ADVERTISEMENT

ಮಂದಿರ ನಿರ್ಮಾಣಕ್ಕೆ ಮನವೊಲಿಕೆಯೇ ಪರಿಹಾರ: ಹಿರಿಯ ವಕೀಲ ಕೆ.ಎನ್‌.ಭಟ್‌

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 18:35 IST
Last Updated 7 ಡಿಸೆಂಬರ್ 2018, 18:35 IST

ಬೆಂಗಳೂರು: ‘ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆಜ್ಞೆ ಹೊರಡಿಸುತ್ತದೆ. ಆದರೆ, ಅದು ಒಂದು ಕಾನೂನು ಅಷ್ಟೆ. ಅದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ’ ಎಂದು ಹಿರಿಯ ವಕೀಲ ಕೆ.ಎನ್‌.ಭಟ್‌ ಹೇಳಿದರು.

ಅಡ್ವೋಕೇಟ್ಸ್ ಫಾರ್ ಡೆಮಾಕ್ರಸಿ ಶುಕ್ರವಾರ ಆಯೋಜಿಸಿದ್ದ ‘ರಾಮಜನ್ಮಭೂಮಿ ವಾಸ್ತವ ಮತ್ತು ವಿಧಿ ನಿಬಂಧನೆ’ಗಳ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮೊದಲು ಆಜ್ಞೆಯು ಒಳಗೆ–ಹೊರಗೆ ಏನು ಹೇಳುತ್ತದೆ ಎಂಬುದನ್ನು ಅರಿಯಬೇಕು. ನಮಗೆ ಹೊಟ್ಟೆ‌ನೋವು ಬಂದಾಗ ಆಸ್ಪತ್ರೆಯಲ್ಲಿ ಚುಚ್ಚುಮದ್ದು ಪಡೆಯುತ್ತೇವೆ. ಚುಚ್ಚುಮದ್ದಿಗೆ ಹೊಟ್ಟೆನೋವಿನ ಬಗ್ಗೆ ಗೊತ್ತಿರುವುದಿಲ್ಲ. ಅದೇ ರೀತಿ ಈ ಆಜ್ಞೆ ಕೂಡ. ‌ಅದನ್ನು ಅರ್ಥ ಮಾಡಿಕೊಳ್ಳಲು ಯಾರೂ ಮುಂದಾಗುತ್ತಿಲ್ಲ’ ಎಂದು ವಿಶ್ಲೇಷಿಸಿದರು.

ADVERTISEMENT

‘ಮಂದಿರ ನಿರ್ಮಾಣಕ್ಕೆ ಕೂಡಲೇ ಪರಿಹಾರ ಕಂಡುಕೊಳ್ಳಲು ಆಗುವುದಿಲ್ಲ. ಈಗಿರುವ ಹಿರಿಯ ನ್ಯಾಯಮೂರ್ತಿಗಳು ನಿವೃತ್ತಿ ಹೊಂದಿದರೆ, ಈ ವಿವಾದ ಇನ್ನೊಂದು ಬೆಂಚಿಗೆ ಹೋಗುತ್ತದೆ. ಹೊಸಬರು ಮತ್ತೆ ಇದರ ಸಾಧಕ–ಬಾಧಕಗಳನ್ನು ಪರಿಶೀಲನೆ ಮಾಡಿ ವಿಚಾರಣೆ ನಡೆಸುತ್ತಾರೆ’ ಎಂದು ಹೇಳಿದರು.

‘ಅಡ್ಡದಾರಿಗಳಿಂದ ರಾಮಮಂದಿರ ನಿರ್ಮಾಣಕ್ಕೆ ಪ್ರಯತ್ನಿಸುವುದು ಸಾಧ್ಯವಾಗದ ಕೆಲಸ. ಆದೇಶ ಬಂದ ಬಳಿಕ ಮುಸ್ಲಿಮರು ಮಂದಿರ ನಿರ್ಮಾಣಕ್ಕೆ ಅಡ್ಡಿ ಉಂಟುಮಾಡುತ್ತಾರೆ. ಹೀಗಾಗಿ ಇದಕ್ಕೆ ತಾರ್ಕಿಕ ಅಂತ್ಯ ನೀಡಲು ಸಾಧ್ಯವಿಲ್ಲ. ಅದಕ್ಕೆ ಸೂಕ್ತ ಪರಿಹಾರ ಎಂದರೆ, ನ್ಯಾಯಾಲಯದ ಅಂಗಳಕ್ಕೆ ಹೋದ ಮುಸ್ಲಿಂ ಮುಖಂಡರನ್ನು ಪ್ರಧಾನಿ ನರೇಂದ್ರ ಮೋದಿವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಒಮ್ಮತದಿಂದ ಮಂದಿರ ಕಟ್ಟುವುದರ ಬಗ್ಗೆ ಚಿಂತನೆ ನಡೆಸಬೇಕು’ ಎಂದು ಅಭಿಪ್ರಾಯ‍ಪಟ್ಟರು.

‘ವಿವಾದವನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುವುದಾದರೆ, ಅದರ ಕುರಿತು ಎರಡೂ ಧರ್ಮಗಳೊಂದಿಗೆ ಸಭೆ ನಡೆಸಲಿ. ಆಗ ಅವರು ಏನು ಹೇಳುತ್ತಾರೆ ಎಂಬುದನ್ನು ಆಲಿಸಿ ನಿರ್ಧಾರ ಕೈಗೊಳ್ಳಬಹುದು. ದೇಶದಲ್ಲಿ ಹಲವರು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಕ್ರಮ ಕೈಗೊಳ್ಳಬೇಕು ಎಂಬ ಪಟ್ಟು ಹಿಡಿದಿರುವುದರಿಂದ ಏನೂ ಪ್ರಯೋಜನವಿಲ್ಲ’ ಎಂದು ಹೇಳಿದರು.

*ರಾಮ ಐತಿಹಾಸಿಕ ಪುರುಷ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ಈ ಸಾಕ್ಷ್ಯಗಳನ್ನು ಸೂಕ್ಷ್ಮವಾಗಿ ಪರಿಗಣಿಸಬೇಕು. ಇವುಗಳನ್ನು ಪ್ರಸ್ತುತಪಡಿಸಿ, ಮನದಟ್ಟು ಮಾಡಿಸಬೇಕಿದೆ. ಒಗ್ಗಟ್ಟಿನ ಹೋರಾಟ ಅನಿವಾರ್ಯ

-ಅಶೋಕ್ ಬಿ. ಹಿಂಚಿಗೇರಿ, ನಿವೃತ್ತ ನ್ಯಾಯಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.