ADVERTISEMENT

ಜೆಎಸ್‌ಎಸ್ ಆಸ್ಪತ್ರೆ ನೌಕರರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2012, 9:35 IST
Last Updated 10 ಜೂನ್ 2012, 9:35 IST

ಮೈಸೂರು: ಜೆಎಸ್‌ಎಸ್ ಆಸ್ಪತ್ರೆಯಲ್ಲಿ ದುಡಿ ಯುತ್ತಿರುವ ನೌಕರರಿಗೆ ಕಡಿಮೆ ಸಂಬಳ ನೀಡುವ ಜೊತೆಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ನೌಕರರು ಸಿಐಟಿಯು ಸಂಘಟನೆ ನೇತೃತ್ವ ದಲ್ಲಿ ನಗರದ ಕಾಡಾ ಕಚೇರಿ ಬಳಿ ಶನಿವಾರ ಪ್ರತಿಭಟನೆ ಮಾಡಿದರು.

ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಕಡಿಮೆ ವೇತನಕ್ಕೆ ದುಡಿಸಿಕೊಳ್ಳ ಲಾಗುತ್ತಿದೆ. ಇದರಿಂದ ಆಸ್ಪತ್ರೆಯ ವಾರ್ಡ್    ಬಾಯ್, ಆಯಾ, ದೋಬಿ ಮತ್ತು ಪೌರ ಕಾರ್ಮಿಕರು ನೊಂದಿದ್ದಾರೆ. ಸುಮಾರು 25 ವರ್ಷಗಳಿಂದ ಕೆಲಸ ಮಾಡುತ್ತಿರುವ ನೌಕರರು ಇದುವರೆಗೆ ರೂ.10 ಸಾವಿರ ಸಂಬಳ ಪಡೆಯುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ನೌಕರರು ಕಂಗಾಲಾಗಿದ್ದಾರೆ.

ವೇತನ ತಾರತಮ್ಯ ಸರಿಪಡಿಸುವಂತೆ ಒತ್ತಾಯಿಸಿ ಆಡಳಿತ ಮಂಡಳಿಯನ್ನು ನೌಕರರು ಭೇಟಿ ಮಾಡಿ ದಾಗ ಸಂಘ ರಚಿಸಿಕೊಂಡು ಬರುವಂತೆ ತಿಳಿಸಲಾ ಯಿತು. ಅದರಂತೆ ಸಂಘ ರಚಿಸಿ ಆಡಳಿತ ಮಂಡಳಿ ಬಳಿ ಹೋದಾಗ ಅಧಿಕಾರಿಗಳು ಮಾತು ಬದಲಾಯಿಸು ತ್ತಿದ್ದಾರೆ. ನ್ಯಾಯ ಕೇಳಲು ಹೋದವರಿಗೆ ಗದರಿಸುತ್ತಿದ್ದಾರೆ. ಮಹಿಳಾ ಆಯಾಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಜಾತಿ ನಿಂದನೆ ಮಾಡುವುದು ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.

ಆಡಳಿತ ಮಂಡಳಿಯವರು ಕೂಡಲೇ ಸಂಘ ದೊಂದಿಗೆ ಮಾತುಕತೆ ನಡೆಸಿ ನ್ಯಾಯ ದೊರಕಿಸಿಕೊಡ ಬೇಕು. ವೇತನ ತಾರತಮ್ಯ ಸರಿಪಡಿಸಬೇಕು. ಇಲ್ಲವಾದಲ್ಲಿ ಆಡಳಿತ ಮಂಡಳಿಯ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಮೈಸೂರು ಜಿಲ್ಲಾ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂ ವರ್ಕರ್ಸ್‌ ಯೂನಿಯನ್ ಅಧ್ಯಕ್ಷ ಡಿ.ಸೀನಾ, ಪ್ರಧಾನ ಕಾರ್ಯದರ್ಶಿ ಮಾದಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.