಿನಲ್ಲಿ 30 ಸಾವಿರ ಘೇಂಡಾಮೃಗಗಳಿದ್ದು, ಭಾರತದಲ್ಲಿ ಅಂದಾಜು 2,600 ಇವೆ. ಅಸ್ಸಾಂ ರಾಜ್ಯದಲ್ಲಿ ಅತಿಹೆಚ್ಚು ಘೇಂಡಾಮೃಗಗಳಿವೆ ಎಂದು ಸ್ನೇಹಾ ತಿಳಿಸಿದರು.

ADVERTISEMENT

ಮೈಸೂರಿನ ಮೃಗಾಲಯದಲ್ಲಿ ಭಾರತೀಯ ಘೇಂಡಾಮೃಗ ಹಾಗೂ ಬಿಳಿ ಘೇಂಡಾಮೃಗಗಳಿವೆ. ಆವಾಸಸ್ಥಾನ ನಾಶ ಹಾಗೂ ಕೊಂಬುಗಳಿಗಾಗಿ ಬೇಟೆಯಾಡುವುದು ಇವುಗಳ ಸಂಖ್ಯೆ ಕಡಿಮೆ ಆಗಲು ಪ್ರಮುಖ ಕಾರಣ ಎಂದರು.

ಘೇಂಡಾಮೃಗಗಳ ಸಮೃದ್ಧೀಕರಣ ಹಾಗೂ ಆಹಾರ ನೀಡುವ ಪ್ರಕ್ರಿಯೆಯನ್ನು ಯೂತ್‌ ಕ್ಲಬ್‌ ಸದಸ್ಯರು ಹಾಗೂ ಪ್ರವಾಸಿಗರು ವೀಕ್ಷಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ರಕ್ಷಿತ್‌, ಸ್ವಯಂ ಸೇವಕ ಪ್ರಣವ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.