ADVERTISEMENT

ದಸರಾ ಆಹ್ವಾನ ಪತ್ರಿಕೆ ಅಂತಿಮ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 8:51 IST
Last Updated 19 ಸೆಪ್ಟೆಂಬರ್ 2013, 8:51 IST

ಮೈಸೂರು: ದಸರಾ ಮಹೋತ್ಸವದ ಆಹ್ವಾನ ಪತ್ರಿಕೆ ಬಹುತೇಕ ಅಂತಿಮವಾಗಿದ್ದು, 22 ಕಾರ್ಯಕ್ರಮಗಳನ್ನು ಒಳಗೊಂಡ ಏಕರೂಪದ ಆಮಂತ್ರಣ ಪತ್ರಿಕೆ ಸಿದ್ಧಪಡಿಸಲಾಗುತ್ತಿದೆ ಎಂದು ಪಾಲಿಕೆಯ ಹೆಚ್ಚುವರಿ ಆಯುಕ್ತ ರಾಜು ತಿಳಿಸಿದರು.

ಪಾಲಿಕೆಯ ಸಭಾಂಗಣದಲ್ಲಿ ಬುಧವಾರ ನಡೆದ ದಸರಾ ಸ್ವಾಗತ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಆಹ್ವಾನ ಪತ್ರಿಕೆಯ ಮುದ್ರಣಕ್ಕೆ ಟೆಂಡರ್‌ ಕರೆಯಲಾಗಿತ್ತು. ಟೆಂಬರ್‌ನಲ್ಲಿ ಭಾಗವಹಿಸಿದ  ಒಬ್ಬರಿಗೆ ತಾಂತ್ರಿಕ ಅರ್ಹತೆ ಇರಲಿಲ್ಲ. ಮುದ್ರಣಕ್ಕೆ ಮೀಸಲಿಟ್ಟಿರುವ ರೂ 6 ಲಕ್ಷ ಅನುದಾನ ಇನ್ನೂ ಕೈಸೇರಿಲ್ಲ. ಚಾಮುಂಡಿಬೆಟ್ಟದಲ್ಲಿ ನಡೆಯುವ ದಸರಾ ಉದ್ಘಾಟನೆ, ವಸ್ತುಪ್ರದರ್ಶನ, ಫಲಪುಷ್ಪ ಪ್ರದರ್ಶನ, ಕವಿಗೋಷ್ಠಿ, ಜಂಬೂ ಸವಾರಿ, ಪಂಜಿನ ಕವಾಯತು ಮೈದಾನ ಸೇರಿದಂತೆ ಎಲ್ಲ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭಗಳು, ಮುಖ್ಯಮಂತ್ರಿಗಳ ಸಂದೇಶ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಣವಾಗಲಿವೆ ಎಂದು ಮಾಹಿತಿ ನೀಡಿದರು.

ಮೇಯರ್‌ ಎನ್‌.ಎಂ. ರಾಜೇಶ್ವರಿ, ಪಾಲಿಕೆ ಆಯುಕ್ತ ಪಿ.ಜಿ. ರಮೇಶ್‌, ಸಮಿತಿಯ ಉಪಾಧ್ಯಕ್ಷರಾದ ಮಾಜಿ ಮೇಯರ್‌ ಅನಂತು, ಸಮಿತಿಯ ಸದಸ್ಯರಾದ ರಾಮಶೇಷ, ಕೃಷ್ಣೇಗೌಡ, ನಾಗೇಶ್‌, ಚಂದ್ರಶೇಖರ್‌, ಭವಾನಿ ಶಂಕರ್‌ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.