ADVERTISEMENT

ಕೇಳುವವರಿಲ್ಲ ಜೇನು ಕುರುಬರ ಕೊರಗು

ಪ್ರಜಾವಾಣಿ ವಿಶೇಷ
Published 2 ಸೆಪ್ಟೆಂಬರ್ 2013, 8:16 IST
Last Updated 2 ಸೆಪ್ಟೆಂಬರ್ 2013, 8:16 IST

ಎಚ್.ಡಿ. ಕೋಟೆ: ಆದಿವಾಸಿಗಳ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯದ ಹತ್ತಾರು ಯೋಜನೆಗಳಿಂದ ಹಣ ಹರಿದು ಬರುತ್ತಿದ್ದರೂ ಆದಿವಾಸಿ ಜೇನುಕುರುಬ ಜನಾಂಗದವರಿಗೆ ಮೂಲ ಸೌಲಭ್ಯ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ.

ತಾಲ್ಲೂಕಿನ ಬಿ. ಮಟಕೆರೆ ಹೋಬಳಿಯ ಮುತ್ತಿಗೆಚಿಕ್ಕತಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡೇರಹಳ್ಳಿ ಮಾಳದಹಾಡಿಯಲ್ಲಿ ವಾಸಿಸುತ್ತಿರುವ ಆದಿವಾಸಿ ಜೇನುಕುರುಬ ಜನಾಂಗದವರು ಮೂಲ ಸೌಲಭ್ಯಕ್ಕಾಗಿ ಪರದಾಡುತ್ತಿದ್ದಾರೆ.

ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ವಡೇರಹಳ್ಳಿ ಮಾಳದಹಾಡಿಯಲ್ಲಿ 100ಕ್ಕೂ ಹೆಚ್ಚು ಜನ ಸಂಖ್ಯೆ ಹೊಂದಿರುವ 28 ಕುಟುಂಬಗಳು ವಾಸಿಸುತ್ತಿವೆ. ಈ ಹಾಡಿಯಲ್ಲಿ ವಾಸಿಸಲು ಯೋಗ್ಯವಿಲ್ಲದ ಶಿಥಿಲಗೊಂಡ ಮನೆಗಳು, ಗುಂಡಿಗಳಿಂದ ಕೂಡಿದ ರಸ್ತೆ, ಗಬ್ಬೆದ್ದು ನಾರುವ ಚರಂಡಿ ಹಾಗು ಕುಡಿಯುವ ನೀರಿನ ಅಲಭ್ಯತೆ ಮುಂತಾದ ಸಮಸ್ಯೆಗಳಿಂದ ಇಲ್ಲಿನ ಜನ ಬಳಲುತ್ತಿದ್ದಾರೆ.

ಇಲ್ಲಿನ ಬಹುತೇಕ ಎಲ್ಲರೂ ಕೂಲಿಯನ್ನೇ ಅವಲಂಬಿಸಿದ್ದು, ಸ್ಥಳೀಯವಾಗಿ ಕೂಲಿ ಲಭ್ಯ ಇಲ್ಲದ ಸಂದರ್ಭದಲ್ಲಿ ಕೊಡಗು ಹಾಗೂ ಇನ್ನಿತರ ಕಡೆ ವಲಸೆ ಹೋಗುವುದು ಸಾಮಾನ್ಯವಾಗಿದೆ.

ಹಾಡಿಯಲ್ಲಿ ಕುಡಿಯುವ ನೀರಿಗೆ ಯಾವುದೇ ಸೌಲಭ್ಯ ಇಲ್ಲದೆ ಕಾಡಂಚಿನಲ್ಲಿ ಹರಿಯುವ ತೊರೆಯಿಂದ ಕುಡಿಯಲು ಮತ್ತು ಇತರೆ ಬಳಕೆಗೆ ನೀರು ಸಂಗ್ರಹಿಸುವುದು ಅನಿವಾರ್ಯವಾಗಿದೆ. ನೀರಿಗಾಗಿ ನಿರಂತರ ಪರದಾಟ ತಪ್ಪಿಲ್ಲ. ಮಳೆಗಾಲದಲ್ಲಿ ಪ್ರವಾಹದಿಂದ ಈ ಹಾಡಿಗೆ ಅಕ್ಕಪಕ್ಕದ ಗ್ರಾಮಗಳಿಂದ ಸಂಪರ್ಕ ಕಡಿತಗೊಳ್ಳುತ್ತದೆ. ಗ್ರಾಮದಿಂದ ಎರಡು ಕಿ.ಮೀ ದೂರದಲ್ಲಿ ಅಂಗನವಾಡಿ ಕೇಂದ್ರವಿದ್ದು ಮಕ್ಕಳು ಅಲ್ಲಿಗೆ ತೆರಳುವುದು ವಿರಳ. ಬೇಸಾಯವನ್ನು ಅವಲಂಬಿಸಿರುವ ಇವರು ಅಲ್ಪ ಜಮೀನನ್ನು ಹಾಗೂ ಕೂಲಿಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ.

ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಈ ಕೂಡಲೆ ಕ್ರಮ ಕೈಗೊಂಡು ಸೂಕ್ತ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಸ್ಥಳೀಯ ಆದಿವಾಸಿಗಳು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.