ADVERTISEMENT

ಕಲಾವಿದರ ಬದುಕು ಕಷ್ಟಕರ: ರಾಜಾರಾಂ

​ಪ್ರಜಾವಾಣಿ ವಾರ್ತೆ
Published 8 ಜನವರಿ 2011, 9:05 IST
Last Updated 8 ಜನವರಿ 2011, 9:05 IST

ಮೈಸೂರು: ‘ನಾಟಕ ಕಂಪೆನಿಗಳಿಗೆ ಬಣ್ಣದ ಪರದೆ, ರಂಗಪರಿಕರ ನಿರ್ಮಿಸಿ ಕೊಡುತ್ತಿರುವ ಕಲಾವಿದರ ಬದುಕು  ಕಷ್ಟಕರವಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಡಾ.ಬಿ.ವಿ.ರಾಜಾರಾಂ ಶುಕ್ರವಾರ ಹೇಳಿದರು. ಪುರಭವನದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಆಯೋಜಿಸಲಾಗಿರುವ ನಂಜನಗೂಡು  ಶ್ರೀಕಂಠಶಾಸ್ತ್ರೀ ಅವರ ನೆನಪಿನ ಜಿಲ್ಲಾ ನಾಟಕೋತ್ಸವದಲ್ಲಿ ಮಾತನಾಡಿದ ಅವರು, ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿಯು ಗ್ರಾಮೀಣ ಪ್ರದೇಶದ ಕಲಾವಿದರಿಗೆ ಗೌರವ ಧನ ನೀಡಿ ಸನ್ಮಾನಿಸುತ್ತಿದೆ ಎಂದರು.

‘ವೃತ್ತಿ ರಂಗಭೂಮಿ, ಹವ್ಯಾಸಿ ರಂಗಭೂಮಿ, ಮಕ್ಕಳ ರಂಗಭೂಮಿ ಹಾಗೂ ಗ್ರಾಮೀಣ ರಂಗಭೂಮಿಗಳಲ್ಲಿ ನಾಟಕ ಅಕಾಡೆಮಿಯು ನಿರಂತರವಾಗಿ ಕೆಲಸ ಮಾಡುತ್ತಿದೆ. ಅಲ್ಲದೆ, ಕಾಲೇಜು ವಿದ್ಯಾರ್ಥಿಗಳಿಗಾಗಿ ನಾಟಕೋತ್ಸವಗಳನ್ನು ಆಯೋಜಿಸುತ್ತಿದೆ. 150 ವರ್ಷಗಳ ಇತಿಹಾಸವಿರುವ ರಂಗಭೂಮಿಯನ್ನು ಯುವಪೀಳಿಗೆ ಮರೆಯುತ್ತಿದ್ದಾರೆ.  ಈ ಹಿನ್ನೆಲೆಯಲ್ಲಿ ಯುವಪೀಳಿಗೆಗೆ ನಾಟಕ, ಸಂಗೀತವನ್ನು ತಿಳಿಸಿಕೊಡುವ ಕೆಲಸವನ್ನು ಮಾಡಬೇಕಾಗಿದೆ’ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ‘ನಾಟಕ ಎಲ್ಲರನ್ನೂ ನೇರವಾಗಿ  ತಲುಪುವ ಕಲೆಯಾಗಿದೆ. ಆದರೆ, ಯುವ ಜನತೆ ನಾಟಕಗಳತ್ತ ಮುಖ ಮಾಡುತ್ತಿಲ್ಲ. ಈ ಹಿಂದೆ ಶಾಲಾ-ಕಾಲೇಜು ವಾರ್ಷಿಕೋತ್ಸವಗಳಲ್ಲಿ ಕಡ್ಡಾಯವಾಗಿ ನಾಟಕ ಪ್ರದರ್ಶನವನ್ನು ಏರ್ಪಡಿಸುತ್ತಿದ್ದರು. ಆದರೆ, ಇಂದು ಸಿನೆಮಾ  ಹಾಡಿಗೆ ಹೆಜ್ಜೆ ಹಾಕುತ್ತ ಯುವ ಜನಾಂಗ ನಾಟಕವನ್ನು ಮರೆತಿದೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವೃತ್ತಿ ಕನ್ನಡ ರಂಗಭೂಮಿ ಮಹಿಳಾ ಕಲಾವಿದರ ಸಂಘದ ಕಾರ್ಯದರ್ಶಿ ಎಸ್.ಎಸ್. ಗಾಯತ್ರಿ ಹಾಗೂ ಸಂಗೀತ ನಿರ್ದೇಶಕ ಎಚ್.ಪಿ.ನಾಗೇಂದ್ರಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಎರಡನೇ ದಿನದ ಜಿಲ್ಲಾ ನಾಟಕೋತ್ಸವದ ಅಂಗವಾಗಿ ನಂಜುಂಡೇಶ್ವರ ಕನ್ನಡ ಕಲಾ ಸಂಘದವರು ಎಚ್.ಕೆ.ಯೋಗಾನರಸಿಂಹ ನಿರ್ದೇಶನದ ಭೂ ಕೈಲಾಸ ನಾಟಕವನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.