ADVERTISEMENT

ಚನ್ನಪ್ಪನಕೊಪ್ಪಲು ಅಭಿವೃದ್ಧಿ ಮಾರುದೂರ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 5:40 IST
Last Updated 25 ಜನವರಿ 2012, 5:40 IST

ಕೆ.ಆರ್.ನಗರ: ತಾಲ್ಲೂಕಿನ ಚನ್ನಪ್ಪನಕೊಪ್ಪಲು ಗ್ರಾಮ ಪಟ್ಟಣಕ್ಕೆ ಹತ್ತಿರವಿದ್ದರೂ ಮೂಲ ಸೌಕರ್ಯ ಗಳಿಂದ ಮಾತ್ರ ಬಹಳಷ್ಟು ದೂರವಾಗಿದೆ.

ಬ್ಯಾಡರಹಳ್ಳಿ ಗ್ರಾಮ ಪಂಚಾಯಿ ತಿಗೆ ಒಳಪಡುವ ಚನ್ನಪ್ಪನಕೊಪ್ಪಲು ಗ್ರಾಮ ತಾಲ್ಲೂಕು ಕೇಂದ್ರದಿಂದ ಕೇವಲ 3 ಕಿ.ಮೀ ಅಂತರದಲ್ಲಿದೆ. ಗ್ರಾಮದಲ್ಲಿ ಸುಮಾರು 300ಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ತಾಲ್ಲೂಕಿನ ಇತರೆ ಗ್ರಾಮಗಳಂತೆ ಚನ್ನಪ್ಪನಕೊಪ್ಪಲು ಸಹ ಅಭಿವೃದ್ಧಿ ಯಿಂದ ವಂಚಿತವಾಗಿದೆ.
 
ಈ ಗ್ರಾಮಕ್ಕೆ ಅಡಗನಹಳ್ಳಿಯಿಂದ ಬೋರ್‌ವೆಲ್ ನೀರು ಸರಬರಾಜಾಗುತ್ತದೆ. ಗ್ರಾಮದ ಕೆಲವು ಕಡೆ ಚರಂಡಿ ಕಟ್ಟಿಕೊಂಡಿದೆ. ಅಲ್ಲಿ ಕಳೆ ಬೆಳೆದು ಸೊಳ್ಳೆಗಳ ತಾಣವಾಗಿದೆ. ಮಲಿನ ನೀರು ರಸ್ತೆಯಲ್ಲಿ ಹರಿಯುತ್ತದೆ. ಗ್ರಾಮದ ರಸ್ತೆಗೆ ಮೆಟ್ಲಿಂಗ್ ಆದರೂ ಸಹ ಡಾಂಬರೀಕರಣ ಮಾಡಿಲ್ಲ.
 
ತಾಲ್ಲೂಕು ಕೇಂದ್ರದಿಂದ ಚನ್ನಪ್ಪನಕೊಪ್ಪಲು ಗ್ರಾಮಕ್ಕೆ ಸಂಪರ್ಕ ಒದಗಿಸುವ ರಸ್ತೆ ಹದಗೆಟ್ಟಿದೆ. ಗ್ರಾಮಕ್ಕೆ ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಕೆಎಸ್‌ಆರ್‌ಟಿಸಿ ಬಸ್ ಬರುತ್ತದೆ. ಅದು ಬಿಟ್ಟರೆ ಬಾಡಿಗೆ ಆಟೋ ಸೇರಿದಂತೆ ಯಾವುದೇ ವಾಹನ ಇಲ್ಲಿಗೆ ಬರುವು ದಿಲ್ಲ. ಇದರಿಂದ ವೃದ್ಧರು, ಮಹಿಳೆಯರು, ಮಕ್ಕಳು ಆಸ್ಪತ್ರೆಗೆ ಅಥವಾ ಇತರ ಕಾರ್ಯಗಳಿಗೆ ಕೆ.ಆರ್. ನಗರಕ್ಕೆ ತೆರಳಲು ಕಾಲ್ನಡಿಗೆ ಮಾಡಬೇಕಿದೆ. ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾತ್ರ ಇದ್ದು, ಹೆಚ್ಚಿನ ವ್ಯಾಸಂಗಕ್ಕೆ ಕೆ.ಆರ್. ನಗರಕ್ಕೆ ತೆರಳುವುದು ಅನಿವಾರ್ಯ ವಾಗಿದೆ.

ಹದಗೆಟ್ಟ ರಸ್ತೆ ದುರಸ್ತಿಗೆ ಸರ್ಕಾರದಿಂದ ಹಣ ಮಂಜೂರಾಗಿದೆ. ಆದರೆ ಇಲ್ಲಿಗೆ ಬಂದ ಹಣವನ್ನು ಬೇರೆ ಊರಿಗೆ ವರ್ಗಾಯಿಸಲಾಗಿದೆ. ಕೆಲವು ಬಾರಿ ಟೆಂಡರ್ ಮೊತ್ತ ಕಡಿಮೆ ಎಂದು ಯಾರೊಬ್ಬರು ಕಾಮಗಾರಿಯ ಗುತ್ತಿಗೆ ಪಡೆದಿಲ್ಲ. ಇದರಿಂದ ಗ್ರಾಮದ ರಸ್ತೆಯಾಗದೆ ಉಳಿದಿದೆ. ಆದ್ದರಿಂದ ಅಧಿಕಾರಿಗಳು ಇತ್ತ ಗಮನ ಹರಿಸಿ ಹದಗೆಟ್ಟ ರಸ್ತೆ ಸೇರಿದಂತೆ ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸಲು ಮುಂದಾಗಬೇಕು ಎಂದು ಗ್ರಾಮದ ಗಂಗಾಧರಯ್ಯ (ಪುಟ್ಟಣ್ಣ)  ಅವರು ಒತ್ತಾಯಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.