ADVERTISEMENT

ದುರಸ್ತಿ ಕಾಣದ ನಾಲೆ: ರೈತರು ಕಂಗಾಲು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 9:05 IST
Last Updated 3 ಸೆಪ್ಟೆಂಬರ್ 2011, 9:05 IST

ಹುಣಸೂರು: ತಾಲ್ಲೂಕಿನ ಹುಸೇನಪುರ ಮತ್ತು ಸಿರಿಯೂರು ನಾಲಾ ಅಚ್ಚುಕಟ್ಟು ಪ್ರದೇಶದ ರೈತರು ಮುಂಗಾರು ಕೃಷಿಗಾಗಿ ಗದ್ದೆಯನ್ನು  ಹದಗೊಳಿಸಿ ಭತ್ತ ನಾಟಿ ಮಾಡುವ ಕಾರ್ಯ ಆರಂಭಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಆದರೆ ಸಣ್ಣ ನೀರಾವರಿ ಇಲಾಖೆ ಶಿಥಿಲಗೊಂಡಿರುವ   ನಾಲೆಗಳ ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳದೆ 1300 ಎಕರೆ ಪ್ರದೇಶದ ರೈತರು ಆತಂಕಗೊಂಡಿದ್ದಾರೆ.

ಲಕ್ಷ್ಮಣತೀರ್ಥ ನದಿಯ ತೊಂಡಾಳು ಅಣೆಕಟ್ಟೆಯಿಂದ ಸುಮಾರು 16 ಕಿ.ಮೀ ದೂರ ಸಾಗುವ ಹುಸೇನಪುರ ಮತ್ತು ಸಿರಿಯೂರು ನಾಲೆಯಲ್ಲಿ ಸಂಪೂರ್ಣ ಹೂಳು ತುಂಬಿ ನೀರು ಹರಿಯುವುದು ಕಷ್ಟವಾಗಿದೆ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಗೆ ದೂರು ನೀಡಿದ್ದರೂ ಹೂಳು ತೆಗೆಯುವ ಕಾರ್ಯಕ್ಕೆ ಕೈಹಾಕಿಲ್ಲ. ಇದರಿಂದಾಗಿ ಜಂಗಲ್ ಬೆಳೆದು ನಿಂತಿದೆ.

ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸೇರಿದ ಅತಿ ಹೆಚ್ಚು ಅಚ್ಚುಕಟ್ಟು ಪ್ರದೇಶವಿದ್ದು, ಈ ಪ್ರದೇಶಕ್ಕೆ ನೀರು ಸಮರ್ಪಕವಾಗಿ ತಲುಪುತ್ತಿದೆಯೇ ಇಲ್ಲವೋ ಎನ್ನುವುದನ್ನು ನೋಡಿಕೊಳ್ಳಲು ಒಬ್ಬ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. `ಮೂರು ವರ್ಷದಿಂದ ನಾಲೆಯಲ್ಲಿ  ಹೂಳು ತೆಗೆಯದೇ ಇರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಸಂಕಷ್ಟ ಪಡುವಂತಾಗಿದೆ~ ಎಂದು ಕಾಳೇಗೌಡನಕೊಪ್ಪಲಿನ ಚಂದ್ರೇಗೌಡ ಬೇಸರ ವ್ಯಕ್ತಪಡಿಸಿದರು.

ಸೇತುವೆ ಶಿಥಿಲ:
ಹುಸೇನ್‌ಪುರ ನಾಲೆಯ 5.6 ಕಿ.ಮೀನಲ್ಲಿ ಸೇತುವೆ ಕುಸಿದು ವರ್ಷ ಉರುಳಿದೆ. ನಾಲೆ ಮೇಲುಸೇತುವೆ ರಿಪೇರಿ ಮಾಡುವ ಕೆಲಸ ಇಲಾಖೆ  ಕೈಗೆತ್ತಿಕೊಳ್ಳದೆ ಯಾವುದೇ ಕ್ಷಣದಲ್ಲಾದರೂ ಸೇತುವೆ ಕುಸಿಯುವ ಸಾಧ್ಯತೆಗಳಿವೆ ಎನ್ನುವುದು ಇಲ್ಲಿನ ರೈತರ ಅಭಿಪ್ರಾಯ. ಹುಣಸೂರು  ಉಪವಿಭಾಗದಲ್ಲಿದ್ದ ಸಣ್ಣ ನೀರಾವರಿ ಇಲಾಖೆಯನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿಗೆ ಸ್ಥಳಾಂತರಗೊಳಿಸಲಾಗಿದ್ದು, ಸಣ್ಣ  ನೀರಾವರಿ ಅಚ್ಚುಕಟ್ಟು ಪ್ರದೇಶದ ರೈತರ ಗೋಳು ಕೇಳುವವರಿಲ್ಲ ಎನ್ನುತ್ತಾರೆ ಶಾನುಭೋಗನಹಳ್ಳಿ ರೈತ ಪುಟ್ಟರಾಮೇಗೌಡ.

`ಅಚ್ಚುಕಟ್ಟು ಪ್ರದೇಶದ ಸಣ್ಣ ಪುಟ್ಟ ಕಾಮಗಾರಿಗಳಿಗೂ ಮೈಸೂರು ವಿಭಾಗೀಯ ಕಚೇರಿಗೆ ಅಲೆಯಬೇಕಾಗಿದೆ. ತಾಲ್ಲೂಕಿನ ಸಹಾಯಕ  ಎಂಜಿನಿಯರ್ ನಾಲೆ ಏರಿ ಮೇಲೆ ಬರುವುದು ಕನಸಾಗಿದ್ದು, ದುರಸ್ತಿಯೂ ಕನಸಾಗಿದೆ~ ಎನ್ನುತ್ತಾರೆ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.