ADVERTISEMENT

ಜೈಲಿನಲ್ಲಿ ನಿತ್ಯಾನಂದ ಉಪವಾಸ

​ಪ್ರಜಾವಾಣಿ ವಾರ್ತೆ
Published 16 ಜೂನ್ 2012, 10:50 IST
Last Updated 16 ಜೂನ್ 2012, 10:50 IST

ಮೈಸೂರು: ನ್ಯಾಯಾಂಗ ಬಂಧನಕ್ಕೆ ಒಳಗಾಗಿ ನಗರದ ಕೇಂದ್ರ ಕಾರಾಗೃಹದಲ್ಲಿರುವ ಬಿಡದಿ ಬಳಿಯ ಧ್ಯಾನಪೀಠ ಪೀಠಾಧ್ಯಕ್ಷ ನಿತ್ಯಾನಂದ ಸ್ವಾಮೀಜಿ ಗುರುವಾರ ರಾತ್ರಿಯಿಂದ ಶುಕ್ರವಾರ ಸಂಜೆವರೆಗೆ ಅನ್ನ-ನೀರು ತ್ಯಜಿಸಿ ಉಪವಾಸ ಮಾಡಿದರು.

ರಾಮನಗರ ಜಿಲ್ಲಾ ದಂಡಾಧಿಕಾರಿ ಶ್ರೀರಾಮರೆಡ್ಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕ ನಿತ್ಯಾನಂದ ಸ್ವಾಮೀಜಿ ಅವರನ್ನು ನಗರದ ಕೇಂದ್ರ ಕಾರಾಗೃಹಕ್ಕೆ ಕರೆತರಲಾಯಿತು. ಕೇಂದ್ರ ಕಾರಾಗೃಹದ ಹೊಸ ಕಲ್ಲುಕಟ್ಟಡದ ಮೊದಲನೇ ಮಹಡಿಯ ಶೆಲ್ 19 ರಲ್ಲಿ ನಿತ್ಯಾನಂದ ಸ್ವಾಮೀಜಿ ಅವರನ್ನು ಇರಿಸಲಾಗಿತ್ತು.

ಪೂಜೆ ಮತ್ತು ಧ್ಯಾನಕ್ಕೆ ಅವಕಾಶ ಮಾಡಿಕೊಡು ವಂತೆ ನಿತ್ಯಾನಂದ ಸ್ವಾಮೀಜಿ ಮನವಿ ಮಾಡಿಕೊಂಡ ಮೇರೆಗೆ ಜೈಲಿನ ಅಧಿಕಾರಿಗಳು ಪೂಜೆ-ಧ್ಯಾನಕ್ಕೆ ಅನುವು ಮಾಡಿಕೊಟ್ಟರು. ಮಧ್ಯಾಹ್ನದವರೆಗೂ ಧ್ಯಾನದಲ್ಲಿ ನಿರತರಾದ ನಿತ್ಯಾನಂದ ಸ್ವಾಮೀಜಿ ಧ್ಯಾನ ಮುಗಿಸಿದ ಬಳಿಕ ಜೈಲಿನ ಅಧಿಕಾರಿಗಳು ಊಟದ ವ್ಯವಸ್ಥೆ ಮಾಡಲು ಕೇಳಿದಾಗ ಅದನ್ನು ನಿರಾಕರಿಸಿದರು. ಉಪವಾಸ ಮುರಿದು ಆಹಾರ ಸೇವಿಸುವಂತೆ ಜೈಲಿನ ಅಧಿಕಾರಿಗಳು ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ.

ಸಂಜೆ ವೇಳೆಗೆ ನಿತ್ಯಾನಂದ ಸ್ವಾಮೀಜಿ ತಮಿಳು ಮತ್ತು ಆಂಗ್ಲ ಪತ್ರಿಕೆಗಳನ್ನು ಕೇಳಿ ಪಡೆದರು. ಬೆಳಿಗ್ಗೆಯಿಂದ ಮುಖ ಗಂಟು ಹಾಕಿಕೊಂಡಿದ್ದ ನಿತ್ಯಾನಂದ ಸ್ವಾಮೀಜಿ ಜಾಮೀನು ಸಿಕ್ಕ ವಿಚಾರ ತಿಳಿಯುತ್ತಿದ್ದಂತೆ ಮಂದಸ್ಮಿತರಾದರು. ಜೈಲಿನ ಅಧಿಕಾರಿಗಳ ಒತ್ತಾಯದ ಮೇರೆಗೆ ಸಂಜೆ ಉಪ ವಾಸ ಅಂತ್ಯಗೊಳಿಸಿ, ಹಣ್ಣಿನ ರಸ ಸೇವಿಸಿದರು.

ರಾಮನಗರದಿಂದ ಜಾಮೀನಿನ ಪ್ರತಿ ರಾತ್ರಿ 9.15 ರ ಸುಮಾರಿಗೆ ಕೇಂದ್ರ ಕಾರಾಗೃಹ ತಲುಪಿದ ನಂತರ ನಿತ್ಯಾನಂದ ಸ್ವಾಮೀಜಿ ಅವರನ್ನು ಬಿಡುಗಡೆ ಮಾಡಲಾಯಿತು. ಬಳಿಕ ಖಾಸಗಿ ವಾಹನದಲ್ಲಿ ನಿತ್ಯಾನಂದ ಸ್ವಾಮೀಜಿ ಅವರನ್ನು ಕರೆದೊಯ್ಯ ಲಾಯಿತು. ಕೇಂದ್ರ ಕಾರಾಗೃಹದಿಂದ ನಿತ್ಯಾನಂದ ಸ್ವಾಮೀಜಿ ಅವರನ್ನು ಕರೆದೊಯ್ಯುತ್ತಿದ್ದಂತೆ ಸಾರ್ವಜನಿಕರು ನೋಡಲು ಮುಗಿಬಿದ್ದರು. ಕೇಂದ್ರ ಕಾರಾಗೃಹದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.