ADVERTISEMENT

ಗೃಹ ರಕ್ಷಕ ದಳದಲ್ಲಿ ಎಲ್ಲವೂ ಸರಿಯಿಲ್ಲ!

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 10:10 IST
Last Updated 17 ಮಾರ್ಚ್ 2012, 10:10 IST

ಮೈಸೂರು: ಜಿಲ್ಲಾ ಗೃಹ ರಕ್ಷಕ ದಳದಲ್ಲಿ ಎಲ್ಲವೂ ಸರಿ ಇದ್ದಂತಿಲ್ಲ. ಸಿಬ್ಬಂದಿ ಹಗಲು-ರಾತ್ರಿ ಎನ್ನದೆ ದುಡಿದು ಬಾಳ ಬಂಡಿಯನ್ನು ನೂಕುತ್ತಿದ್ದಾರೆ. ಆದರೆ ಸಿಬ್ಬಂದಿಗೆ ನಿತ್ಯ ಕಿರುಕುಳ ನೀಡುವುದು, ಬೇನಾಮಿ ಸಿಬ್ಬಂದಿ ಹೆಸರುಗಳನ್ನು ಸೇರಿಸಿ ಸರ್ಕಾರವನ್ನು ವಂಚಿಸಿ ಅಧಿಕಾರಿಗಳು ಹಣ ಮಾಡುತ್ತಿದ್ದಾರೆ ಎಂದು ನೊಂದ ಗೃಹ ರಕ್ಷಕ ದಳದ ಸಿಬ್ಬಂದಿ ಆರೋಪಿಸಿದ್ದಾರೆ. ಅಧಿಕಾರಿಗಳು ಇದನ್ನು ನಿರಾಕರಿಸುತ್ತಾರೆ.

ಜಿಲ್ಲೆಯಲ್ಲಿ ಸುಮಾರು 1100 ಮಂದಿ ಗೃಹ ರಕ್ಷಕ ದಳದ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಕರ್ತವ್ಯನಿಷ್ಟೆ, ಸಂಯಮ ಮತ್ತು ಬದ್ಧತೆಯಿಂದ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಆದರೆ ಇವರು ಮಾಡಿದ ಕಾಯಕಕ್ಕೆ ದಿನಗೂಲಿ ಸಿಗುವುದು ಕೇವಲ ರೂ.175 ಮಾತ್ರ. ಬೆಲೆ ಏರಿಕೆ ನಡುವೆ ಈ ಹಣದಲ್ಲಿ ಜೀವನ ನಡೆಸುವುದು ದುಸ್ತರ. ಕಡಿಮೆ ಕೂಲಿಗೆ ಇವರು ದುಡಿದು ಸಂಸಾರ ನೊಗವನ್ನು ಎಳೆಯುತ್ತಿದ್ದಾರೆ.

ಕರ್ತವ್ಯ ನಿರ್ವಹಿಸುವ ಗೃಹ ರಕ್ಷಕ ದಳದ ಸಿಬ್ಬಂದಿಗೆ ವರ್ಷವಾದರೂ ಹಣ ಬಿಡುಗಡೆ ಮಾಡದೆ ಸತಾಯಿಸಲಾಗುತ್ತಿದೆ. ಸಿಬ್ಬಂದಿಯ ಸೇವೆಯನ್ನು ಮಾತ್ರ ಪಡೆದುಕೊಳ್ಳಲಾಗುತ್ತಿದೆ. ಆದರೆ ಸರ್ಕಾರದ ಸೌಲಭ್ಯಗಳು ಇವರಿಗೆ ಮುಟ್ಟುತ್ತಿಲ್ಲ. ಕೆ.ಆರ್.ಆಸ್ಪತ್ರೆ, ವಿಶ್ವವಿದ್ಯಾನಿಲಯ ಸೇರಿದಂತೆ ವಿವಿಧೆಡೆ ಗೃಹ ರಕ್ಷಕ ದಳ ಸಿಬ್ಬಂದಿ ಹಗಲು-ರಾತ್ರಿ ಪಾಳಿಯಲ್ಲಿ ದುಡಿಯುತ್ತಿದ್ದಾರೆ. ನಾಡಹಬ್ಬ ದಸರಾ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಅವಶ್ಯಕತೆ ಬಿದ್ದಾಗ ಇವರನ್ನು ದುಡಿಸಿಕೊಳ್ಳಲಾಗುತ್ತದೆ.

ಕಿರುಕುಳ ಆರೋಪ: ಶಿಸ್ತುಬದ್ಧವಾಗಿ ಕರ್ತವ್ಯ ನಿರ್ವಹಿಸಿದರೂ ಹಿರಿಯ ಅಧಿಕಾರಿಗಳಿಂದ ಕಿರುಕುಳ ಅನುಭವಿಸುವುದು ಸಿಬ್ಬಂದಿಗೆ ತಪ್ಪಿಲ್ಲ. ಏಕವಚನ ಬಳಸಿ ಕರೆಯುವುದು, ಅವಾಚ್ಯ ಶಬ್ದಗಳಿಂದ ಹಿರಿಯ ಅಧಿಕಾರಿಗಳು ನಿಂದಿಸುತ್ತಾರೆ. ಕಡಿಮೆ ಕೂಲಿ ನೀಡಿದರೂ ನಮಗೆ ಚಿಂತೆ ಇಲ್ಲ. ಆದರೆ ಹಿರಿಯ ಅಧಿಕಾರಿಗಳು ನೀಡುವ ಕಿರುಕುಳ ಮತ್ತು ತೊಂದರೆಯನ್ನು ಸಹಿಸಲಾಗದು ಎನ್ನುತ್ತಾರೆ ನೊಂದ ಸಿಬ್ಬಂದಿ.

ಕಿರುಕುಳದಿಂದ ಮಹಿಳಾ ಗೃಹ ರಕ್ಷಕ ಸಿಬ್ಬಂದಿ ಹೊರತಾಗಿಲ್ಲ. ವಾರಕ್ಕೊಮ್ಮೆ ಸಿಬ್ಬಂದಿಗೆ ಕವಾಯತು ಮಾಡಿಸಲಾಗುತ್ತದೆ. ಆ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು ಏಕವಚನ ಬಳಸುವುದು, ನಿಂದಿಸುವುದು ಸಾಮಾನ್ಯ ಎನ್ನುತ್ತಾರಿವರು.

ಹೊಸದಾಗಿ ಆಯ್ಕೆಯಾದ ಗೃಹ ರಕ್ಷಕ/ರಕ್ಷಕಿಯರಿಗೆ ಈ ಹಿಂದೆ ನಡೆದ ತರಬೇತಿ ಅವಧಿಯಲ್ಲಿ ದಿನಕ್ಕೆ ರೂ.60 ರಂತೆ ಊಟ ಭತ್ಯೆ ವಸೂಲಿ ಮಾಡಿ, ಅಡುಗೆಯವರಿಗೆ ರೂ.40 ನೀಡಿ ಉಳಿದ ಹಣವನ್ನು ಕಮಿಷನ್ ರೂಪದಲ್ಲಿ ಪಡೆಯಲಾಗಿದೆ. ಈ ಬಗ್ಗೆ ಸಿಬ್ಬಂದಿ ದೂರು ನೀಡಿದ್ದರು. ಆದರೆ ಯಾವುದೇ ಪ್ರಯೋಜನವಾ ಗಿಲ್ಲ. ಹಿರಿಯ ಅಧಿಕಾರಿಗಳಿಂದ ಸಿಬ್ಬಂದಿಗೆ ಅನ್ಯಾಯ, ಕಿರುಕುಳ, ಸರ್ಕಾರವನ್ನು ವಂಚಿಸುತ್ತಿ ರುವ ಬಗ್ಗೆ ಜಿಲ್ಲಾಧಿಕಾರಿ ಮತ್ತು ಮಾನವ ಹಕ್ಕು ಆಯೋಗ, ಗೃಹ ರಕ್ಷಕ ದಳ ಆರಕ್ಷಕ ಮಹಾನಿರ್ದೇಶಕರಿಗೆ ದೂರು ನೀಡಲಾಗಿದೆ. ಆದರೂ ಇದುವರೆಗೂ ಸಂಬಂಧಪಟ್ಟವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅನ್ಯಾಯ-ಅಕ್ರಮಗಳು ನಡೆಯುವುದನ್ನು ತಡೆಯದಿದ್ದರೆ ಹೋರಾಟ ಅನಿವಾರ್ಯ ಎನ್ನುತ್ತಾರೆ ನೊಂದ ಗೃಹ ರಕ್ಷಕ ಸಿಬ್ಬಂದಿ.

`ಗೃಹ ರಕ್ಷಕ ದಳದ ಸಿಬ್ಬಂದಿಗೆ ಯಾವುದೇ ರೀತಿಯ ಕಿರುಕುಳ ನೀಡಲಾಗುತ್ತಿಲ್ಲ. ಆರೋಪ ಸತ್ಯಕ್ಕೆ ದೂರವಾದುದು. ಇಲಾಖೆಯ ನಿಯಮಾವಳಿಯಲ್ಲಿ ಓಟಿಗೆ ಅವಕಾಶ ಇರುವುದಿಲ್ಲ. ಭದ್ರತಾ ಅಧಿಕಾರಿಗಳು ಮತ್ತು ಆಸ್ಪತ್ರೆ ಆಡಳಿತ ವರ್ಗ ನೀಡಿದ ಹಾಜರಾತಿ ಅನುಗುಣವಾಗಿ ಕರ್ತವ್ಯ ನಿರ್ವಹಿಸಿದ ಗೃಹರಕ್ಷಕರು ಗಳಿಗೆ ಉಳಿತಾಯ ಖಾತೆ ಮೂಲಕ ಹಣ ಜಮಾ ಮಾಡಲಾಗುತ್ತಿದೆ. ಬೇನಾಮಿ ಹೆಸರಲ್ಲಿ ಹಣ ಮಾಡಲು ಅವಕಾಶವೇ ಇಲ್ಲ. ಕೆಲವರು ಗುಂಪು ಕಟ್ಟಿಕೊಂಡು ಹಿರಿಯ ಅಧಿಕಾರಿಗಳ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ.ಆರೋಪಗಳು ನಿರಾಧಾರ. ದಾಖಲೆಗಳ ಸಹಿತ ಬಹಿರಂಗಪಡಿಸಿದಲ್ಲಿ ಅದನ್ನು ಎದುರಿಸಲು ಸಿದ್ಧ~ ಎಂದು ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡೆಂಟ್ ಡಾ.ಚಂದ್ರಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.