ADVERTISEMENT

ನಾಮಪತ್ರ ಸಲ್ಲಿಕೆಗೆ ಮುನ್ನ ಸ್ವಗ್ರಾಮದಲ್ಲಿ ಸಿ.ಎಂ ದೇಗುಲ ಭೇಟಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 10:37 IST
Last Updated 21 ಏಪ್ರಿಲ್ 2018, 10:37 IST

ವರುಣಾ: ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆಗೂ ಮುನ್ನ ಶುಕ್ರವಾರ ಸ್ವಗ್ರಾಮ ಸಿದ್ದರಾಮನಹುಂಡಿಗೆ ಭೇಟಿ ನೀಡಿದ್ದರು.

ಬೆಳಿಗ್ಗೆ 11.30ಕ್ಕೆ ಸಿದ್ದರಾಮ ಹುಂಡಿಗೆ ಬಂದ ಅವರು ಸಿದ್ದರಾಮೇಶ್ವರ, ಚಿಕ್ಕಮ್ಮ, ರಾಮ ಮಂದಿರ ಹಾಗೂ ದಂಡಿಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ಮಂಗಳಾರತಿ ಮಾಡಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು.

ಗ್ರಾಮದಲ್ಲಿ ಹಿತೈಷಿಗಳು, ಮುಖಂಡರು, ಕಾರ್ಯಕರ್ತರು ಸಂಬಂಧಿಗಳು ತಂದೆ–ಮಗನಿಗೆ ಸ್ವಾಗತಿಸಿ ಗುಲಾಬಿ ಹಾರ ಹಾಕಿ, ಮೈಸೂರು ಪೇಟಾ ತೊಡಿಸಿ ಸಂಭ್ರಮಿಸಿದರು. ರಾಮಮಂದಿರ ರಸ್ತೆಯಲ್ಲಿ ಸಂಚರಿಸಿ ಕೆಲ ಪ್ರಮುಖರನ್ನು ಮಾತನಾಡಿಸಿದರು.

ADVERTISEMENT

‘ಸಿದ್ದರಾಮಯ್ಯ ಅವರು ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ಈ ದೇವಸ್ಥಾನಗಳಿಗೆ ಭೇಟಿ ನೀಡಿ ಆಶೀರ್ವಾದ ಪರಿಪಾಠ ಬೆಳಸಿ ಕೊಂಡಿದ್ದಾರೆ’ ಎಂದು ಮುಖ್ಯಮಂತ್ರಿ ಕುಟುಂಬದ ಸದಸ್ಯರಾದ ಬಸವರಾಜು ಹೇಳಿದರು.

ನಂತರ ಹೊಸಳ್ಳಿಯ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು, ಕಾರ್ಯಕರ್ತರು ಸೇರಿದ್ದರು. ನೂಕುನುಗ್ಗಲು ಉಂಟಾಗಿತ್ತು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮರೀಗೌಡ, ಬಿ.ಎಂ.ರಾಮು, ಜಿಲ್ಲಾ ಪಂಚಾಯಿತಿ ಸದಸ್ಯೆ ಭಾಗ್ಯಾ, ವರುಣಾ ಮಹೇಶ್ ಇನ್ನಿತರು ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.