ADVERTISEMENT

ಆತ್ಮ ವಿಶ್ವಾಸ ಗಟ್ಟಿಯಾಗಿದ್ದರೆ ಗೆಲುವು ಸಾಧ್ಯ

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 6:10 IST
Last Updated 23 ಜನವರಿ 2012, 6:10 IST

ಸರಗೂರು: ಆತ್ಮ ವಿಶ್ವಾಸ ಇಲ್ಲದಿದ್ದರೆ ಗೆಲುವು ಸಾಧ್ಯವಿಲ್ಲ. ವಿವೇಕ ಇಲ್ಲದವನು ಪಶುವಿಗೆ ಸಮಾನ. ವಿದ್ಯಾರ್ಥಿಗಳು ವಿವೇಕ ಹಾಗೂ ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳಲು ಸ್ವಾಮಿ ವಿವೇಕಾನಂದರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮೈಸೂರು ರಾಮಕೃಷ್ಣ ಆಶ್ರಮದ ಸ್ವಾಮಿ ವೀರೇಶಾನಂದಾಜಿ ತಿಳಿಸಿದರು.

ಸರಗೂರಿನಲ್ಲಿ ಶನಿವಾರ ನಡೆದ ವಿವೇಕ ಸ್ಕೂಲ್ ಆಫ್ ಎಕ್ಸ್‌ಲೆನ್ಸ್‌ನ ವಾರ್ಷಿಕೋತ್ಸವ `ಕಲರವ -2012~ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇಂದು ಉನ್ನತ ಹುದ್ದೆಗೆ ಬೆಳೆದವರು ವಿದ್ಯಾರ್ಥಿಗಳಿದ್ದಾಗ ಯಾವುದೇ ಸಾಧನೆ ಮಾಡಿಲ್ಲ. ವಿದ್ಯಾರ್ಥಿಗಳು ತಮ್ಮಲ್ಲಿ ಕೀಳರಿಮೆ ಮೂಡಿಸಿಕೊಳ್ಳದೇ ಶಿಕ್ಷಣದಲ್ಲಿ ಸಾಧನೆ ಮಾಡಿದರೆ ಭವಿಷ್ಯ ಉತ್ತಮವಾಗಿರುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಯೂತ್ ಮೂವ್‌ಮೆಂಟ್ ಅಧ್ಯಕ್ಷ ಡಾ. ಎಂ.ಆರ್. ಸೀತಾರಾಮ್ ಮಾತನಾಡಿ, ಶೈಕ್ಷಣಿಕ ಕ್ರಾಂತಿಗಾಗಿ ಸಮುದಾಯ ಸಹಭಾಗಿತ್ವ ಬಹಳ ಮುಖ್ಯ. ಮುಂದಿನ ದಿನದಲ್ಲಿ ಎಲ್ಲಾ ಪಠ್ಯಕ್ರಮಗಳು ಬದಲಾವಣೆ ಆಗುವುದರಿಂದ ಮಕ್ಕಳ ಕಲಿಕೆಯಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರ ಬಹಳ ಮುಖ್ಯ ಎಂದು ಹೇಳಿದರು.

ಇದೇ ವೇಳೆ ಶಾಲಾ ಮಕ್ಕಳು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯ ಕ್ರಮ  ನಡೆಸಿಕೊಟ್ಟರು. ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥಾಪಕ ಡಾ. ಆರ್. ಬಾಲಸುಬ್ರಹ್ಮಣ್ಯಂ, ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಎ. ಬಾಲಸುಬ್ರಹ್ಮಣ್ಯ, ಡಾ. ರಾಜೇಂದ್ರಪ್ರಸಾದ್, ವಿವೇಕ ಸ್ಕೂಲ್ ಆಫ್ ಎಕ್ಸಲೆನ್ಸ್‌ನ ಆಡಳಿತಾಧಿಕಾರಿ ಪ್ರಕಾಶ್, ಉಪ ಪ್ರಾಂಶುಪಾಲ ಅನಿತಾ, ಡಾ.ಬಿಂದು ಬಾಲಸುಬ್ರಹ್ಮಣ್ಯಂ, ಡಾ. ಪದ್ಮಜಾ, ಡಾ. ಶ್ರೀದೇವಿ, ಮಾಲತಿ, ಮೈಸೂರು ರಂಗರಾವ್ ಸನ್ಸ್‌ನ ಚೇರ‌್ಮನ್ ಆರ್.ಗುರು, ಎಸ್.ಎಂ. ಶ್ರೀನಿವಾಸ್, ವಿವೇಕ ಸ್ಕೂಲ್ ಆಫ್ ಎಕ್ಸಲೆನ್ಸ್‌ನ ಶಿಕ್ಷಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.