ಮೈಸೂರು: `ವಿದ್ಯುತ್ ದೀಪಾಲಂಕಾರ ಕಡಿಮೆ ಮಾಡಿ~.. `ಯುವ ದಸರಾ ಆಚರಣೆ ಕೈಬಿಡುವುದು ಒಳಿತು~.. `ಚಲನಚಿತ್ರೋತ್ಸವ ಬೇಡ~.. `ದಸರಾ ಸರಳವಾಗಿರಲಿ, ಆದರೆ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಲಿ~.. `ಪಾಲಿಕೆ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಬೇಗ ಪೂರ್ಣ ಗೊಳಿಸಬೇಕು~..
-ಇವು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ದಸರಾ ಪೂರ್ವ ಸಿದ್ಧತಾ ಸಭೆಯಲ್ಲಿ ಕೇಳಿ ಬಂದ ಅಭಿಪ್ರಾಯಗಳು.
`ಯುವ ದಸರಾ, ಮನರಂಜನಾ ದಸರಾಗಳನ್ನು ಈ ಬಾರಿ ಕೈಬಿಡಬೇಕು `ಎಂದು ಶಾಸಕ ಸಿದ್ದರಾಜು ಸಲಹೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್, `ಈ ಬಾರಿ ಯುವ ದಸರಾವನ್ನು ಕೈಬಿಡಲಾಗಿದೆ~ ಎಂದು ಅಧಿಕೃತವಾಗಿ ಘೋಷಿಸಿದರು.
ಕಳೆದ ಎರಡು ವರ್ಷಗಳಲ್ಲಿ ಅತೀ ಹೆಚ್ಚು ಜನರನ್ನು ಸೆಳೆದದ್ದೇ ಯುವ ದಸರಾ. ಮಹಾರಾಜ ಕಾಲೇಜು ಮೈದಾನ, ಗಂಗೋತ್ರಿಯ ಬಯಲು ರಂಗಮಂದಿರ ದಲ್ಲಿ ನಡೆದ ಯುವ ದಸರಾ ಕಾರ್ಯಕ್ರಮ ಗಳಲ್ಲಿ ಯುವ ಸಮೂಹ ಕುಣಿದು ಕುಪ್ಪಳಿಸಿದೆ. ಹಾಗಾಗಿ ಯುವ ದಸರಾ ಇರಲಿ ಎಂಬ ಮಾತುಗಳೂ ಕೇಳಿ ಬಂದವು. ಇದಕ್ಕೆ ಪ್ರತಿಕ್ರಿಯಿ ಸಿದ ರಾಮದಾಸ್, `ಸ್ವಾಮಿ ವಿವೇಕಾನಂದ 150ನೇ ಜನ್ಮ ಜಯಂತಿ ಹಿನ್ನೆಲೆಯಲ್ಲಿ ಅಧ್ಯಾತ್ಮಿಕದತ್ತ ಯುವಶಕ್ತಿಯನ್ನು ಸೆಳೆಯಲು ಬೇರೆ ಬೇರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆದ್ದರಿಂದ ಈ ಬಾರಿ ಯುವ ದಸರಾ ಕಾರ್ಯಕ್ರಮ ರದ್ದುಗೊಳಿಸಲು ತೀರ್ಮಾನಿಸಲಾಗಿದೆ~ ಎಂದು ತಿಳಿಸಿದರು.
ಸಭೆಯಲ್ಲಿ ಬರದ ಬಗ್ಗೆ ಆಗಾಗ ಚರ್ಚೆ ನಡೆಯಿತು. ಶಾಸಕ ತನ್ವೀರ್ ಸೇಠ್ ಮಾತನಾಡಿ, `ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರ ಇರುವುದು ನಿಜ. ಹಾಗಂತ ದಸರಾ ಹಬ್ಬವನ್ನು ಸರಳವಾಗಿ ಆಚರಿಸಿದರೆ ಮೈಸೂರಿಗೆ ಬರ ಬರುತ್ತದೆ ಅಷ್ಟೆ~ ಎಂದಾಗ ಸಭೆಯಲ್ಲಿ ನಗುವಿನ ಅಲೆ.
ಮನರಂಜನಾ ದಸರಾ ಬೇಕಾ?
ಯುವ ದಸರಾ, ಮನ ರಂಜನಾ ದಸರಾ ಅವಶ್ಯಕತೆ ಇದೆಯಾ? ತೀವ್ರ ವಿದ್ಯುತ್ ಕೊರತೆ ಇರುವುದರಿಂದ ದೀಪಾಲಂಕಾರ ಕಡಿಮೆ ಮಾಡಬೇಕು.
ಸಾಧ್ಯವಾದರೆ, ಕಾರ್ಪೋ ರೇಟ್ ಸಂಸ್ಥೆಯ ಸಹಭಾಗಿತ್ವ ಜೊತೆಗೆ ಸ್ಥಳೀಯ ಕೈಗಾರಿಕಾ ಮಾಲೀಕರಿಂದಲೂ ಸಹಭಾಗಿತ್ವ ಪಡೆಯಬೇಕು.
ಪಾಲಿಕೆ ಕೈಗೆತ್ತಿಕೊಂಡಿರುವ ರಸ್ತೆ ದುರಸ್ತಿ, ರಾಜಮಾರ್ಗ ಕಾಮಗಾರಿಗಳನ್ನು ದಸರೆಗೂ ಮುನ್ನವೇ ಪೂರ್ಣಗೊಳಿಸಬೇಕು. ಉಪ ಸಮಿತಿಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು.
-ಸಿದ್ದರಾಜು, ವಿಧಾನ ಪರಿಷತ್ ಸದಸ್ಯ
ಖರ್ಚು ಕಡಿಮೆ ಮಾಡಿ
ದಸರೆಗೆ ಸಂಬಂಧಿಸಿದ ಖರ್ಚು, ವೆಚ್ಚಗಳನ್ನು ಕಡಿಮೆ ಮಾಡಿ. ಆದರೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಡಿತ ಗೊಳಿಸಬಾರದು. ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ವರ್ಷವಿಡೀ ಪ್ರದರ್ಶನಕ್ಕೆ ಅವಕಾಶ ನೀಡಬೇಕು. ದಸರಾ ಸರಳ ಎನ್ನುವ ಬದಲು ಸಾಂಪ್ರದಾಯಿಕವಾಗಿರಲಿ.
-ಬಿ.ಪಿ.ಮಂಜುನಾಥ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ
ಚಲನಚಿತ್ರೋತ್ಸವ ಬೇಡ
20 ವರ್ಷಗಳ ಹಿಂದೆ ದಸರಾ ಚಲನಚಿತ್ರೋತ್ಸವಕ್ಕೆ ಸಾಕಷ್ಟು ಬೇಡಿಕೆ ಇತ್ತು. ಆದರೀಗ ವಿದ್ಯುನ್ಮಾನ ಮಾಧ್ಯಮದ ಬದಲಾವಣೆ ಹಾಗೂ ಡಿಶ್ ಟಿ.ವಿಗಳಿಂದಾಗಿ ಮೊದಲಿನಷ್ಟು ಬೇಡಿಕೆ ಇಲ್ಲ. ಆದ್ದರಿಂದ ಚಲನಚಿತ್ರೋತ್ಸವ ಕೈಬಿಡುವುದು ಒಳಿತು. ಆಯಾ ಜಿಲ್ಲೆಯ ಧಾರ್ಮಿಕ ಸಂಪ್ರದಾಯ, ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಇದ್ದರೆ ಹೆಚ್ಚು ಸೂಕ್ತ.
-ಎ.ಆರ್.ಪ್ರಕಾಶ್, ವಾರ್ತಾ ಇಲಾಖೆ ಉಪನಿರ್ದೇಶಕ
ಕೃಷಿ, ಸಂಶೋಧನೆ ಸ್ತಬ್ಧಚಿತ್ರ ಇರಲಿ
ಎರಡು ವರ್ಷಗಳಿಂದ ರಾಜ್ಯದಲ್ಲಿ ಬರ ಆವರಿಸಿದೆ. ಆದ್ದರಿಂದ ಬರ ಎದುರಿಸುವಲ್ಲಿ ಆಯಾ ಜಿಲ್ಲೆಯ ರೈತರು ಕಂಡುಕೊಂಡ ಪರಿಹಾರ, ಕೃಷಿ ವಿವಿಗಳು, ಇತರೆ ಸಂಸ್ಥೆಗಳು ಕೈಗೊಂಡಿರುವ ಸಂಶೋಧನೆ ಗಳ ಬಗ್ಗೆ ಬೆಳಕು ಚೆಲ್ಲುವ ಸ್ತಬ್ಧಚಿತ್ರ ಪ್ರದರ್ಶಿಸಬೇಕು. ಇಲ್ಲವಾದರೆ, ಜಾಗತಿಕ ಬಂಡವಾಳ ಹೂಡಿಕೆಯಿಂದ (ಜಿಮ್) ಆಯಾ ಜಿಲ್ಲೆಗಳಲ್ಲಿ ಆಗಿರುವ ಪ್ರಗತಿ, ಲಭ್ಯವಾದ ಉದ್ಯೋಗಗಳ ಪರಿಕಲ್ಪನೆಯಲ್ಲಿ ಸ್ತಬ್ಧಚಿತ್ರ ಮಾಡಬಹುದು. ದಸರಾ ವೀಕ್ಷಿಸಲು ಆಗಮಿಸುವ ಪ್ರವಾಸಿಗರಿಗೆ ಸರ್ಕ್ಯೂಟ್ ಮಾದರಿ ಪ್ರವಾಸ, ತೆರೆದ ವಾಹನಗಳಲ್ಲಿ ಸಂಚರಿಸಲು ಅನುಕೂಲ ಕಲ್ಪಿಸಬೇಕು.
ಖಾಸಗಿ ಜಾಗಗಳಲ್ಲಿ ಕಡಿಮೆ ಶುಲ್ಕ ಪಡೆದು ವಾಹನ ನಿಲುಗಡೆ ಅವಕಾಶ ಮಾಡಿಕೊಡುವಂತೆ ಸಾರ್ವಜನಿಕರ ಮನವೊಲಿಸಬೇಕು.
-ತನ್ವೀರ್ ಸೇಠ್, ಶಾಸಕ
ಕ್ರೀಡೆಗೆ ಅನುದಾನ ನೀಡಿ
ಸರ್ಕಾರ ಕ್ರೀಡಾ ಇಲಾಖೆಗೆ 25 ಲಕ್ಷ ರೂಪಾಯಿ ಅನುದಾನ ನೀಡುತ್ತದೆ. ಇದರಿಂದ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡಲು ಮಾತ್ರ ಸಾಧ್ಯವಾಗುತ್ತದೆ. ಕ್ರೀಡಾ ಪರಿಕರ, ಟ್ರ್ಯಾಕ್‌ಸೂಟ್ ಖರೀದಿಗೆ ಇನ್ನೂ 20 ರಿಂದ 25 ಲಕ್ಷ ಅನುದಾನ ಬೇಕು. ಇದನ್ನು ದಸರೆಗೆ ಮುಂಚೆಯೇ ಬಿಡುಗಡೆ ಮಾಡಬೇಕು.
-ಕೆ.ಸುರೇಶ್, ಸಹಾಯಕ ನಿರ್ದೇಶಕ, ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ
ವೇದಿಕೆಗಳು ಕಡಿಮೆ ಇರಲಿ
ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಏಕಕಾಲದಲ್ಲಿ ಐದು ವೇದಿಕೆಗಳಲ್ಲಿ ನಡೆಸುವ ಬದಲು ಮೂರು ವೇದಿಕೆಗಳು ಸಾಕು. ಇದರಿಂದ ಎಲ್ಲರೂ ಕಾರ್ಯಕ್ರಮ ವೀಕ್ಷಿಸ ಬಹುದು. ಒಂದೇ ಬಾರಿಗೆ ನಾಲ್ಕೈದು ಕಡೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು ಬೇಡ.
-ಕೆ.ಎನ್.ಅಣ್ಣೇಗೌಡ, ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಜಂಬೂ ಸವಾರಿಗೆ ಪುಷ್ಪವೃಷ್ಟಿ
ಬೆಂಗಳೂರಿನ ಜಕ್ಕೂರು ಫ್ಲೈಯಿಂಗ್ ಕ್ಲಬ್ ಪತ್ರ ಬರೆದಿದ್ದು ಜಾಯ್ ರೈಡ್ಸ್, ಸ್ಕೈ ಡೈವಿಂಗ್ ಮತ್ತು ಜಂಬೂ ಸವಾರಿ ವೇಳೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲು ಸಿದ್ಧವಿರುವುದಾಗಿ ತಿಳಿಸಿದೆ.
ಅಂತರರಾಷ್ಟ್ರೀಯ ಮ್ಯಾಜಿಕ್ ಶೋ ನಡೆಸಿಕೊಡಲು ವ್ಯಕ್ತಿಯೊಬ್ಬರು ಮುಂದೆ ಬಂದಿದ್ದಾರೆ. ಅಂಗವಿಕಲರಿಗೆ ಜಂಬೂ ಸವಾರಿ ವೀಕ್ಷಣೆಗೆ ಪ್ರತ್ಯೇಕ ಸ್ಥಳಾವಕಾಶ ನಿಗದಿ ಪಡಿಸುವಂತೆ ಅಂಗವಿಕಲರ ಆಯುಕ್ತ ಕೆ.ವಿ.ರಾಜಣ್ಣ ಅವರೂ ಪತ್ರ ಬರೆದಿದ್ದಾರೆ. ಈ ಬಗ್ಗೆ ಚರ್ಚಿಸಲಾಗುವುದು.
-ಪಿ.ಎಸ್.ವಸ್ತ್ರದ್, ಜಿಲ್ಲಾಧಿಕಾರಿ
`ಪ್ರಜಾವಾಣಿ~ ಸರಣಿ ಲೇಖನ
ಮುಂದಿನ ದಸರಾ ಹೇಗಿರಬೇಕು? ಎಂದು `ಪ್ರಜಾವಾಣಿ~ ಪತ್ರಿಕೆ ಕಳೆದ ಒಂದು ವರ್ಷದಿಂದ ಸರಣಿ ಲೇಖನಗಳ ಮೂಲಕ ಬೆಳಕು ಚೆಲ್ಲುವ ಕೆಲಸ ಮಾಡಿದೆ. ಆ ಲೇಖನಗಳನ್ನು ಆಧರಿಸಿ ಈಗಾಗಲೇ ಸಭೆ ನಡೆಸಿ, ವರದಿ ಸಿದ್ಧಪಡಿಸಲಾಗಿದೆ. ಆ ವರದಿಯನ್ನೂ ದಸರಾ ಸಿದ್ಧತೆಗೆ ಪರಿಶೀಲಿಸಬಹುದು. ಲೇಖನ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿರುವ ವಿವಿಧ ಕ್ಷೇತ್ರಗಳ ಗಣ್ಯರ ಅಭಿಪ್ರಾಯವನ್ನೂ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಪಿ.ಎಸ್.ವಸ್ತ್ರದ್ ಅವರು `ಪ್ರಜಾವಾಣಿ~ ಲೇಖನಗಳ ಬಗ್ಗೆ ಸಭೆಯ ಗಮನ ಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.