ADVERTISEMENT

ಕುಶಲಕರ್ಮಿಗಳಿಗೆ ನೆರವು ಅಗತ್ಯ: ಸಂದೇಶ್

​ಪ್ರಜಾವಾಣಿ ವಾರ್ತೆ
Published 8 ಜನವರಿ 2011, 9:10 IST
Last Updated 8 ಜನವರಿ 2011, 9:10 IST

ಮೈಸೂರು: ಭಾರತ ಸರ್ಕಾರ ಹಾಗೂ ದೆಹಲಿಯ ಜವಳಿ ಮಂತ್ರಾಲಯದ ಕರಕುಶಲ ಅಭಿವೃದ್ಧಿ ಆಯುಕ್ತರ ಆಶ್ರಯದಲ್ಲಿ ಜೆಎಲ್‌ಬಿ ರಸ್ತೆಯ ಎಂಜಿನಿಯರ್ಸ್‌ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಕರ್ನಾಟಕ ಕರಕುಶಲ ಕಲೆಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಮೇಯರ್ ಸಂದೇಶ್‌ಸ್ವಾಮಿ ಶುಕ್ರವಾರ ಚಾಲನೆ ನೀಡಿದರು. ಸಂದರ್ಭದಲ್ಲಿ ಮಾತನಾಡಿದ ಅವರು, ‘ಕುಂದಣ ಕಲೆ ಮತ್ತು ಶ್ರೀಗಂಧ ಕೆತ್ತನೆಯಿಂದ ಇಲ್ಲಿನ ಕಲಾವಿದರು ಮೈಸೂರಿನ ಹೆಸರನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಸ್ಥಳೀಯ ಕಲೆಗಳನ್ನು ಮುಂದುವರಿಸಿಕೊಂಡು ಬಂದಿರುವ ಯುವ ಕಲಾವಿದರು ಹಾಗೂ ಕುಶಲಕರ್ಮಿಗಳಿಗೆ ಪ್ರೋತ್ಸಾಹ ನೀಡಬೇಕು’ ಎಂದು ಹೇಳಿದರು.

‘ನಗರದಲ್ಲಿ ನೂರಾರು ಕುಶಲಕರ್ಮಿಗಳು ಸ್ವಾವಲಂಬನೆಯಿಂದ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ಕುಶಲಕರ್ಮಿಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಮೂಲಕ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕಲೆಯೊಂದಿಗೂ ಕಲಾವಿದರೂ, ಕುಶಲಕರ್ಮಿಗಳೂ ಬೆಳೆಯಲು ಸಹಾಯ ಹಸ್ತ ಚಾಚಬೇಕು’ ಎಂದರು.

ಜ.7 ರಿಂದ 14ರ ವರೆಗೆ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಪ್ರದರ್ಶನದಲ್ಲಿ ಕುಂದಣ ಕಲೆ, ಶ್ರೀಗಂಧ ಕೆತ್ತನೆ, ಅರಗಿನ ವಸ್ತುಗಳು, ಸಣಬಿನ ಕಲಾ ವಸ್ತುಗಳು, ರೇಷ್ಮೆ, ಕಸೂತಿ ಸೀರೆಗಳು, ಆಭರಣ, ಅಗರಬತ್ತಿ, ಪೀಠೋಪಕರಣ, ಆಟಿಕೆ ಸಾಮಾನು, ಚನ್ನಪಟ್ಟಣದ ಗೊಂಬೆಗಳು, ಚರ್ಮದ ವಸ್ತುಗಳು ಸೇರಿದಂತೆ ಹಲವಾರು ವಸ್ತುಗಳು ಲಭ್ಯ ಇವೆ.ಕಾರ್ಯಕ್ರಮದಲ್ಲಿ ಕರಕುಶಲ ಸೇವಾ ಹಾಗೂ ವಿಸ್ತರಣಾ ಕೇಂದ್ರದ ಉಪ ನಿರ್ದೇಶಕ ಎಸ್.ಸಿ.ದೇವರಮನಿ, ಬೆಂಗಳೂರಿನ ಕರ್ನಾಟಕ ಕರಕುಶಲ ಕರ್ಮಿಗಳ ಕಲ್ಯಾಣ ಸಂಸ್ಥೆಯ (ಕಾವಾ) ಅಧ್ಯಕ್ಷೆ ಹೇಮಾ ಶೇಖರ್, ನಿರ್ದೇಶಕ ಎನ್.ಕೃಷ್ಣಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.