ADVERTISEMENT

ಕಬಿನಿ ಹಿನ್ನೀರಿಗೆ ಬಂದ ಕಾಡಾನೆ ಹಿಂಡು

ಪ್ರಜಾವಾಣಿ ವಿಶೇಷ
Published 24 ಜನವರಿ 2013, 10:36 IST
Last Updated 24 ಜನವರಿ 2013, 10:36 IST
ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನಗಳಲ್ಲಿನ ಕಾಡಾನೆಗಳು ಆಹಾರ ಮತ್ತು ನೀರು ಅರಸಿ ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಹಿನ್ನೀರಿನ ಬಳಿ ಬೀಡು ಬಿಟ್ಟಿರುವುದು.
ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನಗಳಲ್ಲಿನ ಕಾಡಾನೆಗಳು ಆಹಾರ ಮತ್ತು ನೀರು ಅರಸಿ ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಹಿನ್ನೀರಿನ ಬಳಿ ಬೀಡು ಬಿಟ್ಟಿರುವುದು.   

ಎಚ್.ಡಿ.ಕೋಟೆ: ಬೇಸಿಗೆ ಆರಂಭವಾಗು ತ್ತಿದ್ದಂತೆಯೇ ನಾಗರಹೊಳೆ ಮತ್ತು ಬಂಡೀಪುರ ಉದ್ಯಾನಗಳಲ್ಲಿನ ಕಾಡಾನೆಗಳು ಆಹಾರ ಮತ್ತು ನೀರು ಅರಸಿ ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಹಿನ್ನೀರಿನತ್ತ ಮುಖಮಾಡುತ್ತಿವೆ.

ಅರಣ್ಯ ಪ್ರದೇಶದಲ್ಲಿನ ಗಿಡಮರಗಳು ಹಾಗೂ ಬಿದಿರು ಒಣಗಿ ನಿಂತಿದೆ. ತಾಲ್ಲೂಕಿನಾದ್ಯಂತ ಮಳೆ ಇಲ್ಲದೆ ಬರಗಾಲ ಆವರಿಸಿದ್ದು, ಅರಣ್ಯ ಪ್ರದೇಶದ ವ್ಯಾಪ್ತಿಯ ಕೆರೆ ಕಟ್ಟೆಗಳಲ್ಲಿ ನೀರು ಬರಿದಾಗಿದೆ. ಹೀಗಾಗಿ ಕಾಡು ಪ್ರಾಣಿಗಳು ಕುಡಿಯುವ ನೀರಿಗಾಗಿ ಕಬಿನಿ ಹಿನ್ನೀರು ಮತ್ತು ಕಾಡಂಚಿನ ಗ್ರಾಮಗಳಲ್ಲಿರುವ ಕೆರೆ, ಕಟ್ಟೆಗಳನ್ನು ಅವಲಂಬಿಸುವಂತಾಗಿದೆ.

ಹುಲಿ, ಚಿರತೆ, ಕಾಡೆಮ್ಮೆ, ಜಿಂಕೆ, ಹಂದಿ, ಆನೆ ಸೇರಿದಂತೆ ಇತರೆ ಪ್ರಾಣಿಗಳು ಕಾಡಂಚಿನ ಗ್ರಾಮಗಳ ಜಮೀನುಗಳಲ್ಲಿರುವ ನೀರಿನ ಮೂಲಗಳನ್ನು ಅರಸಿಕೊಂಡು ಬರುತ್ತಿರುವುದರಿಂದ ಕಾಡು ಪ್ರಾಣಿ ಮತ್ತು ಮನುಷ್ಯನ ನಡುವೆ ಸಂಘರ್ಷ ನಡೆಯುತ್ತಿದೆ.

ಮೇಟಿಕುಪ್ಪೆ ವನ್ಯಜೀವಿ ಅರಣ್ಯ ವಲಯದಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ವಲಯ ಅರಣ್ಯಧಿಕಾರಿ ಸಂತೋಷ್‌ನಾಯಕ್ ವರ್ಗಾವಣೆ ಗೊಂಡು 8 ತಿಂಗಳು ಕಳೆದಿದೆ. ಆದರೆ, ಇದುವರೆಗೂ ಯಾವುದೇ ಅಧಿಕಾರಿಯನ್ನು ಈ ವಲಯಕ್ಕೆ ನಿಯೋಜಿಲ್ಲ. ಬದಲಿಗೆ ಅಂತರಸಂತೆ ವಲಯದ ಅಧಿಕಾರಿಯನ್ನೇ ಪ್ರಭಾರವಾಗಿ ನೇಮಕ ಮಾಡಲಾಗಿದೆ.

ಅರಣ್ಯದಲ್ಲಿ ಬೆಂಕಿ ಅನಾಹುತ ಸಂಭವಿಸುವುದನ್ನು ತಡೆಗಟ್ಟಲು ಮುಂಜಾಗ್ರತೆ ಕ್ರಮಕೈಗೊಂಡಿಲ್ಲ. ಇದರಿಂದಾಗಿ ಕಾಡಿಗೆ ಬೀಳುವ ಬೆಂಕಿ ಅನಾಹುತ ತಪ್ಪಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

`ಅಧಿಕಾರಿಗಳು ಬೆಂಕಿ ಅನಾಹುತ ತಪ್ಪಿಸಲು ಕೈಗೊಳ್ಳಬೇಕಿರುವ ಕ್ರಮಗಳನ್ನು ಮೊದಲು ಕೈಗೆತ್ತಿ ಕೊಳ್ಳಬೇಕು. ಬೆಂಕಿ ನಂದಿಸುವ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ಆ ಮೂಲಕ ಸಂಪತ್ಭರಿತ ಅರಣ್ಯ ಮತ್ತು ಕಾಡು ಪ್ರಾಣಿಗಳನ್ನು ರಕ್ಷಿಸಲು ಮುಂದಾಗಬೇಕು' ಎಂದು ಪ್ರಾಣಿ ಪ್ರಿಯ ಸಂತೋಷ್ ಹೇಳುತ್ತಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.